ನೆಲಮಂಗಲ: ಕನ್ನಡ ಭಾಷೆ ಮತ್ತು ಸಾಹಿತ್ಯದ ಅನನ್ಯತೆಯನ್ನು ಉಳಿಸಿ, ಬೆಳೆಸುವ ಮಹದಾಸೆಯಿಂದ ಸ್ವಾತಂತ್ರ್ಯ ಪೂರ್ವದಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು ಎಂದು ನೆಲಮಂಗಲ ತಾಲೂಕು ಕಸಾಪ ಅಧ್ಯಕ್ಷ ಬೈರನಹಳ್ಳಿ ಪ್ರಕಾಶ್ ತಿಳಿಸಿದರು.
ಕಸಾಪ ಕನ್ನಡದ ಮಹತ್ವದ ಕವಿಗಳ ಕೃತಿಗಳ ಹಕ್ಕು ಸ್ವಾಮ್ಯ ಹೊಂದಿದೆ. ಕನ್ನಡ ನಿಘಂಟು ರಚನೆ ಮತ್ತು ಪರಿಷ್ಕರಣೆಯಲ್ಲಿ ಮಹತ್ವದ ಸಾಧನೆ ಮಾಡಿದೆ. ಉತ್ತಮ ಗ್ರಂಥಾಲಯ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆಯ ಬೆಳವಣಿಗೆಗೆ, ಅಧ್ಯಯನ ಮತ್ತು ಸಂಶೋಧನೆಗೆ ಸಹಕಾರಿಯಾಗಿದೆ. ಪುಸ್ತಕ ಪ್ರಕಟಣೆ, ವಿಚಾರಸಂಕಿರಣಗಳು, ಸಾಹಿತ್ಯ ಸಮ್ಮೇಳನ, ಹಲವು ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಸಾಧಕರಿಗೆ ನೀಡುವ ಮೂಲಕ ಕಸಾಪ ಕನ್ನಡಿಗರ ಮನಗೆದ್ದಿದೆ. ದತ್ತಿಗಳ ದಾನಿಗಳು, ಆಜೀವ ಸದಸ್ಯರನ್ನು ರಾಜ್ಯದ ಎಲ್ಲೆಡೆ ಹೊಂದಿರುವ ಮೂಲಕ ಇಂದು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆ ಎಂದರು.
ಖ್ಯಾತ ಲೇಖಕರು ಸಾಹಿತಿಗಳಾದ ಮಣ್ಣೇ ಮೋಹನ್ ಮಾತನಾಡಿ, ಕಸಾಪ ಸ್ಥಾಪಕರಾಗಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನಸನ್ನು ನನಸು ಮಾಡುವ ಕೆಲಸವನ್ನು ಪರಿಷತ್ತು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಕನ್ನಡದ ವಿಚಾರಗಳ ಬಗ್ಗೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಹತ್ವದ ಪಾತ್ರ ವಹಿಸಬೇಕಾಗಿದೆ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಪ್ರತಿನಿಧಿ ಕೃಷ್ಣಮೂರ್ತಿ ಮಾತನಾಡಿ, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ಎಲ್ಲರಿಗೂ ತಲುಪಬೇಕಾಗಿದೆ. ಶತಮಾನ ಪೂರೈಸಿ ಮುನ್ನಡೆಯುತ್ತಿರುವ ಈ ಸಂಸ್ಥೆ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸೀಮಿತಗೊಳ್ಳದೆ, ಕನ್ನಡಿಗರ ಬದುಕು ಬವಣೆಗಳ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಕನ್ನಡಿಗರ ಮನೆಮನೆಗಳಲ್ಲಿ ಕನ್ನಡ ಪ್ರಜ್ಞೆ ಮೂಡಿಸಬೇಕಿದೆ ಎಂದರು.
ಸಿದ್ದಗಂಗಾ ಕಾಲೇಜಿನ ಉಪನ್ಯಾಸಕ ಗಂಗರಾಜು, ದೊಡ್ಡಬಳ್ಳಾಪುರ ತಾಲೂಕು ಕಸಾಪ ಜಿಲ್ಲಾ ಪ್ರತಿನಿಧಿ ರಾಮಕೃಷ್ಣಯ್ಯ, ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್, ಕಸಬಾ ಹೋಬಳಿ ಅಧ್ಯಕ್ಷ ಬೂಸಂದ್ರ ನಂಜೇಗೌಡ, ಗೌರವ ಕಾರ್ಯದರ್ಶಿ ಸದಾನಂದ ಆರಾಧ್ಯ, ವೀರಸಾಗರ ಭಾನುಪ್ರಕಾಶ್, ನಗರಾಧ್ಯಕ್ಷ ಮಲ್ಲೇಶ್, ಬೂದಿಹಾಳ್ ಕಿಟ್ಟಿ, ವಕೀಲ ಕನಕರಾಜು ಉಪಸ್ಥಿತರಿದ್ದರು.ಪೊಟೊ-6ಕೆಎನ್‌ಎಲ್‌ಎಮ್1-ನೆಲಮಂಗಲದಲ್ಲಿ ತಾಲೂಕು ಕಸಾಪ ಆಯೋಜಿಸಿದ್ದ ಕಸಾಪ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಕಸಾಪ ಅಧ್ಯಕ್ಷ ಬೈರನಹಳ್ಳಿ ಪ್ರಕಾಶ್ ಉದ್ಘಾಟಿಸಿದರು.