ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಸೂಚನೆ ಜಾರಿಗೊಂಡಲ್ಲಿ ಘೋಷಿತ ಗ್ರಾಮಗಳ ಜನರಿಗೆ ಸಾಕಷ್ಟು ತೊಂದರೆಯಾಗಲಿದೆ. ಈ ಅಧಿಸೂಚನೆ ಕೇವಲ ಅಧಿಕಾರಿ ಮಟ್ಟದ ಚರ್ಚೆ, ತೀರ್ಮಾನಗಳಾಗಿವೆ. ಉದ್ದೇಶಿತ ಸೂಕ್ಷ್ಮ ವಲಯದ ಗ್ರಾಮಗಳ ಗ್ರಾಮ ಸಭೆಯನ್ನು ಕರೆದು ಸ್ಥಳೀಯ ಜನರ ವಿಶ್ವಾಸದೊಂದಿಗೆ ಸಾಧಕ-ಬಾಧಕಗಳ ಚರ್ಚೆ ಮಾಡದೆ 1449 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯದಲ್ಲಿ ಸೇರಿಸಲಾಗಿದೆ. ಅದರಂತೆ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ, ಶಿಕಾರಿಪುರ ಭಾಗದ 473 ಇದರ ಅಡಿಯಲ್ಲಿ ಬರಲಿವೆ ಎಂದು ಆರೋಪಿಸಿದರು.
ಘೋಷಿತ ಗ್ರಾಮಗಳ ವಸತಿ ಪ್ರದೇಶ, ಕೃಷಿಭೂಮಿ, ಗೋಮಾಳ, ಪಟ್ಟಾಭೂಮಿ, ರಸ್ತೆ, ನೀರಿನ ಸೌಕರ್ಯ, ಗ್ರಾಮದಲ್ಲಿರುವ ಮೂಲ ಸೌಕರ್ಯ ಇತ್ಯಾದಿ ಪ್ರದೇಶಗಳನ್ನು ಇಎಸ್‌ಎಯಿಂದ ಹೊರಗಿಡದಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಮಲೆನಾಡಿನ ರೈತರಿಗೆ ಮರಣ ಶಾಸನವಗಿರುವ ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದ ಅವರು, ಈ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟಗಳ ರೈತರು, ಗ್ರಾಮಸ್ಥರು, ಸಹಕಾರಿ ಸಂಘ ಸಂಸ್ಥೆಗಳು ವರದಿಯ ಜಾರಿ ವಿರೋಧಿಸಿ ಆಕ್ಷೇಪಣೆಯನ್ನು ಸಲ್ಲಿಸುವ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದೇವೆ ಎಂದರು.ಕಸ್ತೂರಿ ರಂಗನ್ ವರದಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಆದಾಗಿನಿಂದಲೂ ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಮಲೆನಾಡಿನ ಭಾಗದ ರೈತರ ಬಾಳಿನ ಮೇಲೆ ತೂಗುಗತ್ತಿಯಾಗಿ ಪರಿಣಮಿಸಿದೆ. 2013ರಿಂದಲೂ ಕೇಂದ್ರ ಸರ್ಕಾರ ಅನೇಕ ಬಾರಿ ಈ ವರದಿ ಜಾರಿಗೆ ಸಂಬಂಧಿಸಿದಂತೆ ಅನೇಕ ಬಾರಿ ತಿದ್ದುಪಡಿ ಮಾಡುತ್ತಲೇ ಬಂದಿದೆ. ಆದರೆ ಅವು ಈ ಭಾಗದ ರೈತರ ನೆರವಿಗೆ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ 5 ತಾಲೂಕುಗಳಲ್ಲಿ ಈ ಪಾದಯಾತ್ರೆ ನಡೆಯುತ್ತದೆ. ಈ ಯಾತ್ರೆಯಲ್ಲಿ ಡಿಸಿಸಿ ಬ್ಯಾಂಕ್ ಹಾಲು ಒಕ್ಕೂಟ ಸೇರಿದಂತೆ ಪಶ್ಚಿಮಘಟ್ಟದ ರೈತ ಸಹಕಾರಿ ಸಂಸ್ಥೆಗಳು ಪಾಲ್ಗೊಳ್ಳುತ್ತವೆ. ಹೊಸನಗರದಲ್ಲಿ ಆ.29ರಂದು ಪಾದಯಾತ್ರೆ ಆರಂಭವಾಗುತ್ತದೆ. ಸೆ.29ರೊಳಗೆ ಪಾದಯಾತ್ರೆಗಳು ಮುಗಿದ ನಂತರ ಆಕ್ಟೋಬರ್ ಕೊನೆಯ ವಾರದಲ್ಲಿ ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ 1 ಲಕ್ಷಕ್ಕೂ ಹೆಚ್ಚು ಜನರನ್ನ ಸೇರಿಸಿ ಬಹುದೊಡ್ಡ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗುವುದು ಎಂದರು.
ಗೋಷ್ಠಿಯಲ್ಲಿ ಪ್ರಮುಖರಾದ ಬಿ.ಆರ್. ಜಯಂತ್, ವಿದ್ಯಾಧರ್, ದುಗ್ಗಪ್ಪಗೌಡ, ಜಿ.ಎನ್. ಸುಧೀರ್, ವಿನಯಕುಮಾರ್, ಎಸ್.ಕೆ. ಮರಿಯಪ್ಪ, ರಮೇಶ್ ಶಂಕರಘಟ್ಟ, ವಿರೂಪಾಕ್ಷಪ್ಪ ಮೊದಲಾದವರಿದ್ದರು.
ಮಲೆನಾಡಿನ ರೈತ ವಿರೋಧಿ, ಪರಿಸರ ಮಾರಕ ಕಸ್ತೂರಿರಂಗನ್ ವರದಿಯ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿದ 7ನೇ ಕರಡು ಅಧಿಸೂಚನೆ ವಿರೋಧಿಸಿ ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆಯು ವಿವಿಧ ಪರಿಸರ, ಸಹಕಾರಿ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆ.29ರಂದು ಹೊಸನಗರದಲ್ಲಿ ರೈತರ ಒಂದು ದಿನದ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ. ಬಳಿಕ ಜಿಲ್ಲೆಯ ಸಾಗರ, ತೀರ್ಥಹಳ್ಳಿ ಮೊದಲಾದ ತಾಲೂಕುಗಳಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು. ಅಕ್ಟೋಬರ್‌ನಲ್ಲಿ ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಈ ವರದಿ ವಿರೋಧಿಸಿ ಜಿಲ್ಲಾಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು.