ಕನ್ನಡಪ್ರಭ ವಾರ್ತೆ ಹಾವೇರಿ
ಮೇ ೭ರಂದು ಮಂಗಳವಾರ ಬೆಳಗ್ಗೆ ೭ರಿಂದ ಸಂಜೆ ೬ರ ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಮತದಾರರಿಗೆ ಎಡಗೈ ತೋರುಬೆರಳಿಗೆ ಅಳಿಸಲಾಗದ ಶಾಹಿ ಹಾಕಲಾಗುವುದು. ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯ ಮತದಾನಕ್ಕೆ ಜಿಲ್ಲಾಡಳಿತ ಎಲ್ಲ ಸಿದ್ಧತೆ ಹಾಗೂ ಸೌಲಭ್ಯಗಳನ್ನು ಕಲ್ಪಿಸಿದ್ದು. ಮತದಾರರು ನಿರ್ಭಿಡೆಯಿಂದ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಗೆಲ್ಲಿಸಲು ಮನವಿ ಮಾಡಿಕೊಳ್ಳಲಾಗಿದೆ.
ಮಸ್ಟರಿಂಗ್ ಪ್ರಕ್ರಿಯೆ ಹಾಗೂ ಮತಗಟ್ಟೆಗಳ ಸಿದ್ಧತೆ ಕುರಿತು ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ, ಜಿಪಂ ಸಿಇಒ ಅಕ್ಷಯ್ ಶ್ರೀಧರ್, ಸಹಾಯಕ ಜಿಲ್ಲಾ ಚುನಾವಣಾಧಿಕಾರಿ ಪೂಜಾರ ವೀರಮಲ್ಲಪ್ಪ ಭೇಟಿ ನೀಡಿ, ಪರಿಶೀಲಿಸಿ ಅಗತ್ಯ ಮಾರ್ಗದರ್ಶನ ನೀಡಿದರು.ಸುಗಮ ಮತದಾನಕ್ಕಾಗಿ ಲೋಕಸಭಾ ವ್ಯಾಪ್ತಿಯಲ್ಲಿ (ಹಾವೇರಿ-ಗದಗ ಜಿಲ್ಲೆ) ೧೯೮೨ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ೧೬೧೪ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಅಳವಡಿಸಲಾಗಿದೆ. ೩೯ ದುರ್ಬಲ, ೩೭೦ ಸೂಕ್ಷ್ಮ ಮತಗಟ್ಟೆಗಳು ಹಾಗೂ ೧೨ ಆರ್ಥಿಕ ಸೂಕ್ಷ್ಮತೆ ಒಳಗೊಂಡ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಮತದಾನ ಪ್ರಕ್ರಿಯೆಗಾಗಿ ವಿವಿಧ ಹಂತದ ೬೯೫೮ ಜನ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಸುರಕ್ಷತೆ ಹಾಗೂ ಭದ್ರತೆಗಾಗಿ ೨೫೨೫ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಒಳಗೊಂಡಂತೆ ೯೪೮೩ ಜನರನ್ನು ನಿಯೋಜಿಸಲಾಗಿದೆ ಹಾಗೂ ಮೂರು ಕೇರಳ ಪೊಲೀಸ್ ಪೋರ್ಸ್ ಪಡೆ ಕಾರ್ಯ ನಿರ್ವಹಿಸಲಿದೆ.
ಬೆಳಗ್ಗೆ ೭ರಿಂದ ಸಂಜೆ ೬ರ ವರೆಗೆ ಮತದಾನ ಅವಧಿ ನಿಗದಿಪಡಿಸಲಾಗಿದೆ. ಮತದಾನ ಮಾಡಲು ಅನುಕೂಲವಾಗುವಂತೆ ಮೇ ೭ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ.
ಕುಡಿಯುವ ನೀರಿನ ಸೌಲಭ್ಯ, ನೆರಳಿನ ಸೌಲಭ್ಯ, ವಿಕಲಚೇತನರಿಗೆ, ಹಿರಿಯ ಮತದಾರರಿಗೆ ಅನುಕೂಲವಾಗಲು ರ‍್ಯಾಂಪ್ ವ್ಯವಸ್ಥೆ ಹಾಗೂ ವ್ಹೀಲ್ ಚೇರ್ ವ್ಯವಸ್ಥೆ ಹಾಗೂ ಶೌಚಾಲಯ ವ್ಯವಸ್ಥೆ, ಮಕ್ಕಳ ಪಾಲನಾ ಕೇಂದ್ರ, ಬೂತ್‌ಕನ್ನಡಿ, ಸೆಲ್ಫಿ ಕಾರ್ನರ್ ವ್ಯವಸ್ಥೆ ಮಾಡಲಾಗಿದೆ.
ಮತಗಟ್ಟೆ ವ್ಯಾಪ್ತಿಯ ೧೦೦ ಮೀಟರ್ ವ್ಯಾಪ್ತಿಯಲ್ಲಿ ಚುನಾವಣಾ ಸಂಬಂಧಿ ಪೋಸ್ಟರ್, ಬ್ಯಾನರ್ ಹಾಕುವಂತಿಲ್ಲ.
ಅಭ್ಯರ್ಥಿ ಹಾಗೂ ಅಭ್ಯರ್ಥಿಯ ಪರ ಏಜೆಂಟರು ಮತದಾನಕ್ಕೆ ವಾಹನದಲ್ಲಿ ಮತದಾರರನ್ನು ಮನೆಯಿಂದ ಮತಗಟ್ಟೆಗೆ ಕರೆತರುವುದು ಮತ್ತು ಮರಳಿ ಕರೆದೊಯ್ಯಲು ಅವಕಾಶ ಇರುವುದಿಲ್ಲ.
ಅನುಮತಿಸಲಾದ ವಾಹನಗಳ ಬಳಕೆಗೆ ಮಾತ್ರ ಅವಕಾಶ. ಆದರೆ, ಈ ವಾಹನಗಳಲ್ಲಿ ಮತದಾರರನ್ನು ಕರೆತರುವಂತಿಲ್ಲ.
ಅನುಮತಿಸಲಾದ ಬೂತ್‌ಗಳಿಗೆ ಮಾತ್ರ ಅವಕಾಶ. ಬೂತ್‌ಗಳಿಗೆ ಅನುಮತಿ ಪಡೆದ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷದ ಚುನಾವಣಾ ಬೂತ್ ಮತಗಟ್ಟೆಯಿಂದ ೨೦೦ ಮೀಟರ್ ವ್ಯಾಪ್ತಿಯ ಹೊರಗಿರಬೇಕು.
ಮೊಬೈಲ್ ಪೋನ್, ಕಾರ್ಡಲೆಸ್ ಫೋನ್‌ಗಳನ್ನು ಮತಗಟ್ಟೆಯ ಬಳಸುವಂತಿಲ್ಲ. ಮತಗಟ್ಟೆಯೊಳಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವಂತಿಲ್ಲ.ಚುನಾವಣೆಯ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳುಜಿ.ಜಿ. ಆನಂದಸ್ವಾಮಿ ಗಡ್ಡದೇವರಮಠ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್), ಬಸವರಾಜ ಸೋಮಪ್ಪ ಬೊಮ್ಮಾಯಿ (ಭಾರತೀಯ ಜನತಾ ಪಾರ್ಟಿ), ಖಾಜಾಮೋಹಿದ್ದೀನ್ ಗುಡಗೇರಿ (ಸೋಸಿಯಾಲಿಸ್ಟ್ ಪಾರ್ಟಿ (ಇಂಡಿಯಾ)), ಗಂಗಾಧರ ಬಡಿಗೇರ (ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್)), ತನು ಸಿ ಯಾದವ್ (ಕರ್ನಾಟಕ ರಾಷ್ಟ್ರ ಸಮಿತಿ), ಹೆಚ್.ಕೆ. ನರಸಿಂಹಪ್ಪ (ಸಮಾಜವಾದಿ ಜನತಾ ಪಾರ್ಟಿ (ಕರ್ನಾಟಕ)), ರಶೀದಾ ಬೇಗಂ, (ಇಂಡಿಯನ್ ಮೂಮೆಂಟ್ ಪಾರ್ಟಿ), ವಿಶ್ವನಾಥ ಶೀರಿ (ಏಕಂ ಸನಾತನ ಭಾರತ ದಳ), ಸಚಿನಕುಮಾರ ಕರ್ಜೆಕಣ್ಣನವರ ಉತ್ತಮ ಪ್ರಜಾಕೀಯ ಪಾರ್ಟಿ), ಡಾ. ಗುರಪ್ಪ ಎಚ್. ಇಮ್ರಾಪೂರ (ಪಕ್ಷೇತರ), ಜಗದೀಶ ಬಂಕಾಪೂರ (ಪಕ್ಷೇತರ), ಬಸವರಾಜ ಹಾದಿ (ಪಕ್ಷೇತರ), ರುದ್ರಪ್ಪ ಕುಂಬಾರ (ಪಕ್ಷೇತರ) ಹಾಗೂ ಸುನಂದಾ ಕರಿಯಪ್ಪ ಶಿರಹಟ್ಟಿ (ಪಕ್ಷೇತರ).