ಹಳಿಯಾಳ: 2022ರಲ್ಲಿ ಕಬ್ಬಿಗೆ ನ್ಯಾಯಯುತ ಬೆಲೆಯನ್ನು ನೀಡಬೇಕೆಂದು ಆಗ್ರಹಿಸಿ ನಡೆದಿದ್ದ ಹೋರಾಟದಲ್ಲಿ ಪ್ರತಿಭಟನಾನಿರತ ತಾಲೂಕಿನ ಕಬ್ಬು ಬೆಳೆಗಾರರ ಮೇಲೆ ದಾಖಲಿಸಿದ್ದ ಪ್ರಕರಣಗಳನ್ನು ಹಿಂಪಡೆಯಬೇಕೆಂದು ತಾಲೂಕು ಕಬ್ಬು ಬೆಳೆಗಾರರ ಸಂಘವು ಆಗ್ರಹಿಸಿದೆ.ಬುಧವಾರ ಹಳಿಯಾಳಕ್ಕೆ ಭೇಟಿ ನೀಡಿದ ಎಸ್ಪಿ ನಾರಾಯಣ ಎಂ. ಅವರನ್ನು ಹಳಿಯಾಳ ಠಾಣೆಯಲ್ಲಿ ಭೇಟಿಯಾದ ತಾಲೂಕಿನ ಕಬ್ಬು ಬೆಳೆಗಾರರ ನಿಯೋಗವು ಲಿಖಿತ ಮನವಿಯನ್ನು ಸಲ್ಲಿಸಿ ನ್ಯಾಯೋಚಿತವಾಗಿ ಹೋರಾಟ ಮಾಡಿದ ಕಬ್ಬು ಬೆಳೆಗಾರರನ್ನು ಸಂರಕ್ಷಿಸಬೇಕೆಂದು ಮನವಿ ಮಾಡಿದರು.2022ನೇ ಸಾಲಿನ ಹಂಗಾಮಿನಲ್ಲಿ ಇಡೀ ಉತ್ತರ ಕರ್ನಾಟಕದಲ್ಲಿನ ಸಕ್ಕರೆ ಕಾರ್ಖಾನೆಗಳಲ್ಲಿಯೇ ಹಳಿಯಾಳದ ಇಐಡಿ ಸಕ್ಕರೆ ಕಾರ್ಖಾನೆಯವರು ಅತಿ ಕನಿಷ್ಠ ದರವನ್ನು ಘೋಷಿಸಿದನ್ನು ವಿರೋಧಿಸಿ ಹಾಗೂ ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಕುರಿತು ಮತ್ತು ಬಾಕಿ ಬರಬೇಕಾಗಿದ್ದ ಹಣ ಪಾವತಿಸಲು ಆಗ್ರಹಿಸಿ ತಾಲೂಕಿನ ಕಬ್ಬು ಬೆಳೆಗಾರರು ಸತ್ಯಾಗ್ರಹವನ್ನು ಆರಂಭಿಸಿದ್ದರು.
ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಶಂಕರ ಕಾಜಗಾರ, ಪ್ರಮುಖರಾದ ಸಂದೀಪಕುಮಾರ ಬೊಬಾಟೆ, ಅಶೋಕ ಮೇಟಿ, ನಾಗೇಂದ್ರ ಜಿವೋಜಿ, ರಾಮದಾಸ ಬೆಳಗಾಂವಕರ, ಸಾತೇರಿ ಗೊಡೇಮನಿ, ಪ್ರಕಾಶ ಪಾಕ್ರೆ, ಯಲ್ಲಪ್ಪ ಪಾಟೀಲ, ಬಸವರಾಜ ಬೆಂಡಿಗೇರಿಮಠ, ಪುಂಡಲೀಕ ಗೋಡೆಮನಿ ಇತರರು ಇದ್ದರು.