ಭೀಮಣ್ಣ ಗಜಾಪುರ
ಕೂಡ್ಲಿಗಿ: ತಾಲೂಕಿನ ಗುಡೇಕೋಟೆ ಹಾಗೂ ಹೊಸಹಳ್ಳಿ ಹೋಬಳಿಯ ಮೇಗಳ ಕರ್ನಾರಹಟ್ಟಿ, ಕೆಳಗಳ ಕರ್ನಾರಹಟ್ಟಿ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಗಾಳಿಯಂತ್ರದ ಸದ್ದಿಗೆ ದನ, ಕುರಿ-ಮೇಕೆಗಳೂ ನಿದ್ರೆ ಮಾಡುತ್ತಿಲ್ಲವಂತೆ!ಗಾಳಿಯಂತ್ರದ ಸದ್ದಿಗೆ ಈ ಗ್ರಾಮಗಳಲ್ಲಿ ಜನರು ನಿದ್ದೆ ಮಾಡುತ್ತಿಲ್ಲ, ವಿದ್ಯಾರ್ಥಿಗಳಿಗೆ ಓದಲು ಸಾಧ್ಯವಾಗುತ್ತಿಲ್ಲ ಎನ್ನುವ ಕುರಿತು ಕನ್ನಡಪ್ರಭ ವಿಶೇಷ ಲೇಖನ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಕಿಲಾರಿಗಳು, ದನಗಾಹಿಗಳು, ಕುರಿಗಾಹಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ತಾಲೂಕಿನ ಗಂಡಬೊಮ್ಮನಹಳ್ಳಿ ಹತ್ತಿರ ದೇವರ ಎತ್ತುಗಳ ಹಟ್ಟಿಗಳು ಹಾಗೂ ಕುರಿಹಟ್ಟಿಗಳಿವೆ. ಈ ಹಟ್ಟಿಯ ಪಕ್ಕದಲ್ಲಿ ಗಾಳಿಯಂತ್ರ ಇರುವುದರಿಂದ ರಾತ್ರಿಪೂರ ದನಗಳು, ಕುರಿಗಳು ನಿದ್ದೆ ಮಾಡುತ್ತಿಲ್ಲ ಎಂದು ದೇವರ ಎತ್ತುಗಳ ಕಾಯುವ ಕಿಲಾರಿಗಳು, ಕುರಿ ಕಾಯುವ ಕುರಿಗಾಹಿಗಳು ''''ಕನ್ನಡಪ್ರಭ''''ದೊಂದಿಗೆ ಅಳಲು ತೋಡಿಕೊಂಡಿದ್ದಾರೆ.ಕೂಡ್ಲಿಗಿ ತಾಲೂಕಿನ ಗುಡೇಕೋಟೆ, ಹೊಸಹಳ್ಳಿ ಹೋಬಳಿಯಲ್ಲಿ ಖಾಸಗಿ ವಿಂಡ್ ಕಂಪನಿಗಳ ದೈತ್ಯಾಕಾರದ ಫ್ಯಾನ್ ಅಳವಡಿಸಿವೆ. ರೈತರ ಜಮೀನು, ಊರುಗಳು, ಹಳ್ಳಕೊಳ್ಳಗಳು ಎಲ್ಲೆಂದರಲ್ಲಿ ಪ್ಯಾನ್ ಕಾಣಸಿಗುತ್ತದೆ. ಮುಂದಿನ ದಿನಗಳಲ್ಲಿ ಇಲ್ಲಿಯ ಬಡರೈತರು ಜಮೀನು ಕಳೆದುಕೊಂಡು ಅದೇ ಜಮೀನಿನಲ್ಲಿ ಕೂಲಿಮಾಡುವ ಸ್ಥಿತಿ ಬರಬಹುದು ಎನ್ನುತ್ತಾರೆ ಪ್ರಜ್ಞಾವಂತರು.
ದನ, ಕುರಿ ಅಷ್ಟೇ ಅಲ್ಲ, ಇತರ ಜೀವ ಸಂಕುಲಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಪರಿಸರಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ನಮ್ಮ ದೇವರ ಎತ್ತುಗಳು ಗಂಡಬೊಮ್ಮನಹಳ್ಳಿ ಪಕ್ಕದ ಹಟ್ಟಿಯಲ್ಲಿದ್ದು, ಅಲ್ಲಿಯೇ ದೈತ್ಯಾಕಾರದ ಫ್ಯಾನ್ ಹಾಕಿದ್ದರಿಂದ ನಮ್ಗೂ ರಾತ್ರಿ ನಿದ್ದೆಯಿಲ್ಲ, ನಮ್ಮ ಎತ್ತುಗಳು ಸಹ ರಾತ್ರಿಪೂರ ಪ್ಯಾನ್ ಗಾಳಿಗೆ ಬೆದರಿ ನಿದ್ದೆ ಮಾಡುತ್ತಿಲ್ಲ. ಎತ್ತುಗಳ ಪರಿಸ್ಥಿತಿ ನೋಡಿ ನಮ್ಗೂ ಅಯ್ಯೋ ಎನಿಸುತ್ತಿದೆ ಎಂದು ದೇವರ ಎತ್ತುಗಳು ಕಾಯುವ ವ್ಯಕ್ತಿ ಪಾಪಣ್ಣ ಹೇಳಿದರು.ಊರಾಚಿನ ಭೂಮಿಯಲ್ಲಿ ಜರಿ, ಜೇಡ, ಓತಿಕ್ಯಾತ, ಅಳಿಲು, ಮೊಲ, ನರಿ, ಕರಡಿ ಹಂದಿಗಳು ವಾಸಿಸುತ್ತಿವೆ. ಗಾಳಿಯಂತ್ರಕ್ಕೆ ಬೆದರಿದ ಪ್ರಾಣಿಪಕ್ಷಿಗಳು ಬೇರೆ ಕಡೆ ಹೋಗಬಹುದು. ಜತೆಗೆ ಸಣ್ಣ ಪ್ರಾಣಿಗಳು ಬೇರೆಡೆ ಹೋದರೆ ದೊಡ್ಡ ಪ್ರಾಣಿಗಳಿಗೆ ಆಹಾರ ಸಿಗುವುದಿಲ್ಲ. ಇಲ್ಲಿರುವ ವಿಶಿಷ್ಟ ಪ್ರಾಣಿ, ಪಕ್ಷಿ ಸಂಕುಲ ಮುಂದಿನ ದಿನಗಳಲ್ಲಿ ಮರೆಯಾಗುವ ಸಂದರ್ಭ ಎದುರಾಗುತ್ತದೆ ಹರಪನಹಳ್ಳಿ ಪರಿಸರಪ್ರೇಮಿ ಎಚ್. ಚಂದ್ರಪ್ಪ ಹೇಳಿದರು.