ಹೊಸಪೇಟೆ: ಹೊಸಪೇಟೆ ನಗರ ಸೇರಿದಂತೆ ಜಿಲ್ಲಾದ್ಯಂತ ಖಾಸಗಿ ಶಾಲಾ- ಕಾಲೇಜುಗಳಲ್ಲಿ ವಿಪರೀತ ಡೊನೇಷನ್ ಹಾವಳಿ ನಡೆಯುತ್ತಿರುವುದನ್ನು ವಿರೋಧಿಸಿ, ಡಿವೈಎಫ್‌ಐ ಸಂಘಟನೆಯ ಪದಾಧಿಕಾರಿಗಳು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಅತಿಹೆಚ್ಚು ಶುಲ್ಕ ಸಂಗ್ರಹಣೆ ಮಾಡುವ ಶಾಲಾ ಆಡಳಿತ ಮಂಡಳಿಗಳು ಶಾಲಾ ಅಭಿವೃದ್ಧಿ ಎಂದು ಶುಲ್ಕ ಸಂಗ್ರಹಿಸಿ ಶಾಲೆಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಇರುವುದಿಲ್ಲ. ಹೆಸರಿಗೆ ಮಾತ್ರ ಶಾಲಾ ಅಭಿವೃದ್ಧಿ ಫಂಡ್ ಎಂದು ಹಣ ತೆಗೆದುಕೊಳ್ಳುತ್ತಾರೆ. ಸುವ್ಯವಸ್ಥಿತ ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆ, ಮಕ್ಕಳಿಗೆ ಕೂಡಲು ಸರಿಯಾದ ಡೆಸ್ಕ್ ವ್ಯವಸ್ಥೆ, ಆಡುವ ಮೈದಾನ ಇಲ್ಲದೇ ಅವ್ಯವಸ್ಥೆ ಅಗರವಾಗಿದೆ ಎಂದರು.
ಶಾಲಾ ಮಕ್ಕಳು, ಸಿಬ್ಬಂದಿಗೆ ಅನುಗುಣವಾಗಿ ಬಿಲ್ಡಿಂಗ್ ಫಂಡ್ ಹೆಚ್ಚುವರಿಯಾಗಿ ತೆಗೆದುಕೊಂಡರೆ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರತಿ ಶಾಲೆಯಲ್ಲೂ ಡೋನೆಷನ್ ವಿರೋಧಿ ಸಮಿತಿ ರಚನೆ ಮಾಡಬೇಕು. ಪಠ್ಯಪುಸ್ತಕ, ಸಮವಸ್ತ್ರ ಖರೀದಿಯಲ್ಲಿ ಪೋಷಕರು ಬೇಕಾದಲ್ಲಿ ಖರೀದಿ ಮಾಡಲು ಅವಕಾಶ ನೀಡಬೇಕು. ಇವುಗಳ ಖರೀದಿಗೆ ಅಂಗಡಿ ವಿಳಾಸ ನೀಡುವ ಟೋಕನ್ ನೀಡಬಾರದು. ಶುಲ್ಕ ಸಂಗ್ರಹಣೆ ವಿವರದ ಬೋರ್ಡ್ ನ್ನು ಸರ್ಕಾರದ ನಿಯಮದಂತೆ ಎಲ್ಲರಿಗೂ ಕಾಣುವ ರೀತಿಯಲ್ಲಿ ಶಾಲೆಯ ಮುಂಭಾಗದಲ್ಲಿ ಹಾಕಬೇಕು. ಪ್ರತಿ 3 ತಿಂಗಳಿಗೊಮ್ಮೆ ಪೋಷಕರು ಶಾಲಾ ಆಡಳಿತ ಮಂಡಳಿ ಶಾಸಕರ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಬೇಕು ಎಂದು ಡಿವೈಎಫ್‌ಐ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಡಿಗರ ಮಂಜುನಾಥ, ಅಧ್ಯಕ್ಷ ವಿ. ಸ್ವಾಮಿ, ಉಪಾಧ್ಯಕ್ಷ ಬಂಡೆ ತಿರುಕಪ್ಪ, ಕಾರ್ಮಿಕ ಮುಖಂಡ ಎಂ. ಗೋಪಾಲ್, ಸದಸ್ಯರಾದ ಪವನಕುಮಾರ್, ರಾಜೇಶ್, ಅಂಬರೇಶ್ ಸೇರಿದಂತೆ ಇತರರು ಮನವಿಯಲ್ಲಿ ಒತ್ತಾಯಿಸಿದ್ದಾರೆ.