ರೋಣ: ಮಾಡಲಗೇರಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಇದರಿಂದ ಮಹಿಳೆಯರು, ಮಕ್ಕಳು, ವೃದ್ಧರು ತೀವ್ರ ಮುಜುಗರಕ್ಕೆ ಒಳಗಾಗುತ್ತಿದ್ದು, ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಮಹಿಳೆಯರು ರೈತಸೇನೆ ಮೂಲಕ ತಹಸೀಲ್ದಾರ್, ಪೊಲೀಸ್ ಠಾಣೆ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ರೈತಸೇನೆ ಕರ್ನಾಟಕ ಸಂಘದ ರಾಜ್ಯ ವಕ್ತಾರ ಮಹಾದೇವಗೌಡ ಭಾವಿ ಅವರು, ಅಕ್ರಮ ಮದ್ಯ ಮಾರಾಟ ತಡೆಗಟ್ಟುವಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದು, ಗ್ರಾಮದಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟವಾಗುತ್ತಿದೆ. ಗ್ರಾಮದಲ್ಲಿ ಸುಲಭವಾಗಿ ಮದ್ಯ ಸಿಗುತ್ತಿದೆ. ಇದರಿಂದ ಯುವಕರು ಮದ್ಯವ್ಯಸನಕ್ಕೆ ದಾಸರಾಗುತ್ತಿದ್ದು, ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಲು ಕಾರಣರಾಗಿದ್ದಾರೆ. ಕುಡಿದು ಗಲಾಟೆ ಮಾಡುವುದು ಹೆಣ್ಣುಮಕ್ಕಳಿಗೆ ಅಶ್ಲೀಲ ಪದ ಬಳಕೆ ಮಾಡಿ ನಿಂದಿಸುವ ಪ್ರಕರಣಗಳು ಹೆಚ್ಚುತ್ತಿವೆ ಎಂದರು.
ಮನವಿ ಸ್ವೀಕರಿಸಿದ ಅಬಕಾರಿ ಉಪನಿರೀಕ್ಷಕ ಎ.ಎಸ್. ಹೊಸಮನಿ ಮಾತನಾಡಿ, ಮಾಡಲಗೇರಿ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ಕುರಿತು ಮನವಿ ಸಲ್ಲಿಸಿದ್ದು, ಮೇಲಧಿಕಾರಿಗಳ ಗಮನಕ್ಕೆ ತಂದು ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಭರವಸೆ ನೀಡಿದರು.
ಶಂಕ್ರವ್ವ ಸಿರಗುಂಪಿ ಮಾತನಾಡಿದರು. ಬಸನಗೌಡ ಬಾಲನಗೌಡರ ಶರಣಪ್ಪಗೌಡ ಹಿರೇಸಕ್ಕರಗೌಡರ, ಮಲ್ಲಪ್ಪ ನೈನಪುರ, ಯೋಗಾನಂದ ಹುನಗುಂಡಿ, ಹನುಮವ್ವ ಭೀಮನಗೌಡರ, ಶಂಕ್ರವ್ವ ಶಿರಗುಂಪಿ, ಅಮರವ್ವ ಹುನಗುಂಡಿ, ಗೌರವ್ವ ಭಾವಿ, ಯಲ್ಲವ್ವ ರಾಯನಗೌಡರ, ಬಸವ್ವ ಹಿರೇಸಕರಗೌಡರ, ರತ್ನವ್ವ ಮಂಡಸೊಪ್ಪಿ ಈರವ್ವ ಮಂಡಸೊಪ್ಪಿ, ಶಂಕ್ರವ್ವ ಮಾಗಿ ಶಂಕ್ರವ್ವ ಭೀಮನಗೌಡರ, ಶೋಭಾ, ಪಾರವ್ವ ಹಿರೇಸಕರಗೌಡ್ರ ಮುಂತಾದವರಿದ್ದರು.