ಕನ್ನಡಪ್ರಭ ವಾರ್ತೆ ಕಡೂರು
ಶುಕ್ರವಾರ ಶಾಲೆಯ ನೂರಾರು ಮಕ್ಕಳನ್ನು ತಂಗಲಿ ಕೆರೆ ಕೋಡಿ ಬಳಿ ಕರೆದೊಯ್ದು ಮಕ್ಕಳಿಗೆ ಶುದ್ದ ನೀರಿನ ಉತ್ಪಾದನೆ, ಪರಿಸರ ಸಂರಕ್ಷಣೆ, ಮನೆ ಸುತ್ತಮುತ್ತ ಸ್ವಚ್ಛ ಪರಿಸರ ನಿರ್ಮಾಣ, ನೀರಿನ ಮರು ಬಳಕೆ, ತ್ಯಾಜ್ಯ ವಸ್ತುಗಳ ಮರು ಬಳಕೆ ವಿಧಾನ, ವಿಲೇವಾರಿ ಆಗದ ವಸ್ತುಗಳ ನಿರ್ವಹಣೆ ಮತ್ತಿತರ ವಿಷಯಗಳು ಹಾಗೂ ಆರೋಗ್ಯಕರ ಪರಿಸರ ಮೂಡಿಸುವ ಕುರಿತು ಅನುಭವಿ ತಜ್ಞರಿಂದ ಮಕ್ಕಳಿಗೆ ಹೊರ ಪಾಠ ಮಾಡಲಾಯಿತು.
ಕೃಷಿ ವಿಜ್ಞಾನಿ ಬಿಸಲೇಹಳ್ಳಿ ನಟರಾಜ್, ಪರಿಸರ ಸಂರಕ್ಷಣೆ ಕುರಿತಂತೆ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿ ಮಕ್ಕಳ ಕುತೂಹಲ ತಣಿಸಿದರು. ಮಣ್ಣು, ನೀರು ಮತ್ತು ಗಾಳಿ ನಮಗೆ ಅತಿ ಮುಖ್ಯ. ನಮ್ಮ ಜೀವನ ಶೈಲಿಯಿಂದ ಪರಿಸರ ಹಾಳಾಗಲು ನಾವೇ ಕಾರಣ. ಹಾಗಾಗಿ, ಪರಿಸರ ಜಾಗೃತಿ ಬೇಕಾಗಿದೆ. ಶಾಲಾ ಹಂತದಲ್ಲೇ ಇವುಗಳ ಬಗ್ಗೆ ಅರಿವು ಮೂಡಿಸ ಬೇಕು. ಮಿತ ನೀರಿಕೆ ಬಳಕೆಗೆ ಮಳೆ ನೀರು ಕೊಯ್ಲು , ಸಾಮೂಹಿಕ ಸಾರಿಗೆಬಳಕೆಯಿಂದ ಹವಾಮಾನ ವೈಪರೀತ್ಯ ತಡೆಗಟ್ಟಬಹುದು. ವೈಜ್ಞಾನಿಕವಾಗಿ ಮಣ್ಣಿನ ಫಲವತ್ತತೆ ಕಾಪಾಡುವುದು, ಕೈ ತೋಟಗಳನ್ನು ನಿರ್ಮಿಸಿ ಉಪಯುಕ್ತ ಉತ್ತಮ ಆಹಾರ ಬೆಳೆಯುವುದು, ಪ್ಲಾಸ್ಟಿಕ್ ಬಳಕೆ ಹೇಗೆ ಕಡಿಮೆ ಮಾಡಬೇಕು ಎಂದು ತಿಳಿಸಿದರು.ಶಾಲೆ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಎನ್.ಪಿ. ಮಂಜುನಾಥ ಪ್ರಸನ್ನ ಮಾತನಾಡಿ, ಭವಿಷ್ಯದ ಪ್ರಜೆಗಳು ಪರಿಸರ ಸ್ವಚ್ಛವಾಗಿಟ್ಟು ಹವಾಮಾನ ವೈಪರೀತ್ಯ ಕಾಪಾಡಿದರೆ ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ಈ ನಿಟ್ಟಲ್ಲಿ ನಮ್ಮ ಶಾಲೆಯಿಂದ ಪರಿಸರ ದಿನಾಚರಣೆ ಆಚರಿಸುತ್ತಾ, ಪರಿಸರಕ್ಕೆ ತಮ್ಮ ಕೊಡುಗೆ ಏನೆಂದು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಮನೆಗಳ ಅಕ್ಕಪಕ್ಕದಲ್ಲಿ ಸ್ವಚ್ಛತೆ ಮತ್ತು ಪರಿಸರ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ನುಡಿದರು.
5ಕೆಕೆಡಿಯು1,1ಎ.