ಕನ್ನಡಪ್ರಭ ವಾರ್ತೆ ಮಂಡ್ಯ
ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಬೆಳಕಿಗೆ ಬಂದ ಕೆಲವು ದಿನಗಳವರೆಗೆ ಗಂಭೀರತೆ ಪಡೆದುಕೊಂಡಿರು. ಅದು ತನಿಖಾ ಸಂಸ್ಥೆಗಳಿಗೆ ಒಪ್ಪಿಸಿದ ಬಳಿಕ ಪ್ರಕರಣಗಳು ಏನಾಗುತ್ತವೆ ಎನ್ನುವುದು ಯಾರ ಅರಿವಿಗೂ ಬರುವುದೇ ಇಲ್ಲ. ದಿನಗಳೆದಂತೆ ಜನಮಾನಸದಿಂದ ಅವು ಮರೆಯಾಗಿ ಬಿಡುತ್ತವೆ.
ಮಂಡ್ಯ ತಾಲೂಕಿನ ಹಾಡ್ಯ ಸಮೀಪದ ಆಲೆ ಮನೆಯೊಂದರಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಪ್ರಕರಣ ಬೆಳಕಿಗೆ ಬಂದಿತು. ಅದನ್ನು ಸಿಐಡಿ ತನಿಖಾ ಸಂಸ್ಥೆಗೆ ಒಪ್ಪಿಸಲಾಯಿತೇ ವಿನಃ ಆ ಪ್ರಕರಣ ಸದ್ಯ ಯಾವ ಹಂತದಲ್ಲಿದೆ, ಎಷ್ಟು ಜನರನ್ನು ಬಂಧಿಸಲಾಯಿತು. ಎಷ್ಟು ಜನರಿಗೆ ಶಿಕ್ಷೆಯಾಯಿತು. ತನಿಖೆಯಿಂದ ಕಂಡುಕೊಂಡ ಮಹತ್ವದ ಸಂಗತಿಗಳೇನು. ಪ್ರಕರಣ ಮುಕ್ತಾಯಗೊಂಡಿತೋ, ಇಲ್ಲವೋ ಎನ್ನುವುದು ಯಾರಿಗೂ ಗೊತ್ತೇ ಇಲ್ಲ.ಪ್ರಕರಣಗಳ ತನಿಖೆ ಕುರಿತಂತೆ ತನಿಖಾ ಸಂಸ್ಥೆಗಳು ತೋರುತ್ತಿರುವ ವಿಳಂಬದಿಂದಾಗಿ ಅಂದು ಆಲೆಮನೆಯಲ್ಲಿ ಕಾಣಿಸಿಕೊಂಡು ಹೆಣ್ಣು ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣ ಇಂದು ಆರೋಗ್ಯ ಇಲಾಖೆ ವಸತಿಗೃಹದಲ್ಲೇ ನಡೆಯುತ್ತಿರುವುದು ದಂಧೆ ಕೋರರಿಗೆ ಕಾನೂನಿನ ಬಗ್ಗೆ ಭಯವೇ ಇಲ್ಲದಿರುವುದಕ್ಕೆ ಸಾಕ್ಷಿಯಾಗಿದೆ.
ರಾಜಕೀಯ ಪ್ರಭಾವಕ್ಕೋ, ಪಟ್ಟಭದ್ರರ ಒತ್ತಡಕ್ಕೆ ಮಣಿದು ಪ್ರಕರಣಗಳನ್ನು ಮುಚ್ಚಿ ಹಾಕುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದು. ಈ ಪ್ರಕರಣಗಳಲ್ಲಿ ಯಾರೊಬ್ಬರಿಗೂ ಶಿಕ್ಷೆಯಾಗಿರುವ ಬಗ್ಗೆ ನಿದರ್ಶನಗಳು ಇಲ್ಲದಿರುವುದು, ದಂಧೆಕೋರರಿಗೆ ಒತ್ತಾಸೆಯಾಗಿ ನಿಂತವರ ವಿರುದ್ಧವೂ ಕ್ರಮ ಜರುಗಿಸಲಾಗದಷ್ಟು ದೌರ್ಬಲ್ಯವನ್ನು ತನಿಖಾ ಸಂಸ್ಥೆಗಳು ಪ್ರದರ್ಶಿಸುತ್ತಿರುವುದರಿಂದ ದಂಧೆಕೋರರಿಗೆ ಕಾನೂನಿನ ಯಾವ ಭಯವೂ ಇದ್ದಂತೆ ಕಾಣುತ್ತಿಲ್ಲ ಎನ್ನುವುದು ಜನಮಾನಸದಲ್ಲಿ ಮೂಡಿರುವ ಅಭಿಪ್ರಾಯವಾಗಿದೆ.
ಆರೋಗ್ಯ ಇಲಾಖೆಯವರೇ ಈ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ನೋಡಿದಾಗ ಸ್ಥಳೀಯ ವೈದ್ಯರು, ಅಧಿಕಾರಿಗಳು ಕುಮ್ಮಕ್ಕಿನಲ್ಲೇ ಹೆಣ್ಣು ಭ್ರೂಣ ಹತ್ಯೆ ಜಾಲ ವ್ಯವಸ್ಥಿತವಾಗಿ ನಡೆಯುತ್ತಿರುವ ಬಗ್ಗೆ ಅನುಮಾನಗಳು ಮೂಡಿವೆ.ದೊಡ್ಡ ಮಟ್ಟದ ಜಾಲವಿರುವ ಶಂಕೆ: ಡಾ.ಕುಮಾರ
ಹೆಣ್ಣು ಭ್ರೂಣ ಹತ್ಯೆ ಹಿಂದೆ ದೊಡ್ಡ ಜಾಲವಿರುವ ಶಂಕೆ ವ್ಯಕ್ತವಾಗುತ್ತಿದ್ದು, ತನಿಖೆಯಿಂದ ಕೂಲಂಕಷವಾಗಿ ಎಲ್ಲವೂ ಹೊರಬರಲಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ವಿಶ್ವಾಸ ವ್ಯಕ್ತಪಡಿಸಿದರು.
ಅಬಾರ್ಷನ್‌ಗಾಗಿ ಮೈಸೂರಿನಿಂದ ಬಂದ ಗರ್ಭಿಣಿಯನ್ನ ಮಾತನಾಡಿಸಿದ್ದೇವೆ. ಅವರು ಕೊಟ್ಟ ಹೇಳಿಕೆ ಮೇಲೆ ವಿಚಾರಣೆ ನಡೆಯುತ್ತಿದೆ ಎಂದರು.
ಭ್ರೂಣ ತೆಗಿಸಲು ಬಂದಿದ್ದ ಮೈಸೂರಿನ ಸಾಲುಂಡಿ ಗ್ರಾಮದ ಮಹಿಳೆಗೆ ಅನ್‌ವಾಂಟೆಡ್‌ನ ಐದು ಮಾತ್ರೆ ಕೊಟ್ಟಿದ್ದಾರೆ. ಬಳಿಕ ನೋವು ಬಂದಾಗ ಬರುವಂತೆ ಲಾಡ್ಜ್ ವೊಂದಕ್ಕೆ ಕಳುಹಿಸಿದ್ದಾರೆ. ಅದಕ್ಕೂ ಮುನ್ನ ಹದಿನೈದು ದಿನಗಳ ಹಿಂದೆ ಬೇರೆಡೆ ಸ್ಕ್ಯಾನಿಂಗ್ ನಡೆಸಿ ಹೆಣ್ಣು ಭ್ರೂಣ ಇದೆ ಎಂದು ಹೇಳಿದ್ದರಿಂದ ಭ್ರೂಣ ಹತ್ಯೆ ಮಾಡಿಸಲು ಇಲ್ಲಿಗೆ ಬಂದಿದ್ದಾರೆ ಎಂದು ತಿಳಿಸಿದರು.