ಕೊಪ್ಪಳಕ್ಕೆ ಅಂಚೆ ಇಲಾಖೆ ವಿಭಾಗ ಮಂಜೂರಿ- ಇನ್ಮುಂದೆ ಗದಗ ವಿಭಾಗಕ್ಕೆ ಹೋಗುವ ಅಗತ್ಯವಿಲ್ಲ

KannadaprabhaNewsNetwork | Published : Jan 18, 2024 2:08 AM

ಸಾರಾಂಶ

ಜಿಲ್ಲೆಯಾಗಿ ರಚನೆಯಾದ ಮೇಲೆ ಅಂಚೆ ಇಲಾಖೆ ಕೊಪ್ಪಳ ವಿಭಾಗ ಆರಂಭಿಸುವಂತೆ ಸುಮಾರು ವರ್ಷಗಳಿಂದ ಅನೇಕ ಬಾರಿ ಹೋರಾಟ ಮಾಡಲಾಯಿತು. ಕೇಂದ್ರ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಲಾಯಿತು. ಆದರೂ ಕೇಂದ್ರ ಸರ್ಕಾರ ಮಾತ್ರ ಸೊಪ್ಪು ಹಾಕಿರಲಿಲ್ಲ.

ಕೊಪ್ಪಳ: ಕೊಪ್ಪಳವನ್ನು ರಾಜ್ಯ ಸರ್ಕಾರ ಪ್ರತ್ಯೇಕ ಕಂದಾಯ ಜಿಲ್ಲೆಯಾಗಿ ಘೋಷಣೆ ಮಾಡಿದ್ದರೂ ಕೇಂದ್ರ ಸರ್ಕಾರ ಇದನ್ನು ಪರಿಗಣಿಸಿಯೇ ಇರಲಿಲ್ಲ. ಹೀಗಾಗಿ ಕೊಪ್ಪಳ ಜಿಲ್ಲೆ ಗದಗ ಅಂಚೆ ಇಲಾಖೆಯಲ್ಲಿಯೇ ಇತ್ತು. ಈಗ ಇದನ್ನು 25 ವರ್ಷಗಳ ಬಳಿಕ ಬೇರ್ಪಡಿಸಿ ಪ್ರತ್ಯೇಕ ವಿಭಾಗ ರಚನೆ ಮಾಡಿ, ಕೇಂದ್ರ ಸರ್ಕಾರ ಆದೇಶಿಸಿದೆ.

ಇನ್ಮುಂದೆ ಕೊಪ್ಪಳ ಅಂಚೆ ವಿಭಾಗ ಪ್ರತ್ಯೇಕವಾಗಿ ಇರಲಿದ್ದು, ಅಂಚೆ ಇಲಾಖೆಯ ಕೊಪ್ಪಳ ವಿಭಾಗ ಕಚೇರಿಯನ್ನು ಪ್ರಾರಂಭಿಸಲು ನಿರ್ದೇಶನ ನೀಡಲಾಗಿದೆ. ಜಿಲ್ಲಾಡಳಿತವೂ ಈಗಾಗಲೇ ಕೊಪ್ಪಳ ಅಂಚೆ ವಿಭಾಗಕ್ಕೆ ಪ್ರತ್ಯೇಕ ಕಚೇರಿ ನೀಡಲಿದೆ.

25 ವರ್ಷಗಳ ಹೋರಾಟ: ಜಿಲ್ಲೆಯಾಗಿ ರಚನೆಯಾದ ಮೇಲೆ ಅಂಚೆ ಇಲಾಖೆ ಕೊಪ್ಪಳ ವಿಭಾಗ ಆರಂಭಿಸುವಂತೆ ಸುಮಾರು ವರ್ಷಗಳಿಂದ ಅನೇಕ ಬಾರಿ ಹೋರಾಟ ಮಾಡಲಾಯಿತು. ಕೇಂದ್ರ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಲಾಯಿತು. ಆದರೂ ಕೇಂದ್ರ ಸರ್ಕಾರ ಮಾತ್ರ ಸೊಪ್ಪು ಹಾಕಿರಲಿಲ್ಲ.ಈ ಕುರಿತು ಸಂಸದ ಸಂಗಣ್ಣ ಕರಡಿ ಕೇಂದ್ರಕ್ಕೆ ಪತ್ರ ಬರೆದರು. ಆದರೂ ಜಗ್ಗದೇ ಇದ್ದಾಗ ಕೇಂದ್ರ ಸಚಿವರನ್ನು ಭೇಟಿಯಾಗಿ ಮನವಿ ಮಾಡಿದರು. ಪರಿಣಾಮ ಈಗ ಕೊಪ್ಪಳ ಅಂಚೆ ಇಲಾಖೆಯ ಪ್ರತ್ಯೇಕ ವಿಭಾಗದ ಕೇಂದ್ರ ಸ್ಥಾನವಾಗಲಿದೆ. ಇನ್ಮುಂದೆ ಗದಗ ವಿಭಾಗದಿಂದ ಮುಕ್ತಿ ದೊರೆಯಲಿದೆ.ದೇಶದಲ್ಲಿಯ ಸಾಧನೆ: ಸುಕನ್ಯಾ ಸಮೃದ್ಧ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದಾಗ ಅದನ್ನು ಅನುಷ್ಠಾನ ಮಾಡುವಲ್ಲಿ ದೇಶದಲ್ಲಿಯೇ ಕೊಪ್ಪಳ ಜಿಲ್ಲೆ ಮುಂಚೂಣಿಯಲ್ಲಿದೆ. ಸುಮಾರು 5 ಸಾವಿರಕ್ಕೂ ಹೆಚ್ಚು ಸುಕನ್ನಾ ಸಮೃದ್ಧಿ ಖಾತೆ ಮಾಡಲಾಯಿತು. ಪರಿಣಾಮ ಇದು ಅಂಚೆ ಇಲಾಖೆಯಲ್ಲಿ ಪರಿಣಾಮ ಬೀರಿತು.ಅಂಚೆ ಇಲಾಖೆಯ ಕೊಪ್ಪಳ ವಿಭಾಗ ಪ್ರಾರಂಭವಾಗಬೇಕು ಎನ್ನುವ ಬಹು ದಿನಗಳ ಬೇಡಿಕೆ ಈಡೇರಿಸಿರುವುದು ಖುಷಿಯಾಗಿದೆ. ಈ ಭಾಗಕ್ಕೆ ಹೆಚ್ಚು ಅನುಕೂಲವಾಗಲಿದೆ. ಇನ್ಮುಂದೆ ಕೊಪ್ಪಳವೇ ಕೇಂದ್ರ ಸ್ಥಾನವಾಗಿ ಕಾರ್ಯ ನಿರ್ವಹಿಸಲಿದೆ ಎನ್ನುತ್ತಾರೆ ಅಂಚೆ ಇಲಾಖೆಯ ಅಧಿಕಾರಿ ಜಿ.ಎನ್. ಹಳ್ಳಿ.

ಅಂಚೆ ಇಲಾಖೆಯ ಕೊಪ್ಪಳ ವಿಭಾಗ ಆರಂಭಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಲಾಗಿತ್ತು . ಇದರ ತುರ್ತು ಅಗತ್ಯವಿದ್ದರೂ ಆಗಿರಲಿಲ್ಲ. ಜಿಲ್ಲಾ ಕೇಂದ್ರವಾಗಿದ್ದರೂ ಗದಗ ವಿಭಾಗದ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿತ್ತು. ಆದರೆ, ಈಗ ಕೇಂದ್ರ ಸರ್ಕಾರ ಕೊಪ್ಪಳ ಪ್ರತ್ಯೇಕ ಅಂಚೆ ವಿಭಾಗ ಮಾಡಿರುವುದು ಸಂತೋಷವಾಗಿದೆ ಎನ್ನುತ್ತಾರೆ ಸಂಸದ ಸಂಗಣ್ಣ ಕರಡಿ.

Share this article