ಡೆಂಘೀ ನಿಯಂತ್ರ ಜಾಗೃತಿ ಜಾಥಾ

KannadaprabhaNewsNetwork | Updated : May 18 2024, 12:31 AM IST

ಸಾರಾಂಶ

ನಗರದಲ್ಲಿ ಡೆಂಘೀ ರೋಗ ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಾಗೂ ಜಾಥಾ ನಡೆಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದಲ್ಲಿ ಡೆಂಘೀ ರೋಗ ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಾಗೂ ಜಾಥಾ ನಡೆಯಿತು. ಬಳಸಿದ ಟೈರ್‌ಗಳಲ್ಲಿ ನೀರು ಶೇಖರಣೆ ಮಾಡದಂತೆ ವಹಿಸಬೇಕಾದ ಕ್ರಮ, ಡೆಂಘೀ ರೋಗ ಹರಡುವ ಬಗೆ ಮೊದಲಾದವುಗಳನ್ನು ಪ್ರಾತ್ಯಕ್ಷಿತೆಗಳ ಮೂಲಕ ವಿವರಿಸಲಾಯಿತು. ರಾಷ್ಟ್ರೀಯ ಡೆಂಘೀ ನಿಯಂತ್ರಣ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ-ಕುಟುಂಬ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಈ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಥಣಿ ರಸ್ತೆಯಲ್ಲಿರುವ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಆವರಣದಲ್ಲಿ ಜಾಗೃತಿ ಹಾಗೂ ಜಾಥಾ ನಡೆಯಿತು. ‘ಸಮುದಾಯದೊಂದಿಗೆ ಸೇರಿ ಡೆಂಗಿ ಜ್ವರವನ್ನು ನಿಯಂತ್ರಿಸೋಣ ಎಂಬ ಧ್ಯೇಯ ವಾಕ್ಯದ ಅಡಿಯಲ್ಲಿ ಜಾಗೃತಿ ಜಾಥಾ ನಡೆಯಿತು.

ಜಾಥಾ ಕಾರ್ಯಕ್ರಮವು ನಗರದ ಸ್ಯಾಟಲೈಟ್ ಬಸ್‌ನಿಲ್ದಾಣ ಆರಂಭಗೊಂಡು, ಗೋದಾವರಿ ವೃತ್ತ, ಶಾಸ್ತ್ರಿ ನಗರದ ಮುಖಾಂತರ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು. ಈ ಭಾಗದ ಬಡಾವಣೆಗಳಿಗೆ ಮನೆ-ಮನೆಗೆ ತೆರಳಿ ಡೆಂಗ್ಯು ರೋಗ ಲಕ್ಷಣದ ಬಗ್ಗೆ ಕರಪತ್ರಗಳನ್ನು ಹಂಚಿದರು.

ಮುಂಜಾಗ್ರತ ಕ್ರಮಾವಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಂಡು ಡೆಂಘೀ ರೋಗದ ನಿರ್ಮೂಲನೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಯಾದ ಡಾ.ಕೆ.ಡಿ. ಗುಂಡಬಾವಡಿ ಕೋರಿದರು. ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದರಿಂದ ರೋಗಗಳಿಂದ ದೂರ ಇರಬಹುದು. ವೈಯಕ್ತಿಕ ಸ್ವಚ್ಛತೆಯೊಂದಿಗೆ ಪರಿಸರದ ಸ್ವಚ್ಛತೆಗೂ ಆದ್ಯತೆ ನೀಡಿ ರೋಗ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾರ್ವಜನಿಕರು ಪಣ ತೋಡಬೇಕು ಎಂದು ಕರೆ ನೀಡಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಜೈಬುನ್ನಿಸಾಬೇಗಂ ಬೀಳಗಿ ಮಾತನಾಡಿದರು.

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ್ವರಿ ಗೋಲಗೇರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕವಿತಾ, ಡಿಟಿಒ ಅಧಿಕಾರಿ ಡಾ.ಅಪ್ಪಾಸಾಹೇಬ ಇನಾಂದಾರ, ತಾಲೂಕಾ ಆರೋಗ್ಯ ಅಧಿಕಾರಿ ಡಾ.ಪಿ.ಎಂ. ಹಿಟ್ನಳ್ಳಿ ಹಾಗೂ ಇಲಾಖೆಯ ಅಧಿಕಾರಿಗಳು ಹಾಗೂ ಕಚೇರಿಯ ಸಿಬ್ಬಂದಿ ಜಾಥಾ ಕಾರ್ಯಕ್ರಮದಲ್ಲಿ ಹಾಜರಿದ್ದರು.

Share this article