ನರಗುಂದ: ಪಟ್ಟಣದ ಲಿಂಗೈಕ್ಯ ಎಫ್.ಎಂ.ಹಸಬಿ ಮತ್ತು ದಿವಂಗತ ಜಗನ್ನಾಥ್ ರಾವ್ ಜೋಶಿ ರೈಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳು ಹೊಸ ರೈಲ್ವೆ ಮಾರ್ಗ ಪ್ರಾರಂಭ ಮಾಡಬೇಕೆಂದು ಸ್ಥಳೀಯ ಶಾಸಕ ಸಿ.ಸಿ. ಪಾಟೀಲರಿಗೆ ಮನವಿ ಸಲ್ಲಿಸಿದರು.
ರೈಲ್ವೆ ಹೋರಾಟ ಸಮಿತಿ ಮುಖಂಡ ಚನ್ನು ನಂದಿ ಮಾತನಾಡಿ, ಈಗಾಗಲೇ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ಸಂಸದರಾದ ಪಿ.ಸಿ. ಗದ್ದಿಗೌಡರ, ಬಸವರಾಜ ಬೊಮ್ಮಾಯಿ, ರಾಜಶೇಖರ್ ಹಿಟ್ನಾಳ, ಜಗದೀಶ ಶೆಟ್ಟರ, ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಇನ್ನೂ ಹಲವಾರು ಸಂಸದರು, ಶಾಸಕರಿಗೆ ನರಗುಂದಕ್ಕೆ ಹೊಸ ರೈಲ್ವೆ ಮಾರ್ಗ ಪ್ರಾರಂಭ ಮಾಡಬೇಕೆಂದು ಮನವಿ ಸಲ್ಲಿಸಲಾಗಿದೆ. ಸದ್ಯ ಗದಗ ಜಿಲ್ಲೆಯಲ್ಲಿ ನರಗುಂದ ತಾಲೂಕು ಆರ್ಥಿಕವಾಗಿ ವೇಗವಾಗಿ ಬೆಳೆಯುವ ತಾಲೂಕು ಆಗಿದೆ. ಮೇಲಾಗಿ ಘಟಪ್ರಭಾದಿಂದ ಕುಷ್ಟಗಿವರೆಗೆ ಈ ರೈಲ್ವೆ ಮಾರ್ಗ ಪ್ರಾರಂಭ ಮಾಡಿದರೆ ಈ ಭಾಗದ ಭಕ್ತಿಯ ಕ್ಷೇತ್ರಗಳಾದ ಯಲ್ಲಮ್ಮಗುಡ್ಡ, ಗೊಡಚಿ ವೀರಭದ್ರೇಶ್ವರ, ಇಟಗಿ ಭೀಮಾಂಬಿಕದೇವಿ ಸೇರಿದಂತೆ ಮುಂತಾದ ಪುಣ್ಯ ಕ್ಷೇತ್ರಗಳಗೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಈ ಭಾಗಕ್ಕೆ ಬರಲು ಅನುಕೂಲವಾಗುವುದು, ಆದ್ದರಿಂದ ಶಾಸಕ ಸಿ.ಸಿ. ಪಾಟೀಲರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಬೇಗ ಹೊಸ ರೈಲ್ವೆ ಮಾರ್ಗ ಪ್ರಾರಂಭ ಮಾಡಲು ಮುಂದಾಗಬೇಕೆಂದು ಆಗ್ರಹಿಸಿದರು.ಶಾಸಕ ಸಿ.ಸಿ. ಪಾಟೀಲರು ಹೋರಾಟಗಾರರ ಮನವಿ ಸ್ವೀಕರಿಸಿ ಸದ್ಯ ಈ ಭಾಗದಲ್ಲಿ ನರಗುಂದ ಅಭಿವೃದ್ಧಿಗೆ ರೈಲ್ವೆ ಮಾರ್ಗ ಅವಶ್ಯವಿದೆ. ಹಾಗಾಗಿ ಹೊಸ ರೈಲ್ವೆ ಮಾರ್ಗ ಮಾಡಿ ಕೊಡಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತೇನೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಚನ್ನಬಸಪ್ಪ ನಂದಿ, ಉಪಾಧ್ಯಕ್ಷ ಜಿ.ಆರ್.ಕದಂ, ಪ್ರಧಾನ ಕಾರ್ಯದರ್ಶಿ ಮಾರುತಿ ಬೋಸ್ಲೆ, ನಾಗೇಶ ಅಪ್ಪಾಜಿ, ಈರಪ್ಪ ಹುಬ್ಬಳ್ಳಿ, ಶಿವು ಬೆಂಡಿಗೇರಿ, ರಾಘವೇಂದ್ರ ಇದ್ದರು.