ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಅರಣ್ಯ ಅಧಿಕಾರಿಗಳು ಖಾಸಗಿ ಜಮೀನಿನಲ್ಲಿರುವ ಸರ್ಕಾರಿ ಮರಗಳ ಪಟ್ಟಿ ಮಾಡಿ ಕಂದಾಯ ಇಲಾಖೆಗೆ ವರದಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಜಿಲ್ಲೆಯ ಬೆಳೆಗಾರರಲ್ಲಿ ಗೊಂದಲ ಸೃಷ್ಟಿಸಿರುವ ಆದೇಶವನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಬೆಳೆಗಾರರು ಪರಿಸರಕ್ಕೆ ಪೂರಕವಾಗಿ ಮರಗಳನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ. ಯಾವುದೇ ದುರುದ್ದೇಶಕ್ಕೆ ಮರಗಳ ಹನನ ಮಾಡಿಲ್ಲ. ಕೊಡಗಿನ ಜನರ ಪರಿಸರ ಕಾಳಜಿಯಿಂದ ಅರಣ್ಯ ಪ್ರದೇಶ ಮತ್ತು ದೇವರಕಾಡುಗಳು ಸಂರಕ್ಷಿಸಲ್ಪಟ್ಟಿವೆ. ತೋಟ ಮಾಡುವಾಗಲೂ ಮರಗಳನ್ನು ಕಡಿಯುತ್ತಿಲ್ಲ, ಬದಲಿಗೆ ಹಸಿರನ್ನು ಕಾಪಾಡಿಕೊಂಡುಬರಲಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಏಕಾಏಕಿ ಖಾಸಗಿ ಜಮೀನಿನಲ್ಲಿರುವ ಮರಗಳ ಸರ್ವೆ ಕಾರ್ಯಕ್ಕೆ ಆದೇಶ ಮಾಡುವ ಮೂಲಕ ಬೆಳೆಗಾರರಲ್ಲಿ ಆತಂಕವನ್ನು ಸೃಷ್ಟಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಸರ್ಕಾರಕ್ಕೆ ಸಲಹೆ ನೀಡಿ ತಕ್ಷಣ ಆದೇಶವನ್ನು ಹಿಂದಕ್ಕೆ ಪಡೆಯಬೇಕು. ತಪ್ಪಿದಲ್ಲಿ ಜಿಲ್ಲೆಯ ಎಲ್ಲ ಬೆಳೆಗಾರರನ್ನು ಸೇರಿಸಿ ಅರಣ್ಯ ಇಲಾಖೆ ವಿರುದ್ಧ ಹೋರಾಟ ನಡೆಸುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಮಾತನಾಡಿ, ಮುಂದಿನ 24 ಗಂಟೆಯೊಳಗೆ ಸರ್ಕಾರಆದೇಶವನ್ನು ಹಿಂದಕ್ಕೆ ಪಡೆಯುವಂತೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಕ್ರಮ ಕೈಗೊಳ್ಳಬೇಕು ಎಂದು
ಒತ್ತಾಯಿಸಿದರು.ಜಿಲ್ಲೆಯ ಜನರು ಪರಿಸರ ಪ್ರೇಮಿಗಳು, ಹಿರಿಯರು ಮರಗಿಡಗಳನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ, ಅರಣ್ಯ ಇಲಾಖೆಯಿಂದ ಪರಿಸರ ಸಂರಕ್ಷಣೆಯ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ಚಲನ್ ಕುಮಾರ್, ವಿ.ಕೆ.ಲೋಕೇಶ್ ಹಾಗೂ ಜಿಲ್ಲಾ ವಕ್ತಾರ ಬಿ.ಕೆ.ಅರುಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.