ರಾಮನಗರ: ಮಳಗಾಳು ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಅನೀಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಬಂಧಿಕರಾಗಿದ್ದು, ಅವರೆಲ್ಲರನ್ನು ರಾಜ್ಯದಿಂದಲೇ ಗಡಿಪಾರು ಮಾಡಬೇಕು ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆಯಲ್ಲಿ ಆರೋಪಿಗಳಾಗಿರುವ ರೌಡಿ ಶೀಟರ್ ಹರ್ಷ ಅಲಿಯಾಸ್ ಕೈಮ ಮತ್ತು ಅವನ ಸಂಗಡಿಗರು ಡಬಲ್ ಮರ್ಡರ್ ಕೇಸಿನಲ್ಲಿಯೂ ಭಾಗಿಯಾಗಿದ್ದು, ಇದೀಗ ಅನೀಶ್ ಎಡಗೈ ತುಂಡರಿಸಿದ್ದಾರೆ. ದೂರು ದಾಖಲಾಗಿದ್ದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿದರು.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಅಹಿಂದ ವರ್ಗದವರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಗೂಂಡಾಗಿರಿ, ಅತ್ಯಾಚಾರ, ಕೊಲೆ, ಸುಲಿಗೆ, ಅಕ್ರಮ ಗಣಿಗಾರಿಕೆಗೆ ಎಗ್ಗಿಲ್ಲದೆ ಸಾಗಿದೆ. ಹೀಗಾಗಿ ಕನಕಪುರ ಅಂದರೆ ಮರ್ಡರ್ ಏರಿಯಾ ಅನ್ನುವಂತಾಗಿದೆ. ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. ಅಲ್ಲಿ ನೂರಾರು ಕೊಲೆಗಳು ನಡೆದಿದ್ದು, ಆ ಪ್ರಕರಣಗಳೆಲ್ಲವೂ ಮುಚ್ಚಿ ಹೋಗಿವೆ ಎಂದು ಆರೋಪ ಮಾಡಿದರು.
ಈಗ ಕಾಂಗ್ರೆಸ್ ಪಕ್ಷದವರೇ ಆದ ಪರಿಶಿಷ್ಟ ಜಾತಿಗೆ ಸೇರಿದ ಜಿಪಂ ಮಾಜಿ ಅಧ್ಯಕ್ಷ ವೈರಮುಡಿಯವರ ಪುತ್ರ ಅನೀಶ್ ಮಾರಣಾಂತಿಕ ಹಲ್ಲೆಗೊಳಗಾಗಿ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಘಟನಾ ಸ್ಥಳಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರಾಗಲಿ ಭೇಟಿ ನೀಡಿಲ್ಲ ಎಂದು ದೂರಿದರು.ಅನೀಶ್ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ರಾಜ್ಯದಿಂದ ಗಡಿಪಾರು ಮಾಡಬೇಕು. ಅಲ್ಲದೆ, ಸಂತ್ರಸ್ತನ ಕುಟುಂಬದವರಿಗೆ 5 ಕೋಟಿ ಪರಿಹಾರ, 10 ಎಕರೆ ಜಮೀನು , ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಸರ್ಕಾರವೇ ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಭರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಈ ಘಟನೆ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಪ್ರಯತ್ನ ಮಾಡಿದ್ದೆವು. ಆದರೆ, ಅಧಿವೇಶನ ನಡೆಯುತ್ತಿರುವ ಕಾರಣ ಭೇಟಿ ಸಾಧ್ಯವಾಗಿಲ್ಲ. ಈಗ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿಜಿ, ಐಜಿಪಿ ಅವರೆಲ್ಲರನ್ನು ಭೇಟಿಯಾಗಿ ಪ್ರಕರಣದ ನಿಸ್ಪಕ್ಷಪಾತ ತನಿಖೆಗೆ ಒತ್ತಾಯಿಸುತ್ತೇವೆ. ಘಟನಾ ಸ್ಥಳಕ್ಕೂ ತೆರಳಿದ ಮೇಲೆ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಅನೀಷ್ ಅವರನ್ನು ಭೇಟಿ ಮಾಡುತ್ತೇವೆ ಎಂದು ಮಾರಸಂದ್ರ ಮುನಿಯಪ್ಪ ತಿಳಿಸಿದರು.ಆಹೋರಾತ್ರಿ ಚಳವಳಿ:
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಎಂ.ನಾಗೇಶ್ ಮಾತನಾಡಿ, ಹಾರೋಹಳ್ಳಿ ತಾಲೂಕು ಮರಳವಾಡಿ ಹೋಬಳಿ ಸಿಡಿದೇವರಹಳ್ಳಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಓಬಿಸಿ ಸಮುದಾಯಗಳು ಹೊಂದಿರುವ ಜಮೀನಿನಿಂದ ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿರುವ ಅರಣ್ಯ ಇಲಾಖೆ ಧೋರಣೆ ವಿರುದ್ಧ ಜು.26ರಿಂದ ಆಹೋರಾತ್ರಿ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.ಗ್ರಾಮದಲ್ಲಿ ಸುಮಾರು 50 - 60 ವರ್ಷಗಳ ಹಿಂದೆಯೇ ಸುಮಾರು 80 ಕುಟುಂಬಗಳಿಗೆ ಜಮೀನು ಮಂಜೂರಾಗಿದ್ದು, ಪಹಣಿ, ಮ್ಯೂಟೇಷನ್, ಖಾತೆ, ಕಂದಾಯ ಎಲ್ಲಾ ದಾಖಲೆಗಳನ್ನು ಹೊಂದಿದ್ದಾರೆ. ಅಂದಿನಿಂದ ಸ್ವಾಧೀನಾನುಭವದಲ್ಲಿರುವ ಜಮೀನಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ದೌರ್ಜನ್ಯದಿಂದ ಗಿಡ ನೆಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಅರಣ್ಯ ಇಲಾಖೆಯ ಡಿಸಿಎಫ್ ರಾಮಕೃಷ್ಣಪ್ಪ, ಎಸಿಎಫ್ ಗಣೇಶ್, ಆರ್‌ಎಫ್ ಒ ದಾಳೇಶ್ ಮತ್ತು ಡಿಆರ್ ಎಫ್‌ಒ ರಮೇಶ್ ಯಾಕಂಚಿ ಮತ್ತಿತರ ಸಿಬ್ಬಂದಿ ಗೂಂಡಾಗಳಂತೆ ಜಮೀನು ಮಂಜೂರಿದಾರರ ಮೇಲೆ ಜಾತಿ ನಿಂದನೆ ಮಾಡುತ್ತಾ ದೌರ್ಜನ್ಯ ಎಸಗುತ್ತಿದ್ದಾರೆ. ಸರ್ಕಾರ ಪರಿಶಿಷ್ಟ ಜಾತಿ ಮತ್ತು ಓಬಿಸಿ ಕುಟುಂಬಗಳಿಗೆ ಆಗುತ್ತಿರುವ ದೌರ್ಜನ್ಯ ತಪ್ಪಿಸಬೇಕು.ಜಾತಿ ನಿಂದನೆ ಮಾಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಎಸ್ಸಿ - ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಶಿಕ್ಷೆಗೆ ಗುರಿ ಪಡಿಸಬೇಕು. ಕೂಡಲೇ ಅವರೆಲ್ಲರನ್ನು ಸೇವೆಯಿಂದ ಅಮಾನತ್ತು ಮಾಡಬೇಕು ಎಂದು ನಾಗೇಶ್ ರಾಜ್ಯಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ .ಮುನಿಯಪ್ಪ, ಬಿ.ಅನ್ನದಾನಪ್ಪ, ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಮುಖಂಡರಾದ ಕೃಷ್ಣಮೂರ್ತಿ, ರಾಮಚಂದ್ರ, ಗೌರಮ್ಮ, ವೆಂಕಟಾಚಲ ಮತ್ತಿತರರಿದ್ದರು.24ಕೆಆರ್ ಎಂಎನ್ 2.ಜೆಪಿಜಿ
ರಾಮನಗರದಲ್ಲಿ ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.