ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಸರ್ಕಾರಿ ಪದವಿ, ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ‘ಉದ್ಯೋಗಾಧಾರಿತ ಕೌಶಲ್ಯ’ ಮತ್ತು ಪ್ರಾಧ್ಯಾಪಕರಿಗೆ ‘ಸಂವನಹ ಕೌಶಲ್ಯ’ ತರಬೇತಿಗಾಗಿ ವಾಧ್ವಾನಿ ಫೌಂಡೇಷನ್‌ನೊಂದಿಗೆ ಹಾಗೂ ವಿಶ್ವವಿದ್ಯಾಲಯಗಳು, ಕಾಲೇಜುಗಳಲ್ಲಿ ‘ಸಂಶೋಧನೆ’, ‘ನೆಟ್‌ವರ್ಕ್ ಪರಿಣಾಮ’ ಕುರಿತ ತರಬೇತಿಗಾಗಿ ಬ್ರಿಟೀಷ್ ಕೌನ್ಸೆಲ್ ಜೊತೆಗೆ ಉನ್ನತ ಶಿಕ್ಷಣ ಇಲಾಖೆಯು ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿದೆ.ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಸೋಮವಾರ ಉನ್ನತ ಶಿಕ್ಷಣ ಸಚಿವ ಡಾ। ಎಂ.ಸಿ.ಸುಧಾಕರ್ ಅವರ ಸಮ್ಮುಖದಲ್ಲಿ ವಾಧ್ವಾನಿ ಫೌಂಡೇಶನ್ ಕಾರ್ಯಕಾರಿ ನಿರ್ದೇಶಕ ಸುನಿಲ್ ಕುಮಾರ್ ಹಾಗೂ ಬ್ರಿಟಿಷ್ ಕೌನ್ಸೆಲ್‌ನ ನಿರ್ದೇಶಕ ಜನಕ ಪುಷ್ಪನಾಥನ್ ಮತ್ತು ಇಲಾಖೆಯ ಅಧಿಕಾರಿಗಳು ಎರಡು ಪ್ರತ್ಯೇಕ ಒಪ್ಪಂದಗಳಿಗೆ ಸಹಿ ಹಾಕಿದರು.
ಬಳಿಕ ಮಾತನಾಡಿದ ಸಚಿವರು, ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ನಿರುದ್ಯೋಗ ಸಮಸ್ಯೆ ಕಾಡದಂತೆ ಕೌಶಲ್ಯಾಧಾರಿತ ಶಿಕ್ಷಣವನ್ನು ಒದಗಿಸಲು ಮತ್ತು ವಿಶ್ವಮಟ್ಟದಲ್ಲಿ ವಿದ್ಯಾರ್ಥಿಗಳನ್ನು ಬೌದ್ಧಿಕವಾಗಿ ಮಾನಸಿಕವಾಗಿ ಸಜ್ಜುಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳು ಜತೆಗೆ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಸಂಶೋಧನೆ ಸೇರಿದಂತೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ ಎಂದು ತಿಳಿಸಿದರು.ವಾಧ್ವಾನಿ ಫೌಂಡೇಷನ್ ಮೂಲಕ ಭೌತಿಕವಾಗಿ ವಿದ್ಯಾರ್ಥಿಗಳಿಗೆ ಮತ್ತು ಪ್ರಾಧ್ಯಾಪಕರಿಗೆ ಮೃದು ಕೌಶಲ ಮತ್ತು ಔದ್ಯೋಗಿಕ ಕೌಶಲದ ಶಿಕ್ಷಣ ನೀಡಲಾಗುತ್ತದೆ. ಇದರಲ್ಲಿ ‘ಪರಿಣಾಮಕಾರಿ ವಾಕ್ ಕೌಶಲ್ಯ’, ‘ಸಮಸ್ಯೆ ಬಗೆಹರಿಸುವಿಕೆ’, ‘ಸಂಶೋಧನೆ’ ಸೇರಿದಂತೆ ಹಲವು ವಿಷಯಗಳ ಬಗ್ಗೆ ತರಬೇತಿ ನೀಡಲಿದೆ. ಮೊದಲಿಗೆ ಆಂಗ್ಲಭಾಷಾ ಬೋಧಕರಿಗೆ ತರಬೇತಿ ನೀಡಿ ಆನಂತರ ಅವರ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದರು.
ಇನ್ನೂ ಬ್ರಿಟಿಷ್ ಕೌನ್ಸೆಲ್ ಜತೆಗೆ ಈ ಹಿಂದೆ ಆಗಿದ್ದ ಒಪ್ಪಂದವನ್ನು ಮತ್ತೆ ಮೂರು ವರ್ಷಕ್ಕೆ ನವೀಕರಿಸಲಾಗಿದೆ. ಇದರಿಂದ ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಉತ್ತಮ ವ್ಯಾಸಂಗಕ್ಕೆ ಹೆಚ್ಚು ಅನುಕೂಲವಾಗಲಿದೆ. ಈ ಒಪ್ಪಂದದಿಂದ ಗುಲ್ಬರ್ಗ ವಿವಿಯ 15 ವಿದ್ಯಾರ್ಥಿಗಳು ಲಂಡನ್‌ನ ದಂಡಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದ್ದಾರೆ ಮತ್ತು ಅದರಿಂದ ಸಾಕಷ್ಟು ಜ್ಞಾನ ಸಂಪಾದಿಸಿದ್ದಾರೆ. ಇನ್ನಷ್ಟು ವಿದ್ಯಾರ್ಥಿಗಳಿಗೆ ಇಂತಹ ಅವಕಾಶಗಳು ಮುಂದಿನ ದಿನಗಳಲ್ಲಿ ದೊರೆಯಲಿದೆ ಎಂದು ಮಾಹಿತಿ ನೀಡಿದರು.