ದಾಬಸ್‍ಪೇಟೆ: ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವ ರೌಡಿಶೀಟರ್‌ಗಳನ್ನು ಮುಲಾಜಿಲ್ಲದೆ ಕ್ರಮ ಕೈಗೊಂಡು ಗಡಿಪಾರು ಮಾಡುವುದಾಗಿ ನೆಲಮಂಗಲ ಉಪವಿಭಾಗದ ಡಿವೈಎಸ್ಪಿ ಉಮಾರಾಣಿ ಎಚ್ಚರಿಕೆ ನೀಡಿದರು.
50 ರೌಡಿಗಳು ಹಾಜರು: ನೆಲಮಂಗಲ ಉಪವಿಭಾಗ ವ್ಯಾಪ್ತಿಯಲ್ಲಿ 102 ಎ ವಿಭಾಗದ ರೌಡಿಗಳಿದ್ದು, 105 ಬಿವಿ ಭಾಗದ ರೌಡಿಗಳು ಸೇರಿದಂತೆ 206 ರೌಡಿಗಳಿದ್ದಾರೆ, ಇವರಲ್ಲಿ ಎ ವಿಭಾಗದ ರೌಡಿಗಳನ್ನು ಕರೆಸಲಾಗಿತ್ತು. ಅದರಲ್ಲಿ 50 ರೌಡಿಗಳು ಹಾಜರಾಗಿದ್ದು 48 ರೌಡಿಗಳು ಗೈರಾಗಿದ್ದಾರೆ. ಉಳಿದ ಇಬ್ಬರಿಗೆ ಆರೋಗ್ಯ ಸಮಸ್ಯೆಗಳಿದ್ದರೆ, 3 ರೌಡಿಗಳು ಜೈಲಿನಲ್ಲಿದ್ದಾರೆ, 3 ರೌಡಿಗಳು ಹೈಕೋಟ್ ತಡೆಯಾಜ್ಞೆಯಲ್ಲಿದ್ದು, 4 ರೌಡಿಗಳು ಪತ್ತೆಯಾಗಿಲ್ಲ.
ನಿಗಾ ವಹಿಸಲು ಸೂಚನೆ:ನೆಲಮಂಗಲ ಉಪವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಗಳ 45ಕ್ಕೂ ಹೆಚ್ಚು ರೌಡಿ ಶೀಟರ್ ಗಳನ್ನು ಇನ್ಸ್ ಪೆಕ್ಟರ್ ಗಳ ನೇತೃತ್ವದಲ್ಲಿ ಕರೆಸಲಾಗಿತ್ತು. ಪ್ರಸ್ತುತ ಚಟುವಟಿಕೆಗಳು, ಜೀವನೋಪಾಯ ಹಾಗೂ ಸಾಮಾಜಿಕ ನಡೆ-ನುಡಿಗಳ ಕುರಿತು ಮಾಹಿತಿ ಪಡೆದುಕೊಂಡ ಡಿವೈಎಸ್‍ಪಿ ಅವರ ನಿತ್ಯ ಚಟುವಟಿಕೆಗಳ ಮೇಲೆ ನಿರಂತರವಾಗಿ ಸ್ಥಳೀಯ ಪೊಲೀಸರು ನಿಗಾ ವಹಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನೆಲಮಂಗಲ ಗ್ರಾಮಾಂತರ ಇನ್ಸ್ ಪೆಕ್ಟರ್ ನರೇಂದ್ರ ಬಾಬು, ತ್ಯಾಮಗೊಂಡ್ಲು ಇನ್ಸ್ ಪೆಕ್ಟರ್ ಚನ್ನೇಗೌಡ, ನೆಲಮಂಗಲ ಟೌನ್ ಇನ್ಸ್ ಪೆಕ್ಟರ್ ಭರತ್ ಗೌಡ, ದಾಬಸ್‍ಪೇಟೆ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಧರ್ಮೇಂದ್ರ ಸೇರಿದಂತೆ ಅನೇಕ ಪೊಲೀಸರು ಉಪಸ್ಥಿತರಿದ್ದರು.
ನೆಲಮಂಗಲ ಉಪವಿಭಾಗದ ಡಿವೈಎಸ್ಪಿ ಕಚೇರಿ ಆವರಣದಲ್ಲಿ ರೌಡಿ ಶೀಟರ್ಗಳ ಪರೇಡ್ ನಡೆಸಲಾಯಿತು.