ಚನ್ನಪಟ್ಟಣ: ಪಠ್ಯ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಿಗೆ ಕೃಷಿ ಹಾಗೂ ಜೀವನ ಕೌಶಲ್ಯಗಳನ್ನು ಪರಿಚಯಿಸುವ ಉದ್ದೇಶದಿಂದ ಚಕ್ಕೆರೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಭಾರ್ತಿ ಏರ್‌ಟೆಲ್ ಫೌಂಡೇಷನ್ ಹಾಗೂ ನಿಸರ್ಗ ಸಿರಿ ಇಕೋ ಕ್ಲಬ್ ಸಹಯೋಗದಲ್ಲಿ ಅಣಬೆ ಬೇಸಾಯದ ಪ್ರಾಯೋಗಿಕ ತರಬೇತಿ ನೀಡಲಾಯಿತು.
ವಿದ್ಯಾರ್ಥಿಗಳು ಅಣಬೆ ಬೆಳೆಯಲು ಅಗತ್ಯ ವಾತಾವರಣ, ಬೀಜದ ಆಯ್ಕೆ, ಬೆಳೆಸುವ ವಿಧಾನ, ನಿರ್ವಹಣೆ ಹಾಗೂ ಕೊಯ್ಲಿನ ಹಂತಗಳ ಕುರಿತು ಪ್ರಾಯೋಗಿಕವಾಗಿ ಮಾಹಿತಿ ಪಡೆದುಕೊಂಡರು. ತರಬೇತಿ ಅಂಗವಾಗಿ ಶಾಲೆಯಲ್ಲಿಯೇ ಅಣಬೆ ಬೆಳೆಸಿ, ಕೊಯ್ಲು ಮಾಡಿ ಪ್ರದರ್ಶಿಸಿದರು.ಈ ಸಂದರ್ಭದಲ್ಲಿ ಭಾರ್ತಿ ಏರ್‌ಟೆಲ್ ಫೌಂಡೇಷನ್ ಸಂಯೋಜಕ ಯಶವಂತ್ ಮಾತನಾಡಿ, ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಕೃಷಿ ಹಾಗೂ ಕೌಶಲ್ಯಾಧಾರಿತ ಚಟುವಟಿಕೆಗಳ ಪರಿಚಯವಾಗಬೇಕು. ಇಂತಹ ಪ್ರಾಯೋಗಿಕ ಕಲಿಕೆಯು ವಿದ್ಯಾರ್ಥಿಗಳಲ್ಲಿ ಉದ್ಯಮಶೀಲ ಮನೋಭಾವ ಬೆಳೆಸುವುದರ ಜತೆಗೆ ಭವಿಷ್ಯದಲ್ಲಿ ಹೊಸ ಅವಕಾಶಗಳನ್ನು ಕಂಡುಕೊಳ್ಳಲು ನೆರವಾಗುತ್ತದೆ ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕ ಯೋಗೇಶ್ ಚಕ್ಕೆರೆ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತರಾಗದೆ, ಬದುಕಿಗೆ ಅಗತ್ಯವಾದ ಕೌಶಲ್ಯಗಳನ್ನು ಶಾಲೆಯಲ್ಲಿಯೇ ಕಲಿಯಬೇಕು. ಅಣಬೆ ಬೇಸಾಯದಂತಹ ಚಟುವಟಿಕೆಗಳು ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವುದರ ಜತೆಗೆ ಸ್ವಾವಲಂಬನೆಯ ಚಿಂತನೆ ಬೆಳೆಸುತ್ತವೆ ಎಂದರು.ಶಾಲೆಯ ಗಣಿತ ಶಿಕ್ಷಕ ಮಧುಸೂದನ್ ಹಾಗೂ ವಿಜ್ಞಾನ ಶಿಕ್ಷಕಿ ರಶ್ಮಿ ಅವರು ಅಣಬೆ ಬೇಸಾಯದ ಉಸ್ತುವಾರಿ ವಹಿಸಿಕೊಂಡು ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ಪ್ರಾಯೋಗಿಕ ತರಬೇತಿ ಹಾಗೂ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬಿ.ಕೆ. ಲತಾ, ರಾಜಣ್ಣ, ಶಶಿರೇಖಾ, ಶಶಿಕುಮಾರ್ ಹಾಗೂ ರಾಜೇಶ್ ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪೊಟೋ೧೪ಸಿಪಿಟಿ೨:
ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಕೆಪಿಎಸ್ ಶಾಲೆಯ ವಿದ್ಯಾರ್ಥಿಗಳಿಗೆ ಅಣಬೆ ಬೇಸಾಯ ತರಬೇತಿ ನೀಡಲಾಯಿತು.