ಯಕ್ಷಚಂದ್ರ ಪುಸ್ತಕ ಹಿಂಪಡೆಯಲು ಆಗ್ರಹ

KannadaprabhaNewsNetwork |  
Published : Oct 04, 2025, 01:00 AM IST
ಯಕ್ಷಗಾನ | Kannada Prabha

ಸಾರಾಂಶ

ಯಕ್ಷಗಾನ ಕಲಾವಿದರ ಬಗ್ಗೆ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರು ತಮ್ಮ ಪುಸ್ತಕ ಯಕ್ಷಚಂದ್ರದಲ್ಲಿ ಅವಹೇಳನಕಾರಿಯಾಗಿ ಬರೆದಿದ್ದಾರೆ. ಅವರು ಈ ಪುಸ್ತಕವನ್ನು ಹಿಂಪಡೆಯಬೇಕು ಎಂದು ಯಕ್ಷಗಾನ‌ ಕಲಾವಿದ ಹಾಗೂ ಯಕ್ಷಗಾನ ಅಕಾಡೆಮಿ ಸದಸ್ಯ ವಿದ್ಯಾಧರ ಜಲವಳ್ಳಿ ಆಗ್ರಹಿಸಿದ್ದಾರೆ.

ಹೊನ್ನಾವರ: ಯಕ್ಷಗಾನ ಕಲಾವಿದರ ಬಗ್ಗೆ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರು ತಮ್ಮ ಪುಸ್ತಕ ಯಕ್ಷಚಂದ್ರದಲ್ಲಿ ಅವಹೇಳನಕಾರಿಯಾಗಿ ಬರೆದಿದ್ದಾರೆ. ಅವರು ಈ ಪುಸ್ತಕವನ್ನು ಹಿಂಪಡೆಯಬೇಕು ಎಂದು ಯಕ್ಷಗಾನ‌ ಕಲಾವಿದ ಹಾಗೂ ಯಕ್ಷಗಾನ ಅಕಾಡೆಮಿ ಸದಸ್ಯ ವಿದ್ಯಾಧರ ಜಲವಳ್ಳಿ ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಕ್ಷಗಾನದ ಮೇರು ಕಲಾವಿದರ ಬಗ್ಗೆ ದೂಷಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಚಿಟ್ಟಾಣಿ ರಾಮಚಂದ್ರ ಹೆಗಡೆ, ಶಂಭು ಹೆಗಡೆ ಕೆರಮನೆ, ಚೆನ್ನಪ್ಪ ಶೆಟ್ಟಿ, ಸ್ತ್ರೀ ವೇಷಧಾರಿ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ ಹಾಗೂ ವಿದ್ಯಾಧರ ರಾವ್ ಜಲವಳ್ಳಿ ಅವರ ಬಗ್ಗೆ ದೂಷಿಸಿದ್ದಾರೆ. ಇನ್ನು ಜಲವಳ್ಳಿ ವೆಂಕಟೇಶ ರಾವ್ ಅವರನ್ನು ಒಂದು ಕಡೆ ಹೊಗಳಿ ಇನ್ನೊಂದು ಕಡೆ ತೆಗಳಿ ಬರೆಯಲಾಗಿದೆ. ಇಂತಹದ್ದನ್ನು ಯಕ್ಷಗಾನ‌ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ಕಡೆಯಿಂದ ನಿರೀಕ್ಷಿಸಿರಲಿಲ್ಲ ಎಂದರು.

ಅವರ ತಪ್ಪುಗಳನ್ನು ಮುಚ್ಚಿಕೊಳ್ಳಲು ಇನ್ನೊಬ್ಬರ ಮೇಲೆ ಆರೋಪಿಸಿದ್ದಾರೆ. ಅವರು ಅಷ್ಟೊಂದು ಸಂಭಾವಿತರಾ? ಹಾಗಿದ್ದರೆ ಕೃಷ್ಣ ಯಾಜಿ ಅವರೊಂದಿಗೆ ಯಾಕೆ ಹದಿನೈದು ವರ್ಷ ಪಾತ್ರ ಮಾಡಲಿಲ್ಲ? ಆನಂತರ ಸಂಘಟಕರಿಂದ ₹25 ಸಾವಿರ ತೆಗೆದುಕೊಂಡು ಪಾತ್ರ ಮಾಡಿ ಅಭಿಮಾನಿಗಳನ್ನು ವಂಚಿಸಿದ್ದಾರೆ. ಕೊಳಗಿಬೀಸ್ ಹಾಗೂ ರವೀಂದ್ರ ಕಲಾಕ್ಷೇತ್ರದಲ್ಲಿ ತಾವು ತಪ್ಪು ಮಾಡಿ ಪುಸ್ತಕದಲ್ಲಿ ನನ್ನ ಮೇಲೆ ಆರೋಪಿಸಿದ್ದಾರೆ ಎಂದು ವಿದ್ಯಾಧರ್ ರಾವ್ ಜಲವಳ್ಳಿ ಹೇಳಿದರು.

ತಪ್ಪು ಮಾಹಿತಿ ಇರುವ ಯಕ್ಷಚಂದ್ರ ಪುಸ್ತಕ ಹಿಂಪಡೆಯಬೇಕು. ಇಲ್ಲದಿದ್ದರೆ ಕಾನೂನು ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಯಕ್ಷಗಾನ ಕಲಾವಿದ ಯಲಗುಪ್ಪಾ ಸುಬ್ರಹ್ಮಣ್ಯ ಹೆಗಡೆ ಮಾತನಾಡಿ, ತಾವು ಸಂಭಾವಿತ ಎಂದು ತೋರಿಸುವುದರಲ್ಲಿ ಬೇರೆಯವರು ಕೆಟ್ಟವರೆಂದು ತೋರಿಸಲಾಗಿದೆ. ದೂಷಿಸಲ್ಪಟ್ಟ ಕಲಾವಿದರ ಕ್ಷಮೆ ಕೇಳಬೇಕು ಮತ್ತು ಪುಸ್ತಕ ಹಿಂಪಡೆಯಬೇಕು ಎಂದರು.

ಕಲಾವಿದ ನೀಲ್ಕೋಡ ಶಂಕರ ಹೆಗಡೆ ಮಾತನಾಡಿ, ಅಶ್ವಿನಿ ಕೊಂಡದಕುಳಿ ಸ್ತ್ರೀ ಕಲಾವಿದರ ಬಗ್ಗೆ ಕೀಳಾಗಿ ಮಾತನಾಡುತ್ತಾರೆ ಎಂದಿದ್ದಾರೆ.‌ ಇದು ಸತ್ಯಕ್ಕೆ ದೂರವಾದದ್ದು. ನಾವು ಅಶ್ವಿನಿ ಅವರನ್ನು ತಂಗಿಯಂತೆ ಕಂಡಿದ್ದೇವೆ. ಅವರು ಕಲಾವಿದೆ, ಉಪನ್ಯಾಸಕಿ ಆಗಿದ್ದಾರೆ. ಅವರು ಈ ರೀತಿ ಮಾತನಾಡಬಾರದಿತ್ತು.‌ ಈ ರೀತಿ ಆರೋಪ ಮಾಡಿದ ಅವರ ಜತೆ ಇನ್ನು ಮುಂದೆ ಪಾತ್ರ ಮಾಡುವುದಿಲ್ಲ ಎಂದರು.

ಈ ವೇಳೆ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿ, ನಾಗರಾಜ್ ಭಂಡಾರಿ, ಸಂಘಟಕರಾದ ರಾಜೇಶ್ ಭಂಡಾರಿ ಹಾಗೂ ಶ್ರೀನಿವಾಸ್ ಪೈ ಹಾಜರಿದ್ದರು.

PREV

Recommended Stories

ಬೆಡ್‌ರೂಮಲ್ಲಿ ರಹಸ್ಯ ಕ್ಯಾಮೆರಾ: ಲೈಂಗಿಕಕ್ರಿಯೆ ಚಿತ್ರೀಕರಿಸಿ ದೌರ್ಜನ್ಯ
ಕಾವೇರಿ ಆರತಿ ನಿಲ್ಲಿಸಲ್ಲ: ಡಿಸಿಎಂ