ಕುಷ್ಟಗಿ ತಾಲೂಕಿನಲ್ಲಿ 3ಕ್ಕೇರಿದ ಡೆಂಘೀ ಪ್ರಕರಣ

KannadaprabhaNewsNetwork |  
Published : Jun 10, 2025, 07:04 AM ISTUpdated : Jun 10, 2025, 07:05 AM IST
ಪೋಟೊ9ಕೆಎಸಟಿ1: ಲಾರ್ವಾ ಸರ್ವೆ ಮಾಡುತ್ತಿರುವ ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳು. 9ಕೆಎಸಟಿ1ಎ: ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದಲ್ಲಿ ಅಸ್ವಚ್ಚತೆಯಿಂದ ಕೂಡಿದ ರಸ್ತೆ. | Kannada Prabha

ಸಾರಾಂಶ

ಮುಂಗಾರು ಹಂಗಾಮಿನಲ್ಲಿ ಮೋಡಕವಿದ ವಾತಾವರಣದ ಪರಿಣಾಮ ಜನರಿಗೆ ವೈರಲ್ ಜ್ವರವೂ ಬಾಧಿಸುತ್ತಿದೆ. ಖಾಸಗಿ ಆಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳು ಜನರಿಂದ ತುಂಬಿವೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ:

ತಾಲೂಕಿನಲ್ಲಿ ಡೆಂಘೀ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮೂರಕ್ಕೇರಿದ್ದು, ತಾಲೂಕಿನ ಜನತೆಯಲ್ಲಿ ಆತಂಕ ಶುರುವಾಗಿದೆ.

ತಾಲೂಕಿನ ಕೇಸೂರು, ಹುಲಿಯಾಪುರ, ನೆರೆಬೆಂಚಿ ಗ್ರಾಮದಲ್ಲಿ ತಲಾ ಒಂದರಂತೆ ಒಟ್ಟು ಮೂರು ಜನರಲ್ಲಿ ಡೆಂಘೀ ಪ್ರಕರಣ ಕಂಡು ಬಂದಿದ್ದು, ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಲಾರ್ವಾ ಸರ್ವೇ:

ಪಟ್ಟಣ ಸೇರಿದಂತೆ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಆಶಾ ಕಾರ್ಯಕರ್ತರೊಡನೆ ತಂಡ ರಚಿಸಿಕೊಂಡು ನಿತ್ಯ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುವ ಜತೆಗೆ ಡೆಂಘೀ ಜ್ವರ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಮನೆ ಸುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡುತ್ತಿದ್ದು, ಸೊಳ್ಳೆಗಳ ತಾಣ ಪರಿಶೀಲಿಸುತ್ತಿದ್ದಾರೆ. ಆರೋಗ್ಯದ ಜಾಗೃತಿ ಮೂಡಿಸುವ ಮೂಲಕ ಅಗತ್ಯವಿರುವ ಕಡೆ ಔಷಧವನ್ನೂ ಸಿಬ್ಬಂದಿ ವಿತರಿಸುತ್ತಿದ್ದಾರೆ.

ವೈರಲ್ ಜ್ವರ:

ಮುಂಗಾರು ಹಂಗಾಮಿನಲ್ಲಿ ಮೋಡಕವಿದ ವಾತಾವರಣದ ಪರಿಣಾಮ ಜನರಿಗೆ ವೈರಲ್ ಜ್ವರವೂ ಬಾಧಿಸುತ್ತಿದೆ. ಖಾಸಗಿ ಆಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳು ಜನರಿಂದ ತುಂಬಿವೆ. ತಾಲೂಕಿನಲ್ಲಿ ಡೆಂಘೀ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚರಂಡಿ ಸ್ವಚ್ಛತೆ, ರಸ್ತೆಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಬ್ಲೀಚಿಂಗ್ ಫೌಡರ್, ಫಾಗಿಂಗ್ ಮಾಡಿಸುವ ಕಾರ್ಯ ತುರ್ತು ನಡೆಯಬೇಕಿದೆ.

ರೋಗ ಲಕ್ಷಣ:

ಇದ್ದಕ್ಕಿದ್ದಂತೆ ಜ್ವರ, ಕಣ್ಣಿನ ಹಿಂಭಾಗದಲ್ಲಿ ನೋವು, ತಲೆನೋವು, ಮೈಕೈ, ಕೀಲು ನೋವು, ವಾಂತಿ, ಹೊಟ್ಟೆ ನೋವು, ಚರ್ಮದ ಮೇಲೆ ಕೆಂಪಾದ ಗುರುತುಗಳು, ವಿಪರೀತ ಬಾಯಾರಿಕೆ, ರಕ್ತದ ಒತ್ತಡದ ಕುಸಿತ, ನಾಡಿ ಬಡಿತದ ಕುಸಿತಗಳು ರೋಗದ ಲಕ್ಷಣಗಳಾಗಿವೆ. ಇವು ಕಂಡು ಬಂದರೆ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು.

ಮುಂಜಾಗ್ರತಾ ಕ್ರಮ:

ನೀರು ಸಂಗ್ರಹಿಸುವ ತೊಟ್ಟಿಯನ್ನು ವಾರಕ್ಕೊಮ್ಮೆ ಖಾಲಿ ಮಾಡಿ ತೊಳೆದು, ಒಣಗಿಸಿ ನೀರು ತುಂಬುವುದು, ಬಾಟಲಿ, ಟಿನ್, ಟೈರು ಇತ್ಯಾದಿ ಘನತ್ಯಾಜ್ಯ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸುವುದು, ಮೈ ತುಂಬಾ ಬಟ್ಟೆ ಧರಿಸುವುದು, ಗರ್ಭಿಣಿಯರು, ಮಕ್ಕಳು ಮತ್ತು ವಯೋವೃದ್ಧರು ಮಲಗುವಾಗ ಸೊಳ್ಳೆ ಪರದೆ ಉಪಯೋಗಿಸಬೇಕು. ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿರೋಧಕ ಜಾಲರಿ ಅಳವಡಿಸಿ ಮುಂಜಾಗ್ರತೆ ಕ್ರಮ ಅನುಸರಿಸಬೇಕಿದೆ.

ಕುಷ್ಟಗಿ ತಾಲೂಕಿನಲ್ಲಿ ಮೂರು ಡೆಂಘೀ ಪ್ರಕರಣ ಕಂಡು ಬಂದಿದ್ದು ಫಾಗಿಂಗ್ ಮಾಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಲಾರ್ವಾ ಸರ್ವೆ ಮೂಲಕ ಜಾಗೃತಿ ಮೂಡಿಸುತ್ತಿದ್ದು, ಡೆಂಘೀ ನಿಯಂತ್ರಣಕ್ಕಾಗಿ ಎಲ್ಲ ಕ್ರಮಕೈಗೊಳ್ಳಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಆನಂದ ಗೋಟೂರ ಹೇಳಿದರು.

ಕೇಸೂರಿನಲ್ಲಿ ಒಂದು ಡೆಂಘೀ ಪ್ರಕರಣ ಕಂಡು ಬಂದಿದ್ದು ಮುಂಜಾಗ್ರತಾ ಕ್ರಮವಾಗಿ ಬ್ಲೀಚಿಂಗ್ ಪೌಂಡರ್ ಹಾಗೂ ಫಾಗಿಂಗ್ ಮಾಡಿಸಲಾಗುತ್ತಿದೆ. ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ ಎಂದು ಕೇಸರೂ ಗ್ರಾಪಂ ಪಿಡಿಒ ಗಂಗಯ್ಯ ವಸ್ತ್ರದ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''