ವಿಧಾನಸಭೆಯ ಕಾರ್ಯಗಳನ್ನು ಕಾಗದ ರಹಿತ ಮಾಡುವ ಸಲುವಾಗಿ ತಂತ್ರಜ್ಞಾನ ಬಳಸಿ ಇ-ವಿಧಾನ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ವಿಧಾನಸಭೆ
ವಿಧಾನಸಭೆಯ ಕಾರ್ಯಗಳನ್ನು ಕಾಗದ ರಹಿತ ಮಾಡುವ ಸಲುವಾಗಿ ತಂತ್ರಜ್ಞಾನ ಬಳಸಿ ಇ-ವಿಧಾನ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್.ಪಾಟೀಲ್ ತಿಳಿಸಿದ್ದಾರೆ.ವಿಧಾನಸಭೆಗೆ ನೂತನ ಸ್ಪೀಕರ್ ಆಗಿ ಅವಿರೋಧ ಆಯ್ಕೆಯಾದ ನಂತರ ಸದನ ಉದ್ದೇಶಿಸಿ ಮಾತನಾಡಿ, ಸಂವಿಧಾನ ರಕ್ಷಣೆ, ಕನ್ನಡಿಗರ ಆಶಯ ಮತ್ತು ಘನತೆ ಕಾಪಾಡುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇವೆ. ಸಂವಿಧಾನ ಮತ್ತು ನಿಯಮಗಳು ಸದನದ ದಿಕ್ಸೂಚಿಯಾಗಿದ್ದು, ಅದರಂತೆ ಸದನ ನಡೆಸುತ್ತೇನೆ. ಜವಾಬ್ದಾರಿ ಮತ್ತು ಹೊಣೆಗಾರಿಕೆ ಮೂಲಕ ಸದನ ಮುನ್ನಡೆಸುತ್ತೇನೆ. ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತಾರತಮ್ಯ ಮಾಡದೆ ಸಂವಿಧಾನದ ಆಶಯದಂತೆ ಕೆಲಸ ಮಾಡುತ್ತೇನೆ ಎಂದರು.
ವಿಧಾನಸಭೆ ಕಾರ್ಯವೈಖರಿಯಲ್ಲಿ ಬದಲಾವಣೆ ತರಲು ತಂತ್ರಜ್ಞಾನ ಬಳಸಲು ಚಿಂತನೆ ನಡೆಸಿದ್ದೇನೆ. ಅದರ ಮೂಲಕ ವಿಧಾನಸಭೆ ಕಾರ್ಯವಿಧಾನಗಳು ಕಾಗದ ರಹಿತವನ್ನಾಗಿಸಿ ಇ-ವಿಧಾನ ವ್ಯವಸ್ಥೆ ಜಾರಿಗೊಳಿಸುತ್ತೇನೆ. ಜತೆಗೆ ಹೊಸ ಶಾಸಕರಿಗೆ ಸಂಸದೀಯ ಚಟುವಟಿಕೆಗಳ ಕುರಿತು ತರಬೇತಿ ನೀಡಲಾಗುವುದು. ಹಾಗೆಯೇ, ಸದಸ್ಯರೂ ಸದನದಲ್ಲಿ ಅಸಾಂವಿಧಾನಿಕವಾಗಿ ಮಾತನಾಡದೆ, ಜನರ ಸಮಸ್ಯೆ ನಿವಾರಿಸುವಂಥ ಕೆಲಸ ಮಾಡುತ್ತಾ ಸಹಕರಿಸಬೇಕು ಎಂದು ಕೋರಿದರು.ಸಿದ್ದು ನಮಗೆಲ್ಲ ಪ್ರೇರಣೆ-ಪಾಟೀಲ್:
ತಮ್ಮನ್ನು ಸ್ಪೀಕರ್ ಸ್ಥಾನಕ್ಕೆ ಆಯ್ಕೆ ಮಾಡಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದ ವರಿಷ್ಠರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿ ಎಲ್ಲ ನಾಯಕರಿಗೂ ಜಿ.ಎಸ್.ಪಾಟೀಲ್ ಧನ್ಯವಾದ ತಿಳಿಸಿದರು. ಅದರಲ್ಲೂ ತಮ್ಮ ಭಾಷಣ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಶೇಷವಾಗಿ ಸ್ಮರಿಸಿದ ಪಾಟೀಲ್, ಇತ್ತೀಚಿನ ದಿನಗಳಲ್ಲಿ ರಾಜಕೀಯ ಮೌಲ್ಯ ಕುಸಿಯುತ್ತಿದೆ. ಆದರೆ, ನಮ್ಮ ನಾಯಕರಾದ ಸಿದ್ದರಾಮಯ್ಯ ಅವರ ನಡವಳಿಕೆ, ಆಡಳಿತ ರಾಜಕೀಯ ಮೌಲ್ಯ ಎತ್ತಿ ಹಿಡಿದಿದ್ದು, ಅವರು ನಮ್ಮೆಲ್ಲರಿಗೂ ಪ್ರೇರಣೆ ಎಂದರು.