ದರೋಜಿ ಕೆರೆಗೆ ಸೇರುತ್ತಿರುವ ಕಲುಷಿತ ನೀರು ತಡೆಯಲು ಆಗ್ರಹ

KannadaprabhaNewsNetwork |  
Published : Aug 17, 2026, 02:45 AM IST
ಕಂಪ್ಲಿ ಸಮೀಪದ ದರೋಜಿ ಗ್ರಾಪಂ. ಕಾರ್ಯದರ್ಶಿ ಕೆ.ರುದ್ರಪ್ಪ ಅವರಿಗೆ ದಲಿತ ಪ್ಯಾಂಥರ್ಸ್ ಆಫ್ ಇಂಡಿಯಾ ಹಾಗೂ ಸಮಾಜ ಸೇವಾ ಕಾರ್ಯಕರ್ತರ ವೇದಿಕೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಪ್ರಮುಖರಾದ ನಾಗರಾಜ ಭೋವಿ, ಟಿ.ಎಚ್.ಎಂ. ರಾಜಕುಮಾರ್, ಎಂ.ಎಸ್. ಗುರುಮೂರ್ತಿ, ವಿ. ಮಾಯಣ್ಣ ಇತರರು ಇದ್ದರು. | Kannada Prabha

ಸಾರಾಂಶ

ಐತಿಹಾಸಿಕ ದರೋಜಿ ಕೆರೆಗೆ ಕೈಗಾರಿಕೆಗಳ ಕಲುಷಿತ ನೀರು ಸೇರುತ್ತಿರುವುದನ್ನು ತಡೆಯುವ ಜತೆಗೆ ಕೆರೆಯ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ಪ್ಯಾಂಥರ್ಸ್ ಆಫ್ ಇಂಡಿಯಾ ಹಾಗೂ ಸಮಾಜ ಸೇವಾ ಕಾರ್ಯಕರ್ತರ ವೇದಿಕೆ ಪದಾಧಿಕಾರಿಗಳು ದರೋಜಿ ಗ್ರಾಪಂ ಕಾರ್ಯದರ್ಶಿ ಕೆ. ರುದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಕಂಪ್ಲಿ: ಐತಿಹಾಸಿಕ ದರೋಜಿ ಕೆರೆಗೆ ಕೈಗಾರಿಕೆಗಳ ಕಲುಷಿತ ನೀರು ಸೇರುತ್ತಿರುವುದನ್ನು ತಡೆಯುವ ಜತೆಗೆ ಕೆರೆಯ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ಪ್ಯಾಂಥರ್ಸ್ ಆಫ್ ಇಂಡಿಯಾ ಹಾಗೂ ಸಮಾಜ ಸೇವಾ ಕಾರ್ಯಕರ್ತರ ವೇದಿಕೆ ಪದಾಧಿಕಾರಿಗಳು ದರೋಜಿ ಗ್ರಾಪಂ ಕಾರ್ಯದರ್ಶಿ ಕೆ. ರುದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.

ದಲಿತ ಪ್ಯಾಂಥರ್ಸ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜ ಭೋವಿ ಮಾತನಾಡಿ, ನೀರಾವರಿಗೆ ಆದ್ಯತೆ ನೀಡುವ ಉದ್ದೇಶದಿಂದ 1797ರ ಅವಧಿಯಲ್ಲಿ ದರೋಜಿ ಕೆರೆ ನಿರ್ಮಿಸಲಾಗಿದೆ. ನಾರಿಹಳ್ಳದಿಂದ ಹರಿದು ಬರುವ ನೀರು ಕೆರೆಗೆ ಸೇರುತ್ತದೆ. ಕೆರೆಯ ಏರಿ ಸುಮಾರು ಎರಡೂವರೆ ಮೈಲಿ ಉದ್ದವಿದ್ದು, 4.57 ಮೀಟರ್ ಅಗಲ ಹಾಗೂ 45 ಅಡಿ ಎತ್ತರ ಹೊಂದಿದೆ. ಜಿಲ್ಲೆಯ ಪ್ರಮುಖ ಹಾಗೂ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ದರೋಜಿ ಕೆರೆಯಿಂದ ಸುತ್ತಮುತ್ತಲಿನ 10 ಗ್ರಾಮಗಳ ಸುಮಾರು 3,222 ಎಕರೆ ಕೃಷಿ ಭೂಮಿಗೆ ಏಳು ವಡ್ಡು ಕಟ್ಟೆಗಳ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ.

1994-95ನೇ ಸಾಲಿನಲ್ಲಿ ವಿಜಯನಗರ ಉಕ್ಕು ಕಾರ್ಖಾನೆ ಸ್ಥಾಪನೆ ಸಂದರ್ಭದಲ್ಲಿ ದರೋಜಿ ಕೆರೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ಭರವಸೆ ನೀಡಲಾಗಿತ್ತು. ಆದರೆ, ಇದೀಗ ಜಿಂದಾಲ್ ಸೇರಿದಂತೆ ವಿವಿಧ ಕೈಗಾರಿಕೆಗಳ ತ್ಯಾಜ್ಯದಿಂದ ಕಲುಷಿತಗೊಂಡ ನೀರು ಕೆರೆಗೆ ಸೇರುತ್ತಿದೆ. ಇದರಿಂದ ಕೆರೆಯ ನೀರು ಮಲಿನಗೊಳ್ಳುತ್ತಿದ್ದು, ಕೃಷಿ ಚಟುವಟಿಕೆ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.

ಕಲುಷಿತ ನೀರಿನಿಂದ ಹೊಲಗದ್ದೆಗಳಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರು ಹಾಗೂ ರೈತರಲ್ಲಿ ಚರ್ಮದ ತುರಿಕೆ ಸೇರಿದಂತೆ ವಿವಿಧ ಚರ್ಮ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಕೆರೆಯ ನೀರನ್ನು ಅಥವಾ ಗದ್ದೆಗಳ ಮಡಿ ನೀರನ್ನು ಸೇವಿಸುವ ಜನರು ಹಾಗೂ ಜಾನುವಾರು ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಆತಂಕವಿದೆ. ಜಲಮಾಲಿನ್ಯದಿಂದ ಮೀನುಗಾರಿಕೆ ವೃತ್ತಿಯನ್ನೇ ಅವಲಂಬಿಸಿರುವ ಕುಟುಂಬಗಳಿಗೂ ತೊಂದರೆಯಾಗಿದ್ದು, ಜಲಚರಗಳ ಅಸ್ತಿತ್ವಕ್ಕೂ ಧಕ್ಕೆಯಾಗಿದೆ ಎಂದು ಹೇಳಿದರು.

ದರೋಜಿ ಕೆರೆಯ ಸಂರಕ್ಷಣೆ ಮತ್ತು ಕಲುಷಿತ ನೀರು ಸೇರ್ಪಡೆ ತಡೆಯುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಕೆರೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಲೋಕಾಯುಕ್ತ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕಲುಷಿತ ನೀರು ಕೆರೆಗೆ ಸೇರುತ್ತಿರುವ ಮೂಲ ಪತ್ತೆ ಹಚ್ಚಬೇಕು. ಒತ್ತುವರಿ ತೆರವುಗೊಳಿಸುವ ಜತೆಗೆ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಕೆರೆಗೆ ಕಲುಷಿತ ನೀರು ಸೇರುತ್ತಿರುವುದನ್ನು ತಡೆಯುವಲ್ಲಿ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈ ಕುರಿತು ಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು. ಒಂದು ತಿಂಗಳೊಳಗೆ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳದಿದ್ದರೆ ರಸ್ತೆ ತಡೆ (ರಸ್ತಾ ರೋಕೋ) ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ನಾಗರಾಜ ಭೋವಿ ಎಚ್ಚರಿಕೆ ನೀಡಿದರು.

ಸಮಾಜ ಸೇವಾ ಕಾರ್ಯಕರ್ತರ ವೇದಿಕೆ ರಾಜ್ಯ ಕಾರ್ಯಾಧ್ಯಕ್ಷ ಟಿ.ಎಚ್.ಎಂ. ರಾಜಕುಮಾರ್, ಪ್ಯಾಂಥರ್ಸ್ ಪದಾಧಿಕಾರಿಗಳಾದ ಎಂ.ಎಸ್. ಗುರುಮೂರ್ತಿ, ವಿ. ಮಾಯಣ್ಣ, ವಿ. ಶರಬಣ್ಣ, ಹಳೆ ದರೋಜಿ ಜಾಫರ್, ಹಳೆ ದರೋಜಿ ಸುರೇಶ್, ಮಾರೇಶ, ಗೋಪಾಲ, ಕಿರಣ್, ಭೀಮ, ಗ್ರಾಪಂ. ಮಾಜಿ ಸದಸ್ಯ ಹೊನ್ನೂರಸ್ವಾಮಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತನಿಖೆ ಬಳಿಕ ಶೂಟೌಟ್‌ ಪ್ರಕರಣಕ್ಕೆ ಸ್ಪಷ್ಟತೆ: ಡಿಕೆಶಿ
ಕಲಾ ಪ್ರಕಾರಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯ: ಪ್ರಭಾಕರ ಜೋಶಿ