ಕನ್ನಡ ಪಠ್ಯಪುಸ್ತಕ ಸರಳೀಕರಣಕ್ಕೆ ಇಲಾಖೆ ಚಿಂತನೆ

KannadaprabhaNewsNetwork |  
Published : Apr 29, 2026, 01:45 AM IST
ಕನ್ನಡ ಪಠ್ಯ | Kannada Prabha

ಸಾರಾಂಶ

ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲೇ ಪ್ರತೀ ವರ್ಷ ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಅನುತ್ತೀರ್ಣವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕನ್ನಡ ಭಾಷಾ ವಿಷಯದ ಪಠ್ಯಕ್ರಮವನ್ನು ಸರಳೀಕರಿಸುವ ಚಿಂತನೆ ನಡೆಸಿದೆ.

ಲಿಂಗರಾಜು ಕೋರಾ

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲೇ ಪ್ರತೀ ವರ್ಷ ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಅನುತ್ತೀರ್ಣವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕನ್ನಡ ಭಾಷಾ ವಿಷಯದ ಪಠ್ಯಕ್ರಮವನ್ನು ಸರಳೀಕರಿಸುವ ಚಿಂತನೆ ನಡೆಸಿದೆ.

ಲಭ್ಯ ಮಾಹಿತಿ ಪ್ರಕಾರ, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಗುರುವಾರ ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಇಲಾಖೆ ಅಧಿಕಾರಿಗಳೊಂದಿಗೆ ಈ ಸಂಬಂಧ ಗಂಭೀರ ಚರ್ಚೆ ನಡೆಸಲಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಮುಂದಿನ ದಿನಗಳಲ್ಲಿ ಕನ್ನಡ ಭಾಷಾ ವಿಷಯ ಕಲಿಕೆ ಮಕ್ಕಳಿಗೆ ತ್ರಾಸವಾಗಬಾರದು. ಆ ನಿಟ್ಟಿನಲ್ಲಿ ಯಾವ ರೀತಿ ಈಗಿರುವ ಪಠ್ಯಕ್ರಮವನ್ನು ಸರಳೀಕರಿಸಬೇಕು ಎಂಬ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಈ ಮಧ್ಯೆ, ಗುರುವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಭಾಷಾ ವಿಷಯದ ಪಠ್ಯಕ್ರಮ ಸರಳೀಕರಿಸಲು ಶಿಕ್ಷಣ ತಜ್ಞರ ನೇತೃತ್ವದಲ್ಲಿ ಪ್ರೌಢ ಶಾಲೆಯ ನುರಿತ ಶಿಕ್ಷಕರಿಂದಲೇ ತಯಾರಿಸಿರುವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಈ ವರದಿ ಅನುಷ್ಠಾನದ ಸಾಧಕ-ಬಾಧಕಗಳ ಬಗ್ಗೆಯೂ ಸಚಿವರು ಅಧಿಕಾರಿಗಳು ಹಾಗೂ ವಿಷಯ ತಜ್ಞರು, ಶಿಕ್ಷಣ ತಜ್ಞರೊಂದಿಗೆ ಚರ್ಚಿಸುವ ಸಾಧ್ಯತೆ ಇದೆ. ವರದಿ ಅನುಷ್ಠಾನ ಯೋಗ್ಯ ಎಂಬುದು ಖಚಿತವಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ನಂತರ ಸಚಿವ ಸಂಪುಟದ ಒಪ್ಪಿಗೆ ಪಡೆದು ಕನ್ನಡ ಭಾಷಾ ಪಠ್ಯಕ್ರಮ ಸರಳೀಕರಿಸುವ ಕೆಲಸಕ್ಕೆ ಕೈ ಹಾಕಲಿದ್ದಾರೆ ಎನ್ನುತ್ತವೆ ಮೂಲಗಳು.

ಒಂದೆಡೆ ಖುಷಿ ಮತ್ತೊಂದೆಡೆ ಕಳವಳ:

2026ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ 1ರಲ್ಲಿ ಶೇ.94.1ರಷ್ಟು ಐತಿಹಾಸಿಕ ಫಲಿತಾಂಶ ಬಂದಿರುವುದು ಶಿಕ್ಷಣ ಸಚಿವರು ಹಾಗೂ ಇಲಾಖಾ ಅಧಿಕಾರಿಗಳಿಗೆ ಖುಷಿಯ ವಿಚಾರವಾದರೂ, ಮತ್ತೊಂದೆಡೆ ಕನ್ನಡ ಭಾಷಾ ವಿಷಯದಲ್ಲೇ ಹೆಚ್ಚು ಮಕ್ಕಳು ಅನುತ್ತೀರ್ಣವಾಗಿರುವುದು ಕಳವಳ ಸೃಷ್ಟಿಸಿದೆ.

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಎಲ್ಲಾ ವಿಷಯಗಳಿಗಿಂತ ಕನ್ನಡ ಭಾಷಾ ವಿಷಯದಲ್ಲೇ ಹೆಚ್ಚು 19,000 ಮಕ್ಕಳು ಅನುತ್ತೀರ್ಣರಾಗಿವ ಬಗ್ಗೆ ‘ಕನ್ನಡಪ್ರಭ’ ವಿಶೇಷ ವರದಿ ಮೂಲಕ ಇತ್ತೀಚೆಗೆ ಬೆಳಕು ಚೆಲ್ಲಿ ಸರ್ಕಾರದ ಗಮನ ಸೆಳೆದಿತ್ತು. ಅಲ್ಲದೆ, ಕನ್ನಡ ಭಾಷಾ ಪಠ್ಯದಲ್ಲಿ ಕಠಿಣತೆಯ ಪ್ರಮಾಣ ಹೆಚ್ಚಿರುವುದು, ವ್ಯಾಕರಣದ ವಿಷಯಗಳು ಅಗತ್ಯಕ್ಕಿಂತ ಹೆಚ್ಚು ತುಂಬಿರುವುದರಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಹೊರೆಯ ಬಗ್ಗೆ ಸರಣಿ ವರದಿ ಪ್ರಕಟಿಸಿತ್ತು. ಇದು ಇಲಾಖೆಯನ್ನು ಎಚ್ಚರಗೊಳಿಸಿದ್ದು, ಕನ್ನಡ ಭಾಷಾ ಪಠ್ಯಕ್ರಮ ಸರಳೀಕರಿಸುವ ಚಿಂತನೆಗೆ ಹಚ್ಚಿದೆ ಎಂದು ಸಚಿವರ ಕಚೇರಿ ಮೂಲಗಳು ಹಾಗೂ ಇಲಾಖೆಯ ಉನ್ನತ ಅಧಿಕಾರಿ ಮೂಲಗಳು ಖಚಿತ ಮಾಹಿತಿ ನೀಡಿವೆ. ಪಠ್ಯಕ್ರಮ ಸರಳೀಕರಣದ ಬಗ್ಗೆ ಈಗಷ್ಟೇ ಚಿಂತನೆ ಶುರುವಾಗಿದ್ದು ಏಪ್ರಿಲ್‌ ಕೊನೆಯಲ್ಲಿ ಅಥವಾ ಮೇ ಮೊದಲ ವಾರ ಸಚಿವರು ಅಧಿಕಾರಿಗಳೊಂದಿಗೆ ನಡೆಸುವ ಸಭೆಯ ಬಳಿಕ ಹೆಚ್ಚಿನ ಮಹತ್ವ ಪಡೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ.

ಕಳೆದ ವರ್ಷ 90,000+ ಹೆಚ್ಚು ಮಕ್ಕಳು ಫೇಲ್‌:

2026ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉಳಿದೆಲ್ಲಾ ವಿಷಯಗಳಿಗಿಂತ ಪ್ರಥಮ ಭಾಷೆಯಲ್ಲಿ 21 ಸಾವಿರ ಮಕ್ಕಳು ಅನುತ್ತೀರ್ಣರಾಗಿದ್ದರೆ, ಈ ಪೈಕಿ ಕನ್ನಡ ಭಾಷಾ ವಿಷಯದಲ್ಲೇ 19 ಸಾವಿರ ಮಕ್ಕಳು ನಪಾಸಾಗಿದ್ದಾರೆ. ಇನ್ನು, 2025ನೇ ಸಾಲಿನ ಮೂರೂ ಪರೀಕ್ಷೆಗಳ ಫಲಿತಾಂಶ ಅವಲೋಕಿಸಿದಾಗ ಪ್ರಥಮ ಭಾಷಾ ವಿಷಯಗಳಲ್ಲಿ 90 ಸಾವಿರಕ್ಕೂ ಹೆಚ್ಚು ಮಕ್ಕಳು ಫೇಲಾಗಿರುವುದು ಕಂಡುಬಂದಿದೆ. ಈ ಪೈಕಿ ಕನ್ನಡವನ್ನು ಪ್ರಥಮ ಭಾಷೆಯಾಗಿ ವ್ಯಾಸಂಗ ಮಾಡಿದವರು 85 ಸಾವಿರಕ್ಕೂ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ. ಈ ಮಾಹಿತಿ ತಡವಾಗಿ ಲಭ್ಯವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒತ್ತಡ ನಿರ್ವಹಣೆಗೆ ವ್ಯಕ್ತಿತ್ವ ವಿಕಸನ ಪೂರಕ
ಕಾಂಗ್ರೆಸ್‌ನಲ್ಲಿ ಹೆಚ್ಚಿದ ರಾಜಕೀಯ ‘ಚಟುವಟಿಕೆ’