ಕನ್ನಡಪ್ರಭ ವಾರ್ತೆ ಮಣಿಪಾಲ
ಮಣಿಪಾಲ ವಿ.ವಿ.ಯು ಮುಕ್ತ ಕಲೆಗಳು (ಲಿಬರಲ್ ಆರ್ಟ್ಸ್) ಮತ್ತು ಸಾಮಾಜಿಕ ವಿಜ್ಞಾನಗಳ (ಸೋಶಿಯಲ್ ಸಾಯನ್ಸ್) ಅಧ್ಯಯನವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಂಡಿದ್ದು, ಈ ದಿಕ್ಕಿನಲ್ಲಿ ಪ್ರಯತ್ನ ಆರಂಭಗೊಂಡಿದೆ ಎಂದು ಮಾಹೆ ವಿಶ್ವವಿದ್ಯಾಲಯದ ಸಹಕುಲಪತಿ ಡಾ. ಮಧು ವೀರರಾಘವನ್ ಹೇಳಿದ್ದಾರೆ.ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್‌ನ ‘ಸರ್ವೋದಯ’ ವಾರ್ಷಿಕೋತ್ಸವ ಮತ್ತು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಸಂಶೋಧನೆ ಎನ್ನುವುದು ಎಲ್ಲ ಜ್ಞಾನಶಾಖೆಗಳ ಮೂಲಮಂತ್ರವಾಗಬೇಕಾಗಿದ್ದು, ಇದು ಕಲೆ ಮತ್ತು ಸಾಮಾಜಿಕ ವಿಜ್ಞಾನಗಳ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ಈ ನಿಟ್ಟಿನಲ್ಲಿ ಗಾಂಧಿಯನ್ ಸೆಂಟರ್‌ನ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಇಲ್ಲಿಯ ವಿದ್ಯಾರ್ಥಿಗಳ ಸಂಶೋಧನೆಗಳು, ಮುಕ್ತಾಯಗೊಂಡ ಎರಡು ತಿಂಗಳ ಸಂಗೀತ ಮತ್ತು ನೃತ್ಯ ಶಿಕ್ಷಣವನ್ನು ಶ್ಲಾಘಿಸಿದರು.ಜಿಸಿಪಿಎಎಸ್‌ನ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಇಲ್ಲಿಯ ಕೋರ್ಸ್‌ಗಳಾದ ಏಕಾಸೊಫಿ, ಏಸ್ತೆಟಿಕ್ಸ್, ಪೀಸ್ ಸ್ಟಡೀಸ್ ಹಾಗೂ ಆರ್ಟ್ ಮೀಡಿಯಾಗಳನ್ನು ವಿವರಿಸಿದರು.
ಎರಡು ತಿಂಗಳ ಭರತನಾಟ್ಯ ಶಿಕ್ಷಣವನ್ನು ನೀಡಿದ ನೃತ್ಯಕಲಾವಿದೆ ಡಾ. ಭ್ರಮರಿ ಶಿವಪ್ರಕಾಶ್ ಮತ್ತು ಸಂಗೀತ ಕಲಾವಿದೆ ಶ್ರಾವ್ಯ ಬಾಸ್ರಿ ಮಾತನಾಡಿದರು.ಕಾರ್ಯಾಗಾರದಲ್ಲಿ ಪಾಲ್ಗೊಂಡವರು ಈ ಕುರಿತು ಸಂತಸ ವ್ಯಕ್ತಪಡಿಸಿದರು ಮತ್ತು ತಾವು ಕಲಿತ ನೃತ್ಯ ಮತ್ತು ಸಂಗೀತವನ್ನು ಈ ಸಂದರ್ಭದಲ್ಲಿ ಪ್ರಸ್ತುತ ಪಡಿಸಿದರು. ವಿದ್ಯಾರ್ಥಿಗಳಾದ ವೆಲಿಕಾ, ಶ್ರವಣ್, ಚಿನ್ಮಯಿ, ಸಾತ್ವಿಕ್, ಆಕರ್ಷಿಕ ಮತ್ತು ಆಲಿಸ್ ಈ ಸಂದರ್ಭದಲ್ಲಿ ಸಾಹಿತ್ಯ, ಸಿನಿಮಾ, ನಾಟಕ, ರಾಜಕೀಯ ಇತ್ಯಾದಿ ವಿಷಯಗಳ ಕುರಿತು ತಮ್ಮ ಸಂಶೋಧನೆ ಮಂಡಿಸಿದರು.
ಜಿಯೋಪೊಲಿಟಿಕ್ಸ್ ಮುಖ್ಯಸ್ಥೆ ಡಾ. ವಿಜಯಲಕ್ಷ್ಮಿ, ಡಾ. ಸುಧೀರ್ ರೆಡ್ಡಿ, ಡಾ. ರವೀಂದ್ರನಾಥನ್, ಡಾ. ರೇಸ್ಮಿ ಭಾಸ್ಕರನ್ ಮತ್ತು ಹಲವು ಕಲಾಸಕ್ತರು ಭಾಗವಹಿಸಿದ್ದರು. ಗೌತಮಿ ಕಾಕತ್ಕರ್ ಕಾರ್ಯಕ್ರಮ ನಿರ್ವಹಿಸಿದರು.