ಹರಪನಹಳ್ಳಿ: ತಾಲೂಕಿನಲ್ಲಿ ಬರ ಆವರಿಸಿರುವ ಈ ಸಂದರ್ಭದಲ್ಲಿ ಪಟ್ಟಣದ ಐತಿಹಾಸಿಕ ಹಿರೆಕೆರೆಯಿಂದ ಅಭಿವೃದ್ದಿ ನೆಪದಲ್ಲಿ ನೀರನ್ನು ಹೊರಗಡೆ ಬಿಡುತ್ತಿರುವುದು ಸಲ್ಲ, ಕೂಡಲೇ ಕೆರೆ ನೀರು ಪೋಲಾಗುವುದನ್ನು ಸ್ಥಗಿತಗೊಳಿಸಬೇಕು ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಇಲ್ಲಿಯ ಭಾರತೀಯ ಜನತಾ ಪಕ್ಷದ ಎರಡೂ ಬಣಗಳ ಮುಖಂಡರು ತಾಲೂಕಾಡಳಿತಕ್ಕೆ ಪ್ರತ್ಯೇಕವಾಗಿ ಒತ್ತಾಯಿಸಿದ್ದಾರೆ.
ಬಿಜೆಪಿ ಮಂಡಲ ಅಧ್ಯಕ್ಷ ಯಡಿಹಳ್ಳಿ ಶೇಖರಪ್ಪ, ಮುಖಂಡ ಆರ್.ಲೋಕೇಶ, ಮಾಜಿ ಕೌನ್ಸಿಲರ್ ಗಳಾದ ಕಿರಣ್ ಶಾನ್ ಬಾಗ್,ಗೌಳಿ ವಿನಯ,ಜಾವೇದ್ ಮುಖಂಡ ಕೆ.ಮಲ್ಲೇಶ, ವೆಂಕಟೇಶ, ರಾಘವೇಂದ್ರ, ಶಿವಕುಮಾರ, ಸಚಿನ್ ರೆಡ್ಡಿ, ಮಹೇಶ ಪೂಜಾರ ಇತರರು ಪಾಲ್ಗೊಂಡಿದ್ದರು.
ನಂಜನಗೌಡ ಬಣದಿಂದ ಸುದ್ದಿಗೋಷ್ಠಿ: ಬಿಜೆಪಿಯ ಇನ್ನೊಂದು ಬಣ ಮುಖಂಡ ಸಹಕಾರ ಸಂಘದ ರಾಜ್ಯ ಪ್ರಕೋಷ್ಠಕ ಜಿ.ನಂಜನಗೌಡ ನೇತೃತ್ವದಲ್ಲಿ ಕಾಯಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಸ್ತುತ ಸರಿಯಾದ ಮಳೆ ಇಲ್ಲದೆ ತುಂಗಭದ್ರಾ ಜಲಾಶಯ ಸಮರ್ಪಕವಾಗಿ ಭರ್ತಿಯಾಗಿಲ್ಲ. ಹರಪನಹಳ್ಳಿ ಹಿಂದುಳಿದ ತಾಲೂಕಾಗಿದ್ದು, ಮೊದಲಿನಿಂದಲೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ನೀರಿನ ಸಮಸ್ಯೆ ಇರಲಿಲ್ಲ. ಆದರೆ, ಈಗ ಅಭಿವೃದ್ಧಿಯ ನೆಪದಲ್ಲಿ ಕೆರೆಯ ನೀರನ್ನು ಹೊರಬಿಡಲಾಗುತ್ತಿದೆ. ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ, ಕೆರೆಯಲ್ಲಿನ ನೀರನ್ನು ಸಂರಕ್ಷಣೆ ಮಾಡಿಕೊಂಡು ಕಾಮಗಾರಿ ನಡೆಸಬೇಕು.ನೀರು ಖಾಲಿ ಮಾಡಿ ಅಭಿವೃದ್ಧಿ ಮಾಡುವುದು ಅವೈಜ್ಞಾನಿಕ ಆಲೋಚನೆ ಹೀಗೆ ನೀರು ಹೊರ ಬಿಟ್ಟರೆ ನಗರಕ್ಕೆ ಸೇರಿದಂತೆ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಮಂಜುನಾಥ ಕಣಿವಿಹಳ್ಳಿ, ಡಾ. ರಮೇಶಕುಮಾರ,ಮೈದೂರು ಮಲ್ಲಿಕಾರ್ಜುನ, ಓಂಕಾರಗೌಡ, ಲಿಂಗಾನಂದ, ಪ್ರಾಣೇಶ, ರವಿಕುಮಾರ, ಪ್ರಭು ಶ್ಯಾನುಬೋಗ, ಸುರೇಶ, ದೇವರಾಜ, ಮಂಜುನಾಥ, ಜವಳಿ ಮಹೇಶ, ಅಕ್ಷಯ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.