ಮರಿಯಮ್ಮನಹಳ್ಳಿ: ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಪೌರಾಡಳಿತ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಪಪಂ ಅಧ್ಯಕ್ಷ ಆದಿಮನಿ ಹುಸೇನ್ ಬಾಷಾ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಮರಿಯಮ್ಮನಹಳ್ಳಿ ಪುರಸಭೆಯಾಗುವ ಎಲ್ಲ ಅರ್ಹತೆ ಹೊಂದಿದ್ದು, ಇಲ್ಲಿ ಅಭಿವೃದ್ಧಿ ಕೆಲಸಗಳು ಹೆಚ್ಚು ನಡೆಯಬೇಕಾದರೆ ಈಗಿರುವ ಪಪಂ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸುವುದು ಅನಿವಾರ್ಯ. ಹೀಗಾಗಿ ಪೌರಾಡಳಿತ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಒತ್ತಾಯಿಸಲಾಗುತ್ತದೆ ಎಂದು ಅಧ್ಯಕ್ಷರು ಹೇಳಿದರು.ಪಟ್ಟಣದ ಮುಖ್ಯ ರಸ್ತೆಯ ಬದಿಯಲ್ಲಿರುವ ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಲು ಸಾರ್ವಜನಿಕರಿಂದ ಬಂದ ಅರ್ಜಿಗಳನ್ನು ಪರಿಶೀಲಿಸಿ, ಲೋಕೋಪಯೋಗಿ ಇಲಾಖೆಯ ಜೆಇ ತಿಪ್ಪೇಸ್ವಾಮಿ ಅವರಿಗೆ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸ್ಥಳ ಗುರುತು ಮಾಡಲು ಸೂಚಿಸಲಾಯಿತು. ಶೆಡ್‌ಗಳನ್ನು ತೆರವುಗೊಳಿಸಲು ಸಭೆಯಲ್ಲಿ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು. ಆದರೆ 15ನೇ ವಾರ್ಡಿನ ಸದಸ್ಯ ಮರಡಿ ಸುರೇಶ್ ಮಾತ್ರ ವಿರೋಧಿಸಿದರು.
ಪಟ್ಟಣದ ರಸ್ತೆಗಳು ಗುಂಡಿಗಳು ಬಿದ್ದಿದ್ದು, ಕೂಡಲೇ ದುರಸ್ತಿ ಮಾಡಲು ಕೆಲವು ಸದಸ್ಯರು ಒತ್ತಾಯಿಸಿದರು. ಪಾವಗಡ ಕುಡಿಯುವ ನೀರಿನ ಯೋಜನೆಯಿಂದ ಪಟ್ಟಣದ ರಸ್ತೆಗಳು ಹಾಳಾಗಿವೆ. ರಸ್ತೆಗಳ ನಿರ್ವಹಣೆಗೆ ಯೊಜನೆಯಿಂದ ₹80 ಲಕ್ಷ ಠೇವಣಿ ಇದೆ. ಅದರಲ್ಲಿ ರಸ್ತೆ ದುರಸ್ತಿಗೊಳಿಸಲು ಮತ್ತು ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಲು ಒಂದು ತಿಂಗಳ ಕಾಲವಶಕಾಶ ಕೇಳಲಾಗಿತ್ತು. ಆದರೆ ಆರು ತಿಂಗಳಾದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ತಕ್ಷಣವೇ ಜನರಿಗೆ ಕುಡಿಯುವ ನೀರು ಒದಗಿಸುವಂತೆ ಅಧಿಕಾರಿಗಳಿಗೆ ಅಧ್ಯಕ್ಷ ಆದಿಮನಿ ಹುಷೇನ್ ಬಾಷಾ ಸೂಚಿಸಿದರು.ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇರುವುದಿಲ್ಲ. ಆಸ್ಪತ್ರೆಗೆ ಹೋದ ರೋಗಿಗಳನ್ನು ನಿರ್ಲಕ್ಷ್ಯದಿಂದ ನೋಡಲಾಗುತ್ತದೆ. ಸಮರ್ಪಕವಾಗಿ ಸೂಕ್ತ ಚಿಕಿತ್ಸೆ ಲಭಿಸುತ್ತಿಲ್ಲ. ಸಾರ್ವಜನಿಕರಿಂದ ದೂರು ಕೇಳಿ ಬರುತ್ತಿವೆ. ಆಸ್ಪತ್ರೆಗೆ ಬಂದ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ, ಜನರು ನೆನಸಿಕೊಳ್ಳುವಂತೆ ಸೇವೆ ಸಲ್ಲಿಸಿ ಎಂದು ಹುಸೇನ್ ಬಾಷಾ ಅವರು ವೈದ್ಯಾಧಿಕಾರಿ ಡಾ. ಮಂಜುಳಾ ಅವರಿಗೆ ಸೂಚಿಸಿದರು.
ಪಟ್ಟಣದಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಾಗಿದ್ದು, ಅವುಗಳ ನಿಯಂತ್ರಣಕ್ಕೆಸಂತಾನ ಹರಣ ಚಿಕಿತ್ಸೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.ವಾರ್ಡುಗಳ ಅಭಿವೃದ್ಧಿ ಕೆಲಸಗಳಲ್ಲಿ ತಾರತಮ್ಯ ಮಾಡಲಾಗುತ್ತಿದೆ, ಇದು ಸರಿಯಲ್ಲ. ಎಲ್ಲ ವಾರ್ಡಿನಲ್ಲಿ ಅಭಿವೃದ್ಧಿ ಕೆಲಸಗಳು ನಡೆದಹಾಗೆ ನಮ್ಮ ವಾರ್ಡಿನಲ್ಲಿಯೂ ಅಭಿವೃದ್ಧಿ ಕೆಲಸ ಆಗಬೇಕು ಎಂದು 2ನೇ ವಾರ್ಡಿನ ಸದಸ್ಯ ಪರುಶುರಾಮ ಒತ್ತಾಯಿಸಿದರು.
ಪಪಂ ಉಪಾಧ್ಯಕ್ಷೆ ಲಕ್ಷ್ಮೀ ಆರ್. ಮಂಜುನಾಥ, ಸ್ಥಾಯಿ ಸಮಿತಿ ಅಧ್ಯಕ್ಷೆ ಎಲ್. ಹುಲಿಗಿಬಾಯಿ ರುದ್ರನಾಯ್ಕ್, ಮುಖ್ಯಾಧಿಕಾರಿ ಜಿ.ಕೆ. ಮಲ್ಲೇಶ್, ಪಪ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.