ಸರ್ಕಾರಿ ಜಮೀನು ಸಂರಕ್ಷಣೆಗೆ ಲ್ಯಾಂಡ್ ಬೀಟ್ ಜಾರಿ: ಡಿಸಿ

KannadaprabhaNewsNetwork |  
Published : Jul 25, 2024, 01:17 AM IST
ಫೋಟೋ- ಡಿಸಿ ಪ್ರೆಸ್‌ಮೀಟ | Kannada Prabha

ಸಾರಾಂಶ

ಸರ್ಕಾರಿ ಜಮೀನು ಒತ್ತುವರಿ, ಅತಿಕ್ರಮಣ, ಭೂಗಳ್ಳರಿಂದ ಸಂರಕ್ಷಿಸಲು ಕಂದಾಯ ಇಲಾಖೆಯು ‘ಲ್ಯಾಂಡ್ ಬೀಟ್’ ಎಂಬ ಹೊಸ ತಂತ್ರಾಂಶ ಅಭಿವೃದ್ಧಿಪಡಿಸಿದೆ ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಸರ್ಕಾರಿ ಜಮೀನು ಒತ್ತುವರಿ, ಅತಿಕ್ರಮಣ, ಭೂಗಳ್ಳರಿಂದ ಸಂರಕ್ಷಿಸಲು ಕಂದಾಯ ಇಲಾಖೆಯು ‘ಲ್ಯಾಂಡ್ ಬೀಟ್’ ಎಂಬ ಹೊಸ ತಂತ್ರಾಂಶ ಅಭಿವೃದ್ಧಿಪಡಿಸಿದೆ ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ ಕಂದಾಯ ಇಲಾಖೆಯಡಿ ಬರುವ ಗೈರಾಣ, ಗೋಮಾಳ ಸೇರಿದಂತೆ 1.4 ಮಿಲಿಯನ್ ಸರ್ಕಾರಿ ಆಸ್ತಿಗಳ ಭೌಗೋಳಿಕ ಗಡಿ ಮತ್ತು ಸರ್ವೇ ನಂಬರ್ ಒಳಗೊಂಡ ಮಾಹಿತಿಯ ಡಿಜಿಟಲ್ ದಾಖಲೆಗಳನ್ನು ಈ ತಂತ್ರಾಂಶ ಹೊಂದಲಿದೆ ಎಂದರು.

ಕಲಬುರಗಿ ಜಿಲ್ಲೆಯಲ್ಲಿ 31,972 ಸರ್ಕಾರಿ ಆಸ್ತಿಗಳಿದ್ದು, ಇದರಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಈಗಾಗಲೆ ಕ್ಷೇತ್ರ ತಪಾಸಣೆ ಮಾಡಿ 29,954 ಸರ್ಕಾರಿ ಭೂಮಿ ಗುರುತಿಸಿದ್ದಾರೆ. ಜಿಲ್ಲೆಯಲ್ಲಿ ಶೇ.93.69ರಷ್ಟು ಪ್ರಗತಿ ಸಾಧಿಸಿದೆ. ಇದರಿಂದ ಸರ್ಕಾರಿ ಜಮೀನು ಸಂರಕ್ಷಣೆ ಜೊತೆಗೆ ಸರ್ಕಾರಿ ಯೋಜನೆಗಳಡಿ ಕಟ್ಟಡಗಳ ನಿರ್ಮಾಣ, ಕೈಗಾರಿಕೆ ಸ್ಥಾಪನೆ ಸಂದರ್ಭದಲ್ಲಿ ಸರ್ಕಾರಿ ಜಮೀನು ಲಭ್ಯತೆಯ ಮಾಹಿತಿ ಅಂಗೈಯಲ್ಲಿ ದೊರೆಯಲಿದೆ ಎಂದರು.

ಲ್ಯಾಂಡ್ ಬೀಟ್ ಕಾರ್ಯಕ್ರಮದ ಮೂಲಕ ಚಿತ್ತಾಪುರ ತಾಲೂಕಿನಲ್ಲಿ 4,874, ಕಮಲಾಪುರ 2,759, ಚಿಂಚೋಳಿ 3,290, ಕಲಬುರಗಿ 2,840, ಶಹಾಬಾದ 1,074, ಕಾಳಗಿ 3,351, ಸೇಡಂ 2,801, ಆಳಂದ 3,150, ಅಫಜಲ್ಪುರ 3,640, ಜೇವರ್ಗಿ 3,075 ಹಾಗೂ ಯಡ್ರಾಮಿ ತಾಲೂಕಿನ 1,118 ಸರ್ಕಾರಿ ಜಮೀನುಗಳಿಗೆ ವಿ.ಎ. ಅವರು ಭೇಟಿ ನೀಡಿದ್ದಾರೆ ಎಂದು ಡಿ.ಸಿ. ಅಂಕಿ ಸಂಖ್ಯೆ ವಿವರಿಸಿದರು.

ಕೇವಲ ಒಮ್ಮೆ ಜಮೀನಿಗೆ ಭೇಟಿ ನೀಡಿ ಮಾಹಿತಿ ಅಪ್ಲೋಡ್ ಮಾಡುವುದಿಲ್ಲ. ಬದಲಾಗಿ 3 ತಿಂಗಳಿಗೊಮ್ಮೆ ಗ್ರಾಮ ಆಡಳಿತಾಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಜಮೀನಿನ ಗಡಿ ಸುತ್ತ ಟ್ರಾನ್ಸಿಟ್ ವಾಕ್ ಮೂಲಕ ಜಿ.ಪಿ.ಎಸ್. ಆಧಾರಿತ ಜಮೀನಿನ ಚಿತ್ರ ಸೆರೆ ಹಿಡಿದು ತಂತ್ರಾಂಶದಲ್ಲಿ ಮಾಹಿತಿ ದಾಖಲು ಮಾಡಲಿದ್ದಾರೆ. ಇದರಿಂದ ಅತಿಕ್ರಮಣ, ಒತ್ತುವರಿ ಅಂಶ ಮಾಹಿತಿ ದೊರೆಯಲಿದ್ದು, ಕೂಡಲೆ ಕ್ರಮ ಕೈಗೊಳ್ಳಲು ಸಹ ಇದು ಅನುಕೂಲವಾಗಲಿದೆ ಎಂದು ಡಿ.ಸಿ. ಲ್ಯಾಂಡ್ ಬೀಟ್ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು.

ಆ.1ರಿಂದ ಡಿಜಿಟಲ್ ದಾಖಲೀಕರಣ ಕಾರ್ಯಕ್ಕೆ ಚಾಲನೆ: ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ಕಂದಾಯ ಸೇವೆ ನೀಡಲು ಇಲಾಖೆಯು ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಒತ್ತು ನೀಡಿದ್ದು, ಚಿಂಚೋಳಿಯಲ್ಲಿ ಪ್ರಾಯೋಗಿಕವಾಗಿ ಕಂದಾಯ ಇಲಾಖೆಯ ಅಭಿಲೇಖಾಲಯದಲ್ಲಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ದಾಖಲೀಕರಣ ಮಾಡುವ ಪ್ರಕ್ರಿಯೆ ಶೇ.99ರಷ್ಟು ಮುಗಿದಿದೆ. ಸುಮಾರು 15 ಲಕ್ಷ ಹಾಳೆಗಳನ್ನು ಸ್ಕ್ಯಾನ್ ಮಾಡಿಸಿ ಸಂಗ್ರಹಿಸಿಡಲಾಗಿದೆ. ಮುಂದುವರೆದು ಜಿಲ್ಲೆಯ ಇತರೆ ತಾಲೂಕಿನಲ್ಲಿಯೂ ಸಹ ಡಿಜಿಟಲ್ ದಾಖಲೀಕರಣ ಕಾರ್ಯಕ್ಕೆ ಆ.1ರಂದು ಚಾಲನೆ ನೀಡಲು ಚಿಂತನೆ ನಡೆಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು