ಅರಣ್ಯ ಸಂರಕ್ಷಣಾ ಕಾಯ್ದೆ ಅನುಷ್ಠಾನದಲ್ಲಿ ಇಲಾಖೆ ವಿಫಲ

KannadaprabhaNewsNetwork | Published : Mar 18, 2025 12:35 AM

ಸಾರಾಂಶ

ಬಂಡಲ ಗ್ರಾಪಂ ವ್ಯಾಪ್ತಿಯ ಅರಣ್ಯವಾಸಿಗಳ ಕಾನೂನು ಜಾಗೃತಾ ಜಾಥಾ

ಶಿರಸಿ: ದೇಶದ ಅರಣ್ಯ ಭೂಮಿ ರಕ್ಷಣೆ ಮತ್ತು ಸಂರಕ್ಷಣೆ ಉದ್ದೇಶದಿಂದ ೧೯೮೦ರಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಲಾದ ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಅರಣ್ಯ ಇಲಾಖೆ ನಿಯಮಾನುಸಾರ ಕಾನೂನು ಬದ್ಧವಾಗಿ ಜಾರಿ ಮಾಡಿದ್ದಲ್ಲಿ ಅರಣ್ಯ ಅತಿಕ್ರಮಣದಾರರ ಸಮಸ್ಯೆ ದೊಡ್ಡ ಪ್ರಮಾಣದಲ್ಲಿ ಉದ್ಭವಿಸುತ್ತಿರಲ್ಲಿಲ್ಲ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಅವರು ತಾಲೂಕಿನ ಬಂಡಲ ಗ್ರಾಪಂ ವ್ಯಾಪ್ತಿಯ ಅರಣ್ಯವಾಸಿಗಳ ಕಾನೂನು ಜಾಗೃತಾ ಜಾಥಾದಲ್ಲಿ ಅರಣ್ಯವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು.

ಪರಿಸರ ಸಮತೋಲನ ದೃಷ್ಟಿಯಲ್ಲಿ ಅರಣ್ಯ ಸಾಂದ್ರತೆಯನ್ನು ಕಾಪಾಡುವುದೊಂದಿಗೆ, ಅರಣ್ಯ ರಕ್ಷಿಸುವುದು ಅತಿ ಅವಶ್ಯ. ಅದರಂತೆ, ಅರಣ್ಯ ಭೂಮಿಯನ್ನು ವಾಸ್ತವ್ಯ ಮತ್ತು ಸಾಗುವಳಿ ಮಾಡುತ್ತಿರುವ ಅರಣ್ಯವಾಸಿಗಳ ಭೂಮಿ ಹಕ್ಕಿನ ಸಮಸ್ಯೆ ಬಗೆರಿಸುವುದು ಸರ್ಕಾರದ ಆದ್ಯ ಕರ್ತವ್ಯ. ೧೯೮೦ರಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ ನಂತರ ಅರಣ್ಯ ಇಲಾಖೆ ಕಟ್ಟುನಿಟ್ಟಿನಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆಗೊಳಿಸಿದ್ದಲ್ಲಿ ಇಂದಿನ ಗಂಭೀರವಾದ ಅರಣ್ಯವಾಸಿಗಳ ಸಮಸ್ಯೆ ಎದುರಾಗುತ್ತಿರಲ್ಲಿಲ್ಲ. ಅರಣ್ಯ ಇಲಾಖೆ ಕಾನೂನಿನ ಮೂಲಕ ಅರಣ್ಯ ರಕ್ಷಣೆ ನಿಯಂತ್ರಿಸದೇ ಇರುವುದು ಇಂದಿನ ಅರಣ್ಯವಾಸಿಗಳ ಒಕ್ಕಲೆಬ್ಬಿಸುವ ಸಮಸ್ಯೆಗೆ ಕಾರಣವಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ೧೯೭೮ ಪೂರ್ವದ ೨,೫೧೩ ಕುಟುಂಬಗಳಿಗೆ ೩,೨೩೫ ಎಕರೆ ಕ್ಷೇತ್ರ ಮಂಜೂರಿಗೆ ಕೇಂದ್ರ ಸರ್ಕಾರ ೧೯೯೬ ರಲ್ಲಿಯೇ ಅನುಮೋದನೆ ನೀಡಿತು. ಅನುಮೋದನೆ ನೀಡಿ ೨೯ ವರ್ಷಗಳಾದರೂ ಇಂದಿಗು ಅರಣ್ಯ ಭೂಮಿ ಹಕ್ಕು ನೀಡಲು ರಾಜ್ಯ ಸರ್ಕಾರ ವಿಫಲವಾಗಿರುವುದು ವಿಷಾದಕರ. ಅದರಂತೆ, ಅರಣ್ಯ ಹಕ್ಕು ಕಾಯಿದೆಯು ಜಾರಿಗೆ ಬಂದು ೧೮ ವರ್ಷಗಳಾದ್ದರು, ೮೫,೭೫೭ ಅರ್ಜಿಗಳಲ್ಲಿ ಕೇವಲ ೨,೮೫೪ ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿ ಅರಣ್ಯವಾಸಿಗಳ ಸಮಸ್ಯೆ ಬಗ್ಗೆ ಹರಿಯದೇ ಇರುವುದು ಖೇದಕರ ಎಂದು ಅವರು ಹೇಳಿದರು. ಈ ಹಿನ್ನೆಲೆಯಲ್ಲಿ ರಾಜ್ಯಾದಂತ ಹೋರಾಟಗಾರರ ವೇದಿಕೆಯು ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ಹಕ್ಕಿನ ಕುರಿತು ಕಾನೂನು ಜಾಗೃತಾ ಜಾಥಾದ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಅಧ್ಯಕ್ಷತೆ ಗ್ರಾಪಂ ಅಧ್ಯಕ್ಷ ದೇವರಾಜ ಮರಾಠಿ ಮಾತನಾಡಿ, ಕಾನೂನಾತ್ಮಕ ಹೋರಾಟ ಜೊತೆಯಲ್ಲಿ ಭೂಮಿ ಹಕ್ಕಿನ ಕಾನೂನು ಮಾಹಿತಿ ಪಡೆಯಲು ಆಗ್ರಹಿಸಿದರು.

ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ಸಂಚಾಲಕ ಚಂದ್ರು ಶಾನಭಾಗ, ತಾಲೂಕು ಸಂಚಾಲಕಿ ಸ್ವಾತಿ ಜೈನ್, ಕೃಷ್ಣ ಮರಾಠಿ, ಬಾಬು ಮರಾಠಿ, ಯಶ್ವಂತ ನಾಯ್ಕ ಮುಂತಾದವರು ಮಾತನಾಡಿದರು.

ಕಿರಣ ಮರಾಠಿ, ಗಜಾನನ ಗೌಡ, ಮಂಜುನಾಥ ನಾಯ್ಕ, ನಾಗರಾಜ ಹೆಗಡೆ ಮುಂತಾದವರು ಉಪಸ್ಥಿತರಿದ್ದರು. ಹರೀಶ ಮರಾಠಿ ಕೊನೆಯಲ್ಲಿ ವಂದಿಸಿದರು.

Share this article