-ಪ್ರಾಚಾರ್ಯ ಪ್ರೊ.ರಾಜು ಅಭಿಮತ । ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆ ಮತ್ತು ಬಹುಮತದ ಆಡಳಿತವಲ್ಲ; ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಅವಕಾಶ, ಗೌರವ ಮತ್ತು ಹಕ್ಕುಗಳು ದೊರೆಯುವ ಜೀವನ ವಿಧಾನವೂ ಆಗಿದೆ. ಜಾತಿ, ಧರ್ಮ, ಲಿಂಗ ಅಥವಾ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಯಾವುದೇ ರೀತಿಯ ತಾರತಮ್ಯ ಇರಬಾರದು ಎಂದು ರಿಪ್ಪನ್‌ಪೇಟೆ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಬಿ.ಎಲ್.ರಾಜು ಹೇಳಿದರು.ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಪ್ರಜಾಪ್ರಭುತ್ವವು ಕೇವಲ ಮತ ಚಲಾಯಿಸುವುದಕ್ಕೆ ಸೀಮಿತವಾಗಿರದೆ, ಪ್ರತಿಯೊಬ್ಬ ನಾಗರಿಕನು ತನ್ನ ಹಕ್ಕುಗಳನ್ನು ಅರಿತುಕೊಳ್ಳುವುದರ ಜೊತೆಗೆ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದನ್ನೂ ಒಳಗೊಂಡಿದೆ ಎಂದರು.
ಪ್ರಜಾಪ್ರಭುತ್ವದ ಪ್ರಮುಖ ಶಿಲ್ಪಿಗಳಾದ ಅಂಬೇಡ್ಕರ್ ಅವರು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯವನ್ನು ಪ್ರಜಾಪ್ರಭುತ್ವದ ಮೂಲ ಮೌಲ್ಯಗಳಾಗಿ ಪ್ರತಿಪಾದಿಸಿದರು. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮೂಲಭೂತ ಹಕ್ಕುಗಳು, ಕಾನೂನಿನ ಮುಂದೆ ಸಮಾನತೆ, ಅಸ್ಪೃಶ್ಯತೆ ನಿರ್ಮೂಲನೆ, ಸಾಮಾಜಿಕ ನ್ಯಾಯ ಮತ್ತು ದುರ್ಬಲ ವರ್ಗಗಳ ರಕ್ಷಣೆಗೆ ಬಲವಾದ ಅಡಿಪಾಯ ಹಾಕಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಮಾತನಾಡಿ, ಸಂವಿಧಾನ ಮುಖ್ಯ ಅಂಗಗಳಲ್ಲಿ ಕಾರ್ಯಾಂಗ ಪ್ರಮುಖ ಪಾತ್ರ ವಹಿಸುತ್ತದೆ. ಶಾಸಕಾಂಗ ಕಾನೂನು ರೂಪಿಸಿದರೆ, ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಕಾರ್ಯಾಂಗ ಸಕ್ರಿಯವಾಗಿರುತ್ತದೆ.
ಜಿಪಂ ಸಿಇಒ ಎನ್.ಹೇಮಂತ್ ಮಾತನಾಡಿ, ಪ್ರಜಾಪ್ರಭುತ್ವದ ಯಶಸ್ಸು ಅಡಗಿರುವುದೇ ಜನನಾಯಕನನ್ನು ಆಯ್ಕೆ ಮಾಡುವ ಮತದಾರರಿಂದ. ಮತದಾನ ನಿರ್ಲಕ್ಷಿಸುವುದರಿಂದ ಪ್ರಜಾಪ್ರಭುತ್ವದ ಯಶಸ್ಸು ಸಾಧ್ಯವಿಲ್ಲ. ಪ್ರತಿ ಮತವೂ ಅಮೂಲ್ಯ. ಪ್ರತಿ ವ್ಯಕ್ತಿ ತಾನು ಉಮೇದುವಾರನ ಮೇಲೆ, ಪ್ರಜಾಪ್ರಭುತ್ವದ ಮೇಲೆ ಹೊಂದಿರುವ ನಂಬಿಕೆಯಿಂದ ಮತ ಚಲಾಯಿಸಬೇಕು ಎಂದರು.
ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಎ.ಜಿ.ಕಾರಿಯಪ್ಪ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮಲ್ಲೇಶಪ್ಪ ಇದ್ದರು.
ಸಭೆಯಿಂದ ಹೊರನಡೆದ ಶಾಸಕ ಚನ್ನಬಸಪ್ಪ
ಕೇಂದ್ರದ ಕಾನೂನಿನ ವಿರುದ್ಧ ರಾಜ್ಯ ನಡೆದುಕೊಳ್ಳಲು ಬರಲ್ಲ ರೀ, ಕಾನೂನು ಗಾಳಿಗೆ ತೂರುತ್ತೀರಾ ಎಂದು ಶಾಸಕರು ಆಕ್ರೋಶಗೊಂಡಾಗ
ಕೇಂದ್ರ ಒಂದು, ರಾಜ್ಯ ಒಂದು ಆದೇಶ ಮಾಡಿದ್ರೆ, ಅಧಿಕಾರಿಗಳು ಏನು ಮಾಡ್ತಾರೆ..? ನೀವು ಹೇಳಿದಂಗೆ ಮಾಡಿದರೆ ಅಧಿಕಾರಿಗಳಿಗೆ ನೋಟಿಸ್ ನೀಡುತ್ತಾರೆ ಎಂದು ನೀವು ಸರ್ಕಾರಕ್ಕೆ ಹೇಳಿ, ಅಧಿಕಾರಿಗಳಿಗೆ ತೊಂದರೆಯಾಗುತ್ತೇ ಎಂದ ಡಿಎಸ್ಎಸ್ ಮುಖಂಡರು ಶಾಸಕರ ಜೊತೆ ವಾಗ್ದಾಳಿಗೆ ಇಳಿದರು.ವಂದೇ ಮಾತರಂ ಗೀತೆಗೆ ಗೌರವ ಕೊಡದಿರೋ ವೇದಿಕೆಯಲ್ಲಿ ನಾನು ಇರಲ್ಲ. ನೀವು ಇರೀ.. ಎಂದು ಕಾರ್ಯಕ್ರಮದಿಂದ ಶಾಸಕ ಚನ್ನಬಸಪ್ಪ ಹೊರ ನಡೆದರು.
------------------------ಪೋಟೋ: 15ಎಸ್‌ಎಂಜಿಕೆಪಿ02
ಶಿವಮೊಗ್ಗ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಉದ್ಘಾಟಿಸಿದರು.