ಕೊಪ್ಪಳ: ಸ್ವಾರ್ಥ, ಸ್ವಜನಪಕ್ಷಪಾತ ಸೇರಿದಂತೆ ಆಧುನಿಕ ಪಾಳೆಗಾರರಿಂದ ಪ್ರಜಾಪ್ರಭುತ್ವಕ್ಕೆ ಪೆಟ್ಟು ಬಿದ್ದಿದ್ದು, ಇದನ್ನು ಮಟ್ಟ ಹಾಕಲು ಅಹಿಂದ ವರ್ಗ ಎದ್ದು ನಿಲ್ಲಬೇಕು, ಹೆಂಡ, ಹಣಕ್ಕಾಗಿ ಮತ ಹಾಕದೆ ಸ್ವಾಭೀಮಾನದಿಂದ ಮತ ಚಲಾಯಿಸಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದ್ದಾರೆ.
ಹಿಂದೆ ಇದ್ದಂತೆ ಈಗಲೂ ಪಾಳೆಗಾರಿಕೆ ಇದೆ. ಹೀಗಾಗಿ, ಶೋಷಿತರು, ಧಮನಿತರ ಕಲ್ಯಾಣವಾಗುತ್ತಿಲ್ಲ. ಇದಕ್ಕಾಗಿ ಗುಂಡಿಗೆ ಗಟ್ಟಿ ಮಾಡಿಕೊಂಡು ಪ್ರಶ್ನೆ ಮಾಡುವ ಮನೋಭಾವನೆ ರೂಢಿಸಿಕೊಳ್ಳಬೇಕು ಎಂದರು.
ಡಾ. ಬಿ.ಆರ್.ಅಂಬೇಡ್ಕರ್ ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ. ಆದರೆ ಸಂವಿಧಾನದ ಆಶಯಗಳು ೭೮ ವರ್ಷ ಕಳೆದರೂ ಸಂಪೂರ್ಣ ಜಾರಿಯಾಗಿಲ್ಲ. ನಮ್ಮ ಹಿಂದಿನ ನಾಯಕರು ಜನಪರ ಚಿಂತನೆ ಮಾಡುತ್ತಿದ್ದರು. ಆದರೆ ಇಂದಿನ ರಾಜಕೀಯ ವ್ಯವಸ್ಥೆ ಕೆಟ್ಟಿದ್ದು, ಸ್ವಾರ್ಥತೆ ಹೆಚ್ಚಾಗಿದೆ. ಜಾತಿ ಮತ್ತು ಹಣಬಲದಿಂದ ಕೆಲವು ರಾಜಕಾರಣಿಗಳು ಜನರ ಮೇಲೆ ಅಧಿಪತ್ಯ ಸಾಧಿಸುತ್ತಿದ್ದಾರೆ. ಸಂವಿಧಾನದ ಮೀಸಲಾತಿ ಲಾಭ ಕೆಲವೇ ಕೆಲವು ಕುಟುಂಬಗಳು ದೋಚಿಕೊಂಡಿವೆ ಎಂದರು.ರಾಜ್ಯದಲ್ಲಿ ಎಸ್‌ಸಿ ಸಮುದಾಯ ಶೇ.೧೭.೧ ಎಸ್‌ಟಿ ಶೇ.೭, ಅಲ್ಪಸಂಖ್ಯಾತರು ಶೇ.೧೬ ಹಾಗೂ ಹಿಂದುಳಿದ ವರ್ಗದವರು ಶೇ.೩೨ರಷ್ಟು ಜನರಿದ್ದಾರೆ. ಇವರೆಲ್ಲರೂ ಒಗ್ಗಟ್ಟಾಗಿ ಸಂಘಟಿತರಾಗಬೇಕು. ಒಂದೆಡೆ ಮೀಸಲಾತಿ ಶೇ. ೫೦ ಮೀರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಮತ್ತೊಂದು ತೀರ್ಪಿನಲ್ಲಿ ವಿಭಿನ್ನ ಅರ್ಥ ನೀಡಿದೆ. ಆದರೆ ಮೀಸಲಾತಿಯ ವಿಚಾರದಲ್ಲಿ ಶಾಸಕರಾದವರು ಅವಲೋಕನ ಮಾಡಬೇಕು. ಕೋರ್ಟ್‌ಗಳ ತೀರ್ಪು ಓದಿ ಅಧ್ಯಯನ ಮಾಡಬೇಕು. ಆದರೆ ಇಂದಿನ ಶಾಸಕರಿಗೆ ಸಂವಿಧಾನದ ಪರಿಪೂರ್ಣ ಮಾಹಿತಿ ಇಲ್ಲದಂತಾಗಿದೆ. ಈ ದೇಶದಲ್ಲಿ ಶಾಸಕರಿಗೆ ಕಾನೂನು ರೂಪಿಸುವ ಅಧಿಕಾರವಿದೆ. ಬಳಕೆ ಇಲ್ಲದ ಕಾನೂನು ತೆಗೆದು ಹಾಕುವ ಜವಾಬ್ದಾರಿಯೂ ಅವರ ಮೇಲಿದೆ. ಶಾಸಕರಿಗೆ ಸಂವಿಧಾನ ಗೊತ್ತಿರಬೇಕು. ವಿಧಾನಸಭೆ ಹಾಗೂ ಸಂಸತ್‌ನಲ್ಲಿ ಸಂವಿಧಾನ ತಿಳಿದವರು ತುಂಬ ವಿರಳ ಎಂದು ನೋವಿನಿಂದ ಹೇಳಿದರು.
ಆಹ್ವಾನ ಪತ್ರಿಕೆಯಲ್ಲಿ ನೂರು ಗಣ್ಯರ ಹೆಸರು ಹಾಕಿಸಿದ್ದರೂ ಬಂದಿದ್ದು ಕೇವಲ ಹತ್ತು. ಇದರಿಂದಲೇ ಗೊತ್ತಾಗುತ್ತದೆ ನೀವಿನ್ನು ಶಕ್ತರಾಗಿಲ್ಲ. ಅಂಥವರಿಗೆ ಬಿಸಿಮುಟ್ಟಿಸುವ ಶಕ್ತಿ ನಿಮ್ಮದಾದರೇ ಖಂಡಿತವಾಗಿಯೂ ಅವರು ಬಂದೇ ಬರುತ್ತಾರೆ ಎಂದರು.