ಚಳ್ಳಕೆರೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಶಾಂತಿಯುತ ಚುನಾವಣೆ ನಡೆಸಲು ಜಿಲ್ಲಾ ಪೊಲೀಸ್ ಇಲಾಖೆ ಹಲವಾರು ಮುನ್ನೆಚ್ಚರಿಕೆಕ್ರಮಕೈಗೊಂಡಿದೆ ಎಂದು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕುಮಾರಸ್ವಾಮಿ ತಿಳಿಸಿದರು.
ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಗುರುವಾರ ಚುನಾವಣೆಗೆ ನಿಯೋಜನೆಗೊಂಡ ಇಲಾಖೆ ಸಿಬ್ಬಂದಿ ವರ್ಗಕ್ಕೆ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಸುವ ಕುರಿತು ಇಲಾಖೆ ಸಿಬ್ಬಂದಿಗೆ ಹಲವಾರು ನಿರ್ದಿಷ್ಟ ಸೂಚನೆಗಳನ್ನು ನೀಡಿದರು. ಮತದಾನ ಆರಂಭವಾದ ಮೇಲೆ ಸಾಮಾನ್ಯವಾಗಿ ಮತಗಟ್ಟೆಗಳ ಮುಂದೆ ಜನರು ಆಗಮಿಸಿ ಮತದಾನ ಪ್ರಕ್ರಿಯೆ ಬಗ್ಗೆ ಗಮನಹರಿಸುವರು. ಜೊತೆಯಲ್ಲಿ ಕೆಲ ವ್ಯಕ್ತಿಗಳು ಮತಗಟ್ಟೆ ಮುಂದೆ ಹೆಚ್ಚು ಓಡಾಟ ನಡೆಸುತ್ತಾ ಸಮಸ್ಯೆಗಳನ್ನು ಹುಟ್ಟುಹಾಕಲು ಪ್ರಯತ್ನಿಸುವರು. ಆದ್ದರಿಂದ ಚುನಾವಣಾ ಆಯೋಗದ ಸೂಚನೆಯಂತೆ ಮತಗಟ್ಟೆ ಕೇಂದ್ರಕ್ಕೆ ನಿಯೋಜನೆಗೊಂಡ ಸಿಬ್ಬಂದಿ ವರ್ಗ 100 ಮೀ. ಅಂತರದಲ್ಲಿ ಯಾರೂ ಸಹ ಇರದಂತೆ ಜಾಗ್ರತೆವಹಿಸಬೇಕು. ಮತದಾನ ಮಾಡಲು ಬಂದ ಮತದಾರರಿಗೆ ಸರದಿ ಸಾಲಿನಲ್ಲಿ ನಿಲ್ಲುವಂತೆ ಮನವಿ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ, ಯಾರೊಡನೆಯೂ ಮಾತಿನ ಚಕಮುಕಿಗೆ ಅವಕಾಶವಿಲ್ಲದಂತೆ ಎಚ್ಚರಿಕೆವಹಿಸಬೇಕು. ಅನಿರೀಕ್ಷಿತವಾಗಿ ಸಮಸ್ಯೆ ಉಂಟಾದಲ್ಲಿ ಕೂಡಲೇ ಹಿರಿಯ ಅಧಿಕಾರಿಗಳನ್ನು ಅಥವಾ ಮೊಬೈಲ್ ಸ್ಕ್ವ್ಯಾಡ್ ಅನ್ನು ಸಂಪರ್ಕಿಸುವಂತೆ ಸೂಚಿಸಿದರು.ಉಪವಿಭಾಗದ ಡಿವೈಎಸ್ಪಿ ರಾಜಣ್ಣ ಮಾತನಾಡಿ, ಶಾಂತಿಯುವ ಚುನಾವಣೆಗೆ ಪೊಲೀಸ್ ಇಲಾಖೆ ಎಲ್ಲಾ ರೀತಿಯ ಕ್ರಮಕೈಗೊಂಡಿದೆ. ಚುನಾವಣಾ ಕಾರ್ಯಕ್ಕಾಗಿ ೪೧೦ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಓರ್ವ ಡಿವೈಎಸ್ಪಿ, ಮೂವರು ವೃತ್ತ ನಿರೀಕ್ಷಕರು, ೭ ಪಿಎಸ್‌ಐ, ೨೨ ಎಎಸ್‌ಐ, ೫೬ ಮುಖ್ಯಪೇದೆ, ೨೦೫ ಪೊಲೀಸ್ ಪೇದೆ, ಗೃಹರಕ್ಷಕ ದಳ ೧೧೨ ಕಾರ್ಯನಿರ್ವಹಿಸಲಿದ್ದು, ನಾಲ್ಕು ಡಿಎಆರ್, ಕೆಎಸ್‌ಆರ್‌ಪಿ ತುಕಡಿಗಳನ್ನು ಬಂದೋಬಸ್ತ್ ಕಾರ್ಯಕ್ಕೆ ನಿಯೋಜನೆ ಮಾಡಿದೆ. ಠಾಣಾ ವೃತ್ತ ನಿರೀಕ್ಷಕ ಕೆ.ಕುಮಾರ, ತುರುವನೂರು ಠಾಣಾ ಇನ್ಸ್‌ಪೆಕ್ಟರ್ ದೀಪಕ್ ಮುಂತಾದವರು ಉಪಸ್ಥಿತರಿದ್ದರು.