ಪ್ರಾಮಾಣಿಕ ಮತದಾನದಿಂದ ಪ್ರಜಾಪ್ರಭುತ್ವ ಯಶಸ್ವಿ: ಸಿವಿಲ್ ನ್ಯಾಯಾಧೀಶೆ ರೋಹಿಣಿ ಬಸಾಪೂರ

KannadaprabhaNewsNetwork | Published : Jan 26, 2024 1:46 AM

ಸಾರಾಂಶ

ದೇಶದ ಪ್ರಜೆಗಳು ಜಾತಿ, ಮತ, ಪಂಥ, ಹಣ ಹಾಗೂ ಆಮಿಷಗಳಿಗೆ ಬಲಿಯಾಗದೇ ಪ್ರಾಮಾಣಿಕವಾಗಿ ನಿಷ್ಪಕ್ಷಪಾತವಾಗಿ ಮತದಾನ ಮಾಡಿದರೆ ಮಾತ್ರ ಅತ್ಯುತ್ತಮ ಶಾಸಕಾಂಗ ರೂಪ ತಾಳಿ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ.

ದಾಂಡೇಲಿ:

ದೇಶದ ಪ್ರಜೆಗಳು ಜಾತಿ, ಮತ, ಪಂಥ, ಹಣ ಹಾಗೂ ಆಮಿಷಗಳಿಗೆ ಬಲಿಯಾಗದೇ ಪ್ರಾಮಾಣಿಕವಾಗಿ ನಿಷ್ಪಕ್ಷಪಾತವಾಗಿ ಮತದಾನ ಮಾಡಿದರೆ ಮಾತ್ರ ಅತ್ಯುತ್ತಮ ಶಾಸಕಾಂಗ ರೂಪ ತಾಳಿ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಅಂತಹ ಪ್ರಾಮಾಣಿಕತೆ ಮೆರೆಯುವ ಮೂಲಕ ದೇಶದ ಪ್ರಜಾಪ್ರಭುತ್ವವನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ನೈತಿಕ ಜವಾಬ್ದಾರಿಯಾಗಿದೆ ಎಂದು ದಾಂಡೇಲಿಯ ಸಿವಿಲ್ ನ್ಯಾಯಾಧೀಶರಾದ ರೋಹಿಣಿ ಬಸಾಪೂರ ಹೇಳಿದರು.

ಅವರು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಹಸೀಲ್ದಾರ್ ಕಚೇರಿ ದಾಂಡೇಲಿ, ತಾಲೂಕು ಕಾನೂನು ಸೇವಾ ಸಮಿತಿ ದಾಂಡೇಲಿ ಹಾಗೂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗಗಳ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಹಾಗೂ ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಮತದಾರರ ಪಾತ್ರ ವಿಷಯದ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ತಹಸೀಲ್ದಾರ್‌ ಶೈಲೇಶ ಪರಮಾನಂದ ಮಾತನಾಡಿ, ಭಾರತದಲ್ಲಿ ಚುನಾವಣಾ ಆಯೋಗ ಆರಂಭವಾದ ದಿನವನ್ನು ಮತದಾರರ ದಿನವನ್ನಾಗಿ ಆಚರಿಸುತ್ತಿದ್ದು ಮತದಾನದ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.ಸಹ ಪ್ರಾಧ್ಯಾಪಕ ಪ್ರೊ, ಬಸವರಾಜ ಪೂಜಾರ ಹಾಗೂ ಉಪನ್ಯಾಸಕ, ಪ್ರೊ. ಬಿ.ಎಂ. ನದಿಮುಲ್ಲಾ, ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಮತದಾರರ ಪಾತ್ರ ಕುರಿತು ಉಪನ್ಯಾಸ ನೀಡಿದರು. ಡಾ. ಬಸವರಾಜ ಎನ್. ಅಕ್ಕಿ, ಪ್ರೊ. ಯು.ಎಸ್. ಪಾಟೀಲ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನಾಸೀರಅಹ್ಮದ್‌ ಜಂಗೂಭಾಯಿ ಇದ್ದರು. ಆರ್‌ಐ ಗೋಪಿನಾಥ ಚವ್ಹಾಣ ವಿದ್ಯುನ್ಮಾನ ಮತ ಯಂತ್ರದ ವ್ಯವಸ್ಥೆಯ ಪ್ರಾತ್ಯಕ್ಷಿಕೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಂ.ಡಿ. ಒಕ್ಕುಂದ ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು. ಅತ್ಯುತ್ತಮ ಕಾರ್ಯನಿರ್ವಹಸಿದ ಬಿಎಲ್‌ಒ, ತಹಸೀಲ್ದಾರ್ ಕಚೇರಿಯಿಂದ ಸಂಘಟಿಸಿದ ವಿವಿಧ ಸ್ಪರ್ಧೆ, ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಿಂದ ನಡೆಸಿದ ಸ್ಪರ್ಧೆ ವಿಜೆತರಿಗೆ ಬಹುಮಾನ ವಿತರಿಸಲಾಯಿತು. ಇದೇ ವೇಳೆ ಯುವ ಮತದಾರರಿಗೆ ಚುನಾವಣಾ ಗುರುತಿನ ಚೀಟಿ ವಿತರಿಸಲಾಯಿತು.

Share this article