ಐಪಿಎಲ್ ಪಂದ್ಯಾ‍‍ವಳಿ ಭದ್ರತೆಗೆ 2000 ಪೊಲೀಸರ ನಿಯೋಜನೆ

KannadaprabhaNewsNetwork |  
Published : Mar 27, 2026, 03:45 AM ISTUpdated : Mar 27, 2026, 06:06 AM IST
Police

ಸಾರಾಂಶ

ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಉದ್ಘಾಟನಾ ಪಂದ್ಯಾ‍‍ವಳಿಗೆ ಸುಮಾರು 2 ಸಾವಿರ ಪೊಲೀಸರಿಂದ ಖಾಕಿ ಭದ್ರತಾ ಕೋಟೆ ನಿರ್ಮಾಣವಾಗಲಿದೆ.

 ಬೆಂಗಳೂರು :  ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಉದ್ಘಾಟನಾ ಪಂದ್ಯಾ‍‍ವಳಿಗೆ ಸುಮಾರು 2 ಸಾವಿರ ಪೊಲೀಸರಿಂದ ಖಾಕಿ ಭದ್ರತಾ ಕೋಟೆ ನಿರ್ಮಾಣವಾಗಲಿದೆ.

ಗುರುವಾರ ಕ್ರೀಡಾಂಗಣದಲ್ಲಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಐಪಿಎಲ್ ಪಂದ್ಯಾವಳಿ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದರು.

ಭದ್ರತೆಯಲ್ಲಿ ಜಂಟಿ ಪೊಲೀಸ್ ಆಯುಕ್ತರು, ಡಿಸಿಪಿ, ಎಸಿಪಿ, ಇನ್ಸ್‌ಪೆಕ್ಟರ್‌, ಸಬ್‌ ಇನ್ಸ್‌ಪೆಕ್ಟರ್‌ ಹಾಗೂ ಎಎಸ್‌ಐಗಳು ಸೇರಿದಂತೆ 2 ಸಾವಿರ ಪೊಲೀಸರು ನಿಯೋಜಿಸಲಾಗಿದೆ. ಅಲ್ಲದೆ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್), ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ), ಗೃಹ ರಕ್ಷಕ ದಳ ಸಹ ಬಂದೋಸ್ತ್‌ಗೆ ಬಳಸಿಕೊಳ್ಳಲಾಗುತ್ತದೆ. ಇನ್ನು ಕ್ರೀಡಾಂಗಣದ ಆವರಣದಲ್ಲಿ ಖಾಸಗಿ ಭದ್ರತಾ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ಆಯೋಜಕರು ನಿಯೋಜಿಸಿದ್ದಾರೆ ಎಂದು ಹೇಳಿದರು.

ಕಳೆದ ವರ್ಷ ಐಪಿಎಲ್‌ ಗೆಲುವಿನ ಸಂಭ್ರಮದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಅಭಿಮಾನಿಗಳು ಮೃತಪಟ್ಟಿದ್ದರು. ಈ ಕರಾಳ ಘಟನೆ ಮತ್ತೆ ಮರುಕಳಿಸದಂತೆ ಪೊಲೀಸರು ಮುನ್ನಚ್ಚೆರಿಕೆ ವಹಿಸಿದ್ದಾರೆ.

ಏಳು ವಿಚಕ್ಷಣಾ ದಳದ ಗಸ್ತು 

ಕ್ರೀಡಾಂಗಣದ ಸುತ್ತಮುತ್ತ ಜನದಟ್ಟಣೆ ನಿಯಂತ್ರಣಕ್ಕೆ ಟಿಕೆಟ್ ಇಲ್ಲದೆ ಕ್ರೀಡಾಂಗಣ ಬಳಿ ಸಾರ್ವಜನಿಕರ ಸುಖಾಸುಮ್ಮನೆ ಗುಂಪು ಸೇರಲು ಹಾಗೂ ಅಡ್ಡಾಡಲು ಅವಕಾಶವಿರುವುದಿಲ್ಲ. ಅನಗತ್ಯವಾಗಿ ತಿರುಗಾಡುವವರ ಮೇಲೆ ನಿಗಾವಹಿಸಲು ಕ್ರೀಡಾಂಗಣ ಸುತ್ತಲು ಏಳು ವಿಚಕ್ಷಣಾ ದಳಗಳನ್ನು ರಚಿಸಲಾಗಿದೆ. ಪ್ರತಿ ದಳದಲ್ಲಿ 15 ರಿಂದ 20 ಮಂದಿ ಪೊಲೀಸರು ಇರಲಿದ್ದಾರೆ. ಪಂದ್ಯ ಆರಂಭದಿಂದ ಅಂತ್ಯದವರೆಗೆ ಕ್ರೀಡಾಂಗಣ ಸುತ್ತ ನಾಲ್ಕು ರಸ್ತೆಗಳಲ್ಲಿ ಅವರು ಗಸ್ತು ತಿರುಗಲಿದ್ದಾರೆ. ಕ್ರೀಡಾಂಗಣದ ಬಳಿ ಅನಗತ್ಯ ಸುತ್ತಾಡುವವರನ್ನು ವಿಚಕ್ಷಣಾ ದಳಗಳು ವಶಕ್ಕೆ ಪಡೆಯಲಿವೆ ಎಂದು ತಿಳಿಸಿದರು.

43 ಗೇಟ್‌ಗಳಲ್ಲೂ ಪ್ರವೇಶ 

ಕ್ರೀಡಾಂಗಣದ ಪ್ರವೇಶ ಮತ್ತು ನಿರ್ಗಮನದ ವೇಳೆ ಪ್ರತಿಯೊಬ್ಬ ಪ್ರೇಕ್ಷಕರನ್ನು ತಪಾಸಣೆ ನಡೆಸಲಾಗುತ್ತದೆ. ಟಿಕೆಟ್ ಯಾರ ಹೆಸರಿನಲ್ಲಿ ಬುಕ್ ಆಗಿದೆಯೋ ಅವರನ್ನು ಮಾತ್ರ ಒಳ ಬಿಡಲಾಗುತ್ತದೆ. ಅನಧಿಕೃತ ವ್ಯಕ್ತಿಗಳಿಗೆ ಅವಕಾಶವಿರುವುದಿಲ್ಲ. ಕ್ರೀಡಾಂಗಣ ಸುತ್ತಮುತ್ತ ಸಿಸಿಟಿವಿ ಹಾಗೂ ಕೃತಕ ಬುದ್ಧಮತ್ತೆ ಕ್ಯಾಮರಾಗಳನ್ನು ಅಳವಡಿಸಿ ನಿಗಾವಹಿಸಲಾಗಿದೆ.

ಕಳೆದ ವರ್ಷ 24 ಗೇಟ್‌ಗಳಲ್ಲಿ ಮಾತ್ರ ಪ್ರವೇಶಕ್ಕೆ ಅವಕಾಶ ಇತ್ತು. ಆದರೆ ಈ ಬಾರಿ 45 ಗೇಟ್‌ಗಳಲ್ಲೂ ಕೂಡ ಪ್ರೇಕ್ಷಕರಿಗೆ ಒಳ ಬರಲು ಮುಕ್ತವಾಗಿಸಲಾಗಿದೆ. ಎಲ್ಲಾ ಗೇಟ್‌ಗಳಲ್ಲಿ ಲೋಹ ಪರಿಶೋಧಕಗಳನ್ನು ಅಳವಡಿಸಲಾಗಿದ್ದು, ನಿಷೇಧಿತ ವಸ್ತುಗಳನ್ನು ಪ್ರವೇಶ ದ್ವಾರದಲ್ಲಿ ಜಪ್ತಿ ಮಾಡಲಾಗುತ್ತದೆ ಎಂದು ಆಯುಕ್ತರು ವಿವರಿಸಿದರು.

500 ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು

ಕ್ರೀಡಾಂಗಣದ ಸುತ್ತಮುತ್ತ ಸುಮಾರು 500 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ವ್ಯವಸ್ಥೆ. ಈ ಕ್ಯಾಮೆರಾಗಳನ್ನು ನೇರವಾಗಿ ಕಮಾಂಡರ್ ಸೆಂಟರ್‌ಗೆ ಸಂಪರ್ಕ ಹೊಂದಿದ್ದು, ಪ್ರತಿ ಕ್ಷಣದ ಬೆಳವಣಿಗೆ ಮೇಲೂ ಖಾಕಿ ಕಣ್ಣಿರುತ್ತದೆ. ತುರ್ತು ಸೇವೆಗೆ 9 ಆಂಬ್ಯುಲೆನ್ಸ್‌ಗಳು ಹಾಗೂ ಅಗ್ನಿಶಾಮಕ ದಳದ ವಾಹನಗಳು ಸನ್ನದ್ಧವಾಗಿರುತ್ತವೆ.

ಸಾರ್ವಜನಿಕ ಸಾರಿಗೆ ಬಳಕೆಗೆ ಮನವಿ

ಪಂದ್ಯದ ಟಿಕೆಟ್ ಖರೀದಿಸಿದವರಿಗೆ ಮೆಟ್ರೋ ಪ್ರಯಾಣ ಉಚಿತ ಹಾಗೂ ಮೆಟ್ರೋ ನಿಲ್ದಾಣಗಳಲ್ಲಿ ವಾಹನಳಿಗೆ ನಿಲುಗಡೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಅಂದು ರಾತ್ರಿ 2 ಗಂಟೆವರೆಗೂ ಬಿಎಎಂಟಿಸಿ ಬಸ್‌ ಸೌಲಭ್ಯವಿದೆ. ಹೀಗಾಗಿ ಪಂದ್ಯ ವೀಕ್ಷಣೆಗೆ ಬರುವವರು ಸಾರ್ವಜನಿಕ ಸಾರಿಗೆ ಬಳಸುವಂತೆ ಸೀಮಂತ್ ಕುಮಾರ್ ಸಿಂಗ್‌ ಮನವಿ ಮಾಡಿದರು.

4 ತಾಸು ಮುನ್ನವೇ ಬರಬೇಕು:

ಐಪಿಎಲ್ ಪಂದ್ಯವಳಿ ಆರಂಭಕ್ಕೂ ನಾಲ್ಕು ತಾಸು ಮುನ್ನವೇ ಟಿಕೆಟ್ ಖರೀದಿಸಿರುವವರು ಕ್ರೀಡಾಂಗಣದೊಳಗೆ ಪ್ರವೇಶಿಸಬೇಕು. ಒಮ್ಮೆ ಕ್ರೀಡಾಂಗಣದ ಒಳಗೆ ಪ್ರವೇಶಿಸಿದರ ಬಳಿಕ ಪಂದ್ಯ ಮುಗಿಯುವವರೆಗೆ ಹೊರಗೆ ಬಿಡುವುದಿಲ್ಲ ಎಂದು ಜಂಟಿ ಆಯುಕ್ತ (ಪಶ್ಚಿಮ) ವಂಶಿಕೃಷ್ಣ ತಿಳಿಸಿದರು.

ಪಂದ್ಯವಳಿ ‍ವೀಕ್ಷಣೆಗೆ ಸ್ನೇಹಿತರೆಲ್ಲ ಒಟ್ಟಾಗಿ ಬಂದರೆ ಸಮಯ ಕಳೆಯಲು ಅನುಕೂಲವಾಗುತ್ತದೆ. ಕ್ರೀಡಾಂಗಣದೊಳಗೆ ಪ್ರವೇಶಿಸಿದ ಬಳಿಕ ಪಂದ್ಯ ಆರಂಭದವರೆಗೆ ಪ್ರೇಕ್ಷಕರಿಗೆ ನಿಲ್ಲಲು 9 ಪ್ರದೇಶಗಳನ್ನು ನಿಗದಿಪಡಿಸಲಾಗಿದೆ. ಅಲ್ಲಿಂದ ಆಸನಗಳಿಗೆ ತೆರಳಬಹುದು ಎಂದು ಜಂಟಿ ಆಯುಕ್ತರು ಮಾಹಿತಿ ನೀಡಿದರು.

ಸಂಚಾರ ನಿರ್ಬಂಧ

ಐಪಿಎಲ್ ಪಂದ್ಯಾವಳಿ ಹಿನ್ನಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ವ್ಯಾಪ್ತಿ ಸಂಚಾರ ವ್ಯವಸ್ಥೆಯಲ್ಲಿ ಪೊಲೀಸರು ಬದಲಾವಣೆ ಮಾಡಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಅಲ್ಲದೆ ಎಂ.ಜಿ.ರಸ್ತೆ, ಕಬ್ಬನ್ ರಸ್ತೆ, ಕಸ್ತೂರಿ ಬಾ ರಸ್ತೆ, ಕ್ವೀನ್ಸ್‌ ರಸ್ತೆ ಹಾಗೂ ಕಾಮರಾಜ ಮಾರ್ಗ ಸೇರಿದಂತೆ ಇತರೆಡೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಪ್ರತಿ ಪಂದ್ಯಕ್ಕೆ 25 ಲಕ್ಷ ಭದ್ರತಾ ಶುಲ್ಕ

ಐಪಿಎಲ್ ಪಂದ್ಯಗಳಿಗೆ ಪೊಲೀಸರ ಬಂದೋಸ್ತ್‌ ಪಡೆಯಲು ತಲಾ ಪಂದ್ಯಕ್ಕೆ 25 ಲಕ್ಷ ರು ಭದ್ರತಾ ಶುಲ್ಕವನ್ನು ಸರ್ಕಾರಕ್ಕೆ ಆಯೋಜಕರು ಪಾವತಿಸಲಿದ್ದಾರೆ. ಈಗಾಗಲೇ ಐಪಿಎಲ್‌ ಆರಂಭಕ್ಕೂ ಮುನ್ನವೇ ಕಳೆದ ವರ್ಷ ಬಾಕಿ ಉಳಿಸಿಕೊಂಡಿದ್ದ 7 ಕೋಟಿ ರು ಭದ್ರತಾ ಶುಲ್ಕವನ್ನು ಆಯೋಜಕರು ಕಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಅಣುಕು ಭದ್ರತಾ ವ್ಯವಸ್ಥೆ ಪ್ರದರ್ಶನ

ಭದ್ರತಾ ವ್ಯವಸ್ಥೆ ಸಂಬಂಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಪೊಲೀಸರು ಅಣುಕು ಪ್ರದರ್ಶ ನಡೆಸಿದರು. ಐಪಿಎಲ್ ಪಂದ್ಯಾವಳಿಗೆ ಬಿಗಿ ಬಂದೋಬಸ್ತ್ ಅನ್ನು ಕಲ್ಪಿಸಲಾಗಿದ್ದು, ಅಂತಿಮ ಹಂತದಲ್ಲಿ ಭದ್ರತಾ ವ್ಯವಸ್ಥೆ ಬದಲಾವಣೆ ಸಲುವಾಗಿ ಅಣುಕು ಪ್ರದರ್ಶ ಕೈಗೊಂಡು ಅಧಿಕಾರಿಗಳು ಪರಿಶೀಲಿಸಿದರು.

ಐಪಿಎಲ್ ಪಂದ್ಯದ ವೇಳೆ ಕಾನೂನುಬಾಹಿರ ಕೃತ್ಯಗಳಿಗೆ ಯತ್ನಿಸಿದರೆ ಸಹಿಸುವುದಿಲ್ಲ. ಕಾಳಸಂತೆಯಲ್ಲಿ ಟಿಕೆಟ್‌ ಮಾರಾಟಕ್ಕೆ ಯತ್ನಿಸುವ ಕಿಡಿಗೇಡಿಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ.

-ಸೀಮಂತ್ ಕುಮಾರ್ ಸಿಂಗ್, ಪೊಲೀಸ್ ಆಯುಕ್ತ, ಬೆಂಗಳೂರು ನಗರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಅಕ್ರಮ ಸಂಬಂಧ ಕಾರಣ ಬಾಲಕನಿಂದ ಡಬಲ್‌ ಮರ್ಡರ್!
ಸಂಚಾರ ಸಮಸ್ಯೆಗೆ ಟನಲ್‌ ರಸ್ತೆ ಪರಿಹಾರ : ವಿಧಾನ ಸಭೆಯಲ್ಲಿ ಡಿಸಿಎಂ ಪ್ರತಿಪಾದನೆ