ದಲಿತ ರೈತನಿಗೆ ಅನ್ಯಾಯ: ರೈತ ಸಂಘದಿಂದ ಜಮೀನಿನಲ್ಲಿಯೇ ಧರಣಿ

KannadaprabhaNewsNetwork | Published : Jan 18, 2024 2:07 AM

ಸಾರಾಂಶ

ದಲಿತ ಚಿಕ್ಕವೆಂಕಟರಾಯಪ್ಪನ ಕುಟುಂಬದವರಿಗೆ ಸೇರಬೇಕಾದ ಜಮೀನನ್ನು ಬೇರೆಯವರು ಕಬಳಿಸಿದ್ದಾರೆ ಎಂದು ಆರೋಪಿಸಿ ಜಮೀನಿನಲ್ಲಿಯೇ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ತಾಲೂಕಿನ ಬಂದಾರ್ಲಹಳ್ಳಿ ಗ್ರಾಮವ್ಯಾಪ್ತಿಯ ದಲಿತ ಚಿಕ್ಕವೆಂಕಟರಾಯಪ್ಪನ ಕುಟುಂಬದವರಿಗೆ ಸೇರಬೇಕಾದ ಜಮೀನನ್ನು ಬೇರೆಯವರು ಕಬಳಿಸಿದ್ದಾರೆ ಎಂದು ಆರೋಪಿಸಿ ಜಮೀನಿನಲ್ಲಿಯೇ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಮಸ್ಯೆ ಬಗೆಹರಿಸದಿದ್ದರೆ ರಾಷ್ಟ್ರೀಯ ಹೆದ್ದಾರಿಯ ಮೂಲಕ ವಿಧಾನಸೌಧದವರೆಗೂ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ಸಹ ನೀಡಿದ್ದಾರೆ.

ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಪಿ.ರಾಮನಾಥ್ ಮಾತನಾಡಿ, ಬಂದಾರ್ಲಹಳ್ಳಿ ಗ್ರಾಮದ ಸ.ನಂ. 116, 117 ರಲ್ಲಿ 4.07 ಎಕರೆ ಜಮೀನಿನಲ್ಲಿ ಬಿ.ವಿ.ವೆಂಕಟರಾಯಪ್ಪ ಎಂಬುವವರು ಸ್ವಾಧೀನದಲ್ಲಿದ್ದಾರೆ. 1988-89 ರ ಅವಧಿಯಲ್ಲಿ ದರಖಾಸ್ತು ಸಮಿತಿಯಲ್ಲಿ ಇವರಿಗೆ ಜಮೀನು ಸಹ ಮಂಜೂರಾಗಿರುತ್ತದೆ. ಆದರೆ ಅದೇ ಗ್ರಾಮದ ಚಿಕ್ಕವೆಂಕಟರಾಯಪ್ಪ ಎಂಬುವವರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಹೆಸರಿಗೆ ಪಹಣಿ ಬದಲಿಸಿಕೊಂಡು, ಬಳಿಕ ರಾಜಕೀಯ ಪ್ರಭಾವಿತ ವಿ.ಎಂ. ಪ್ರೈವೈಟ್ ಲಿಮಿಟೆಡ್ ನವರಿಗೆ ಮಾರಲಾಗಿದೆ. ಆದರೆ, ಈಗಲೂ ಸಹ ಸದರಿ ಜಮೀನಿನಲ್ಲಿ ಮೂಲ ಮಂಜೂರುದಾರರೇ ಸ್ವಾಧೀನದಲ್ಲಿದ್ದಾರೆ. ಕಂದಾಯ ಇಲಾಖೆಯ ಬಗ್ಗೆ ಮಾಹಿತಿ ಕೊರತೆಯಿಂದ ನೊಂದ ದಲಿತ ರೈತ ಈ ಬಗ್ಗೆ ಗಮನ ಹರಿಸಿಲ್ಲ. ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ರೈತ ಸಂಘ ಈ ಬಗ್ಗೆ ಹೋರಾಡುತ್ತಲೇ ಇದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಈಗಾಗಲೇ ಉಪವಿಭಾಗಾಧಿಕಾರಿಗಳು ಪಿಟಿಸಿಎಲ್ ಕಾಯ್ದೆಯನ್ವಯ ಜಮೀನು ಮಾರಿರುವುದು ಕಾನೂನಿನ ಉಲ್ಲಂಘನೆಯಾಗಿದೆ. ಸದರಿ ಜಮೀನಿನ ಮೇಲೆ ಆಗಿರುವ ನೋಂದಣಿಯನ್ನು ಸಹ ರದ್ದುಗೊಳಿಸಿ, ಮೂಲ ಕ್ರಯದಾರರಿಗೆ ಪುನರ್ ಮಂಜೂರು ಹಕ್ಕನ್ನು ಕಾಯ್ದಿರಿಸಿ ಸರ್ಕಾರದ ವಶಕ್ಕೆ ಪಡೆಯಬೇಕು ಹಾಗೂ ಮೂಲ ಮಂಜೂರಿದಾರರ ಬಗ್ಗೆ ಅಗತ್ಯ ದಾಖಲೆಗಳನ್ನು, ಮಂಜೂರಾದ ದೃಢಿಕೃತ ದಾಖಲೆಗಳೊಂದಿಗೆ ವರದಿ ನೀಡುವಂತೆ ತಹಸೀಲ್ದಾರರಿಗೆ ಸೂಚನೆ ಸಹ ನೀಡಲಾಗಿತ್ತು. ಆದರೆ ಇದುವರೆಗೂ ಈ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

ಇನ್ನೂ ಚಿಕ್ಕವೆಂಕಟರಾಯಪ್ಪ ಕುಟುಂಬದ ಹಿರಿಯ ಶ್ರೀನಿವಾಸ್ ಮಾತನಾಡಿ, ನಮಗೆ ಮಂಜೂರಾದ ಜಮೀನಿನಲ್ಲಿಯೇ ನಾವು ಉಳುಮೆ ಮಾಡುತ್ತಿದ್ದೇವೆ. ಪಿಟಿಸಿಎಲ್ ಆದೇಶದಂತೆ ನಮಗೆ ತಹಸೀಲ್ದಾರರು ಸಹಕಾರ ನೀಡುತ್ತಿಲ್ಲ. ನಮ್ಮ ಸ್ವಾಧೀನದಲ್ಲಿರುವ ಜಮೀನನ್ನು ಇದೀಗ ವಿ.ಎಂ. ಪ್ರೈವೇಟ್ ಲಿಮಿಟೆಡ್ ರವರಿಗೆ ಅಕ್ರಮವಾಗಿ ಮಾರಿದ್ದಾರೆ. ಅವರು ನಮ್ಮ ಜಮೀನಿನನ್ನು ಏಕಾಏಕಿ ಸ್ವಾಧೀನಪಡಿಸಿಕೊಳ್ಳಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿರುವ ಹಿನ್ನೆಲೆ ನಾವು ರೈತ ಸಂಘದ ಸಹಕಾರದಿಂದ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

ಸ್ವಾಧೀನದಲ್ಲಿರುವ ಶ್ರೀನಿವಾಸ ಕುಟುಂಬಸ್ಥರು ಹಾಗೂ ರೈತ ಸಂಘದ ಪದಾಧಿಕಾರಿಗಳಾದ ಸೋಮಶೇಖರ್, ವೆಂಕಟರಮಣಪ್ಪ, ದೇವರಾಜು, ಗಾಯಿತ್ರಮ್ಮ, ನಳಿನ, ಲಕ್ಷ್ಮೀ, ಪಾರ್ವತಮ್ಮ, ರಾಮಿರೆಡ್ಡಿ, ರವೀಂದ್ರ ರೆಡ್ಡಿ, ವೆಂಕಟರೆಡ್ಡಿ, ಚೌಡರೆಡ್ಡಿ ಸೇರಿ ನೂರಾರು ರೈತ ಸಂಘದ ಸದಸ್ಯರು ಇದ್ದರು.

Share this article