ಜನರ ಆರೋಗ್ಯ ಸುಧಾರಣೆಯತ್ತ ಇಲಾಖೆ ಕ್ರಮ: ಡಾ.ಜೆ.ಡಿ.ವೆಂಕಟೇಶ್

KannadaprabhaNewsNetwork | Published : May 28, 2024 1:06 AM

ಸಾರಾಂಶ

ಚಳ್ಳಕೆರೆ ನಗರದ ಆಸ್ಪತ್ರೆ ಸಭಾಂಗಣದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ ವಿಶ್ವ ಡೆಂಘೀ ದಿನಾಚರಣೆ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಕಳೆದ ಹಲವಾರು ದಶಕಗಳಿಂದ ಆರೋಗ್ಯ ಇಲಾಖೆ ಅನೇಕ ನೂತನ ಸುಧಾರಣೆ ಕ್ರಮಗಳ ಮೂಲಕ ಜನರಿಗೆ ಯಾವುದೇ ರೋಗ ವ್ಯಾಪಿಸದಂತೆ ಜಾಗ್ರತೆ ವಹಿಸುತ್ತಾ ಬಂದಿದೆ. ಆರೋಗ್ಯ ಇಲಾಖೆಯ ಈ ಕಾರ್ಯಕ್ಕೆ ಇಲಾಖೆಯ ಎಲ್ಲಾ ಸಿಬ್ಬಂದಿ ಸಹಕಾರ ಮೂಲಕಾರಣವೆಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಜೆ.ಡಿ. ವೆಂಕಟೇಶ್ ತಿಳಿಸಿದರು.

ಅವರು, ಸೋಮವಾರ ಆಸ್ಪತ್ರೆ ಸಭಾಂಗಣದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ವಿಶ್ವ ಡೆಂಘೀ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಆರೋಗ್ಯ ಇಲಾಖೆಯ ಈ ಕಾರ್ಯ ಮುಂದಿನ ದಿನಗಳಲ್ಲೂ ಸಹ ಉತ್ತಮವಾಗಿ ಸಾಗಲಿದ್ದು, ಎಲ್ಲರೂ ಆರೋಗ್ಯ ಇಲಾಖೆಯ ನಿಯಮಗಳನ್ನು ಪಾಲಿಸುವತ್ತ ಗಮನ ನೀಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಬಿ.ತಿಪ್ಪೇಸ್ವಾಮಿ, ಆಶಾ ಕಾರ್ಯಕರ್ತರ ಸಹಕಾರದಿಂದ ಗ್ರಾಮೀಣ ಭಾಗದಲ್ಲೂ ಸಹ ವಿಶ್ವ ಡೆಂಘೀ ದಿನಾಚರಣೆಗೆ ಪೂರಕವಾಗುವ ವಾತಾವರಣವನ್ನು ಜಾಗೃತಿ ಜಾಥಾ ಹಾಗೂ ಮನೆ, ಮನೆಗೂ ಸಮೀಕ್ಷೆ ನಡೆಸಿ ಜಾಗೃತಿ ಉಂಟು ಮಾಡುತ್ತಿರುವುದು ಯಶಸ್ವಿ ತಂದಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಕಾಶಿ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರಲಿದೆ. ಇತ್ತೀಚಿನ ದಿನಗಳಲ್ಲಿ ಮಳೆ ಹೆಚ್ಚಾಗಿ ಸೊಳ್ಳೆಗಳ ಕಾಟ ಹೆಚ್ಚಿದ್ದು ಈ ಬಗ್ಗೆ ಜನರು ಹೆಚ್ಚು ಜಾಗೃತರಾಗಬೇಕು. ವಿಶ್ವ ಡೆಂಘೀ ವಿರೋಧಿ ಮಾಸಾ ಚರಣೆ ಯಶಸ್ವಿಯಾಗಲು ಎಲ್ಲರೂ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದರು.

ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಆಶಾಕಾರ್ಯಕರ್ತೆಯರು ಜಾಗೃತಿ ಜಾಥಾ ನಡೆಸಿದರು. ಕಾರ್ಯಕ್ರಮದಲ್ಲಿ ಬಿಪಿಎಂ ಪ್ರದೀಪ್, ಆರೋಗ್ಯ ನಿರೀಕ್ಷಾಣಾಧಿಕಾರಿ ಗಳಾದ ಅಮೃತ್‌ರಾಜ್, ಸಂಜಯ್, ರಾಜು ಮುಂತಾದವರು ಉಪಸ್ಥಿತರಿದ್ದರು.

Share this article