ಹೈಕೋರ್ಟ್ ಆದೇಶ ಉಲ್ಲಂಘಿಸಿ ಕೈಗಾರಿಕಾ ಶೆಡ್‌ ಧ್ವಂಸ

KannadaprabhaNewsNetwork | Published : Feb 17, 2025 12:34 AM

ಸಾರಾಂಶ

ಕನಕಪುರ: 40 ವರ್ಷಗಳಿಂದ ಅನುಭವದಲ್ಲಿರುವ ನಮ್ಮ ಕೈಗಾರಿಕಾ ಶೆಡ್‌ ಮೇಲೆ ಏಕಾಏಕಿ ಧ್ವಂಸಗೊಳಿಸಿರು ಹಾರೋಹಳ್ಳಿ ತಹಸೀಲ್ದಾರ್ ಶಿವಕುಮಾರರನ್ನು ರಾಜ್ಯ ಸರ್ಕಾರ ಕೂಡಲೇ ಅಮಾನತು ಮಾಡಬೇಕು ಎಂದು ಕುಲುಮೇ ಭೀಮಸಂದ್ರ ಗ್ರಾಮದ ಹೊನ್ನೀರೇಗೌಡ ಆಗ್ರಹಿಸಿದರು.

ಕನಕಪುರ: 40 ವರ್ಷಗಳಿಂದ ಅನುಭವದಲ್ಲಿರುವ ನಮ್ಮ ಕೈಗಾರಿಕಾ ಶೆಡ್‌ ಮೇಲೆ ಏಕಾಏಕಿ ಧ್ವಂಸಗೊಳಿಸಿರು ಹಾರೋಹಳ್ಳಿ ತಹಸೀಲ್ದಾರ್ ಶಿವಕುಮಾರರನ್ನು ರಾಜ್ಯ ಸರ್ಕಾರ ಕೂಡಲೇ ಅಮಾನತು ಮಾಡಬೇಕು ಎಂದು ಕುಲುಮೇ ಭೀಮಸಂದ್ರ ಗ್ರಾಮದ ಹೊನ್ನೀರೇಗೌಡ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾರೋಹಳ್ಳಿಯ ಬಿಡದಿ ರಸ್ತೆಯಲ್ಲಿರುವ ಕುಲುಮೇ ಭೀಮಸಂದ್ರ ಗ್ರಾಮದ ಸರ್ವೆ ನಂ.573ರ ಎರಡು ಎಕರೆ ಜನೀನು ಸ್ವಯಾರ್ಜಿತ ಆಸ್ತಿ ಹಾಗೂ ಹಾರೋಹಳ್ಳಿ ಪಟ್ಟಣ ಪಂಚಾಯಿತಿಯ

ಖಾನೇಶ್ವರಿ ನಂ. 64/629/27ರಲ್ಲಿ 10 ಗುಂಟೆ ಆಸ್ತಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಿ ಹಾರೋಹಳ್ಳಿ ಗ್ರಾಪಂಗೆ ಕಂದಾಯ ಕಟ್ಟುತ್ತಿದ್ದೇವೆ. ಕೈಗಾರಿಕಾ ಬಳಕೆಗಾಗಿ ಶೆಡ್ ನಿರ್ಮಿಸಿದ್ದೇವೆ. ಈ ಸಂಬಂಧ ಸದರಿ ಸ್ವತ್ತಿಗೆ ಪಹಣಿ, ಸ್ಕೆಚ್ ಸೇರಿದಂತೆ ಎಲ್ಲಾ ದಾಖಲಾತಿಗಳು ಇವೆ. ಕೈಗಾರಿಕಾ ಶೆಡ್ ನಿರ್ಮಾಣದ ವೇಳೆ ಜಿಲ್ಲಾ ಹಾಗೂ ಸ್ಥಳೀಯ ಪಂಚಾಯಿತಿಯಿಂದ ದೃಢೀಕರಣ ಪತ್ರ ಪಡೆದಿದ್ದೇವೆ ಎಂದು ಮಾಹಿತಿ ನೀಡಿದರು.

ರಾಜ್ಯ ಸರ್ಕಾರ ಕೈಗಾರಿಕಾ ವಸಾಹತು ಪ್ರದೇಶಕ್ಕಾಗಿ ನಮ್ಮ ಸ್ವತ್ತನ್ನು ವಶಪಡಿಸಿಕೊಳ್ಳಲು ಮುಂದಾದ ವೇಳೆ ಈ ಬಗ್ಗೆ ಕನಕಪುರ ನ್ಯಾಯಾಲಯದಲ್ಲಿ ದಾವೆ ಹೂಡಿದ(ದಾವೆ ಸಂಖ್ಯೆ 341/2015) ಹಿನ್ನೆಲೆಯಲ್ಲಿ ಸಿವಿಲ್ ಹಾಗೂ ಜೆಎಂಎಫ್‌ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಸದರಿ ವಿಷಯವಾಗಿ ರಾಜ್ಯ ಹೈಕೋರ್ಟ್‌ ಆರ್‌ಎಫ್‌ಎ 582/ 2021ರಂದು ಸದರಿ ಜಾಗದ ವಿಷಯವಾಗಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಹಾಗೂ ಅನ್ಯವ್ಯಕ್ತಿಗಳು ಸದರಿ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡದಂತೆ ಆದೇಶ ನೀಡಿದೆ ಎಂದು ದಾಖಲೆಗಳನ್ನು ಪ್ರದರ್ಶಿಸಿ, ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಿ ಈಗಾಗಲೇ ನಮಗಾಗಿರುವ ನಷ್ಟಕ್ಕೆ ಪರಿಹಾರ ಒದಗಿಸಿಕೊಡುವಂತೆ ಮನವಿ ಮಾಡಿದರು. ವಿರೇಗೌಡರ ಮಗ ಚಿರಂಜೀವಿ ಮಾತನಾಡಿ, ನಮ್ಮ ಸ್ವತ್ತಿನ ಜಾಗದ ಮೇಲೆ ಯಾವುದೇ ಆಕ್ಷೇಪಣೆಗಳು ಇಲ್ಲದಿದ್ದರೂ ಹಾರೋಹಳ್ಳಿ ತಹಸೀಲ್ದಾರ್ ನಮಗೆ ನೋಟೀಸ್‌ ನೀಡದೆ ಫೆ.13ರಂದು ಏಕಾಏಕಿ ಬಂದು ಸದರಿ ಜಾಗದಲ್ಲಿದ್ದ ಶೆಡ್ ಕೆಡವಿ ಹಾಕಿದ್ದಲ್ಲದೆ ನನ್ನ ಹಾಗೂ ನಮ್ಮ ತಂದೆ ದೌರ್ಜನ್ಯದಿಂದ ವರ್ತಿಸಿ ಜೆಸಿಬಿಯಿಂದ ಶೆಡ್‌ ಅನ್ನು ಧ್ವಂಸಗೊಳಿಸಿದ್ದಾರೆಂದು ಆರೋಪಿಸಿದರು.

ನಲವತ್ತು ಉದ್ಯೋಗಿಗಳು ಕೈಗಾರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ತಹಸೀಲ್ದಾರ್ ಹಾಗೂ ಸಿಬ್ಬಂದಿ ನಮಗೆ ಯಾವುದೇ ತಿಳಿವಳಿಕೆ ಹಾಗು ಮುನ್ನೆಚ್ಚರಿಕೆ ಪತ್ರ ನೀಡದೆ ಏಕಾಏಕಿ ಬಂದು ಕೈಗಾರಿಕಾ ಶೆಡ್ ಅನ್ನು ದ್ವಂಸಗೊಳಿಸಿ, ಬಡ ಕುಟುಂಬಗಳು ಬೀದಿ ಪಾಲಾಗಿದ್ದಲ್ಲದೆ, ನಾವು ಕೈಗಾರಿಕೆ ಮೇಲೆ ಹಾಕಿರುವ ಬಂಡವಾಳಕ್ಕೂ ಧಕ್ಕೆ ಬಂದಿದೆ. ನ್ಯಾಯಾಲಯಗಳು ನೀಡಿರುವ ಆದೇಶವನ್ನು ಧಿಕ್ಕರಿಸಿ ಸರ್ವಾಧಿಕಾರಿಯಂತೆ ವರ್ತಿಸಿರುವ ತಹಸೀಲ್ದಾರ್ ಶಿವಕುಮಾರ್ ವಿರುದ್ಧ ಕಾನೂನು ಹೋರಾಟ

ಮಾಡಲಿದ್ದೇವೆ. ಈ ಕುರಿತು ಡಿಸಿ, ಸಿಎಂ, ಲೋಕಾಯುಕ್ತರಿಗೂ ದೂರು ಸಲ್ಲಿಸುವುದಾಗಿ ತಿಳಿಸಿದರು.

ಕೆ ಕೆ ಪಿ ಸುದ್ದಿ 02: ಏಕಾಏಕಿ ಕೈಗಾರಿಕಾ ಶೆಡ್‌ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿರುವ ಹಾರೋಹಳ್ಳಿ ತಹಸೀಲ್ದಾರ್ ವರ್ತತೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುದ್ದಿಗೋಷ್ಠಿಯಲ್ಲಿ ನೊಂದ ರೈತ ಕುಟುಂಬ ಡಿಸಿಗೆ ಮನವಿ ಮಾಡಿದರು.

Share this article