ಹುಣಸಗಿ, ಕೆಂಭಾವಿಯಲ್ಲಿ ಡಿಸಿಸಿ ಬ್ಯಾಂಕ್ ಆರಂಭಿಸಲು ಆಗ್ರಹ

KannadaprabhaNewsNetwork |  
Published : May 29, 2024, 12:53 AM IST
ಸುರಪುರ ನಗರದ ಡಿಸಿಸಿ ಬ್ಯಾಂಕ್ ಕಚೇರಿ ಎದುರು ಹುಣಸಗಿ ಮತ್ತು ಕೆಂಭಾವಿಯಲ್ಲಿ ನೂತನ ಡಿಸಿಸಿ ಶಾಖೆಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಸದಸ್ಯರು ಪ್ರತಿಭಟಿಸಿದರು.  | Kannada Prabha

ಸಾರಾಂಶ

ಸುರಪುರ ನಗರದ ಡಿಸಿಸಿ ಬ್ಯಾಂಕ್ ಕಚೇರಿ ಎದುರು ಹುಣಸಗಿ ಮತ್ತು ಕೆಂಭಾವಿಯಲ್ಲಿ ನೂತನ ಡಿಸಿಸಿ ಶಾಖೆಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಸದಸ್ಯರು ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ಮಳೆಗಾಲ ಆರಂಭವಾಗಿ ಬಿತ್ತನೆಗೆ ಹಣಕಾಸಿಗಾಗಿ ಸಾಲ ಪಡೆಯಲು ಸುರಪುರದ ಡಿಸಿಸಿ ಬ್ಯಾಂಕ್‌ ಶಾಖೆಗೆ ಆಗಮಿಸಿದ್ದ ಹದನೂರು ಗ್ರಾಮದ ಹಿರಿಯ ರೈತ ಕುಸಿದು ಬಿದ್ದ ಘಟನೆ ಸೋಮವಾರ ಸಂಜೆ ನಗರದಲ್ಲಿ ನಡೆದಿದೆ.

ಹಣಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದ ಬಸವಂತಪ್ಪ ಮಹಾದೇವಪ್ಪ ಅಂಗಡಿ ನಿತ್ರಾಣಗೊಂಡು ನೆಲಕ್ಕೆ ಬಿದ್ದಿದ್ದಾರೆ. ಬ್ಯಾಂಕಿನ ಸಿಬ್ಬಂದಿ ತಕ್ಷಣವೇ ಆ್ಯಂಬುಲೆನ್ಸ್ ಕರೆಯಿಸಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದು, ಈಗ ಅವರು ಸುಧಾರಿಸಿಕೊಂಡಿದ್ದಾರೆ.

ಹುಣಸಗಿ ಮತ್ತು ಸುರಪುರ ಅವಳಿ ತಾಲೂಕಿಗೆ ಡಿಸಿಸಿ ಬ್ಯಾಂಕ್ ಶಾಖೆ ಒಂದೇ ಇದೆ. ಸಾವಿರಾರು ರೈತರಿಗೆ ಇರುವ ಒಂದು ಬ್ಯಾಂಕಿನಿಂದ ಸಾಲ ಕೊಡಲು ಸಾಧ್ಯವಾಗುವುದಿಲ್ಲ. ರೈತರು ಹೆಚ್ಚಾಗಿ ಸರದಿ ಸಾಲಿನಲ್ಲಿ ನಿಂತು ಸುಸ್ತಾಗಿ ಕುಸಿದು ಬೀಳುವ ಘಟನೆಗಳು ನಡೆಯುತ್ತಿವೆ, ಹಸಿವು, ಬಾಯಾರಿಕೆಯಲ್ಲೇ ಸರದಿ ನಿಲ್ಲುವುದರಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ ಎಂದು ರೈತರು ಹೇಳಿದ್ದಾರೆ.

ಕೆಂಭಾವಿ ಮತ್ತು ಹುಣಸಗಿಯಲ್ಲಿ ಡಿಸಿಸಿ ಬ್ಯಾಂಕ್‌ ಶಾಖೆಗಳನ್ನು ಆರಂಭಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಸಮಿತಿ ಒತ್ತಾಯಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ, ಯಾದಗಿರಿ ಜಿಲ್ಲೆಯಲ್ಲಿ ಸುರಪುರ ತಾಲೂಕು ಅತ್ಯಂತ ದೊಡ್ಡದಾಗಿದೆ. ಅವಳಿ ತಾಲೂಕಿಗೆ ಒಂದೇ ಒಂದು ಸಹಕಾರ ಬ್ಯಾಂಕ್ ಶಾಖೆ ಇದೆ. ಈ ಬ್ಯಾಂಕಿಗೆ ಸುಮಾರು ಐದು ಹೋಬಳಿಗಳು ಬರುತ್ತಿದ್ದು, ಇಷ್ಟೊಂದು ದೊಡ್ಡ ಪ್ರಮಾಣದ ರೈತರ ಖಾತೆಗಳನ್ನು ಒಂದೇ ಬ್ಯಾಂಕ್‌ನಿಂದ ನಿಭಾಯಿಸುವುದಕ್ಕೆ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಹಲವಾರು ಯೋಜನೆಗಳ ಸೌಲಭ್ಯ ಡಿಸಿಸಿ ಬ್ಯಾಂಕ್‌ ಖಾತೆ ಮೂಲಕ ವಿತರಿಸಲಾಗುತ್ತದೆ. ಈ ಹಣ ಪಡೆಯುವುದಕ್ಕೆ ಕೆಂಭಾವಿ, ಹುಣಸಗಿ, ಕೊಡೇಕಲ್, ನಾರಾಯಣಪುರ, ಕಕ್ಕೇರಾ ಭಾಗಗಳಿಂದ ಪ್ರತಿ ದಿನ ಸುಮಾರು 50 ರಿಂದ 80 ಕಿ.ಮೀ. ದೂರದಿಂದ ಬರುತ್ತಾರೆ. ಇವರು ಹಣಕ್ಕಾಗಿ ಬ್ಯಾಂಕಿನ ಮುಂದೆ ಸರದಿ ಸಾಲಿನಲ್ಲಿ ನಿಂತುಕೊಂಡರೂ ಹಣ ಸಿಗುತ್ತಿಲ್ಲ. ಖಾಲಿ ಕೈಯಲ್ಲೇ ವಾಪಸ್ ಹೋಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಸುರಪುರ ಮತ್ತು ಹುಣಸಗಿ ತಾಲೂಕಿನ ಯಾವುದೇ ರೈತರಿಗೆ ತೊಂದರೆಯಾಗದಂತೆ ಕ್ರಮಕ್ಕೆ ಗುಲಬರ್ಗಾ ಮುಖ್ಯಶಾಖೆಯ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಶೀಘ್ರ ಭೇಟಿ ನೀಡಿ ಒಂದು ವಾರದೊಳಗೆ ಕೆಂಭಾವಿ, ಹುಣಸಗಿಯಲ್ಲಿ ಎರಡು ಹೊಸ ಶಾಖೆಗಳನ್ನು ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಸುರಪುರ ಡಿ.ಸಿ.ಸಿ. ಬ್ಯಾಂಕ್‌ನ ಮುಂದೆ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌