ಪಿಕೆಪಿಎಸ್‌ನಲ್ಲಿದ್ದ ₹3 ಕೋಟಿಗೂ ಅಧಿಕ ಠೇವಣಿ ಹಣ ಗುಳುಂ

KannadaprabhaNewsNetwork | Published : Sep 26, 2024 9:54 AM

ಸಾರಾಂಶ

ಡಿಸಿಸಿ ಬ್ಯಾಂಕ್‌ ಪಿಕೆಪಿಎಸ್‌ ಸಂಸ್ಥೆ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳುತ್ತಿರುವ ಆಡಳಿತ ಮಂಡಳಿಯು ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದೂ ಜಾರಿಕೊಳ್ಳಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಹುಮನಾಬಾದ್‌

ನಿವೃತ್ತಿ ಜೀವನ, ಮಕ್ಕಳ ಉಜ್ವಲ ಭವಿಷ್ಯ, ವೃದ್ಯಾಪನ ಜೀವನಕ್ಕೆ ಇರಲೆಂದು ಹುಮನಾಬಾದ್‌ನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೂಡಿಟ್ಟಿದ್ದ ಕೋಟ್ಯಂತರ ರುಪಾಯಿ ಠೇವಣಿ ಹಣ ಇದೀಗ ಸಂಘದಲ್ಲಿ ಉಳಿಯದೇ ಸಂಘದ ಆಡಳಿತ ಮಂಡಳಿ ಅನಾಮಧೇಯರು ಖಾಲಿ ಮಾಡಿದ್ದು ಠೇವಣಿ ವಾಪಸ್‌ ಪಡೆಯಲು ಹೋದಲ್ಲಿ ಶಂಘದ ಖಾತೆಯಲ್ಲಿ ದುಡ್ಡಿ ಖಾಲಿಯಾಗಿದೆ ಎಂದು ಹಣ ಕೊಡದೇ ಪೀಡಿಸುತ್ತಿದ್ದಾರೆ ಎಂದು ಉದ್ಯಮಿ ನಂದಕುಮಾರ ಚಿದ್ರಿ ಆರೋಪಿಸಿದ್ದಾರೆ.

ಅವರು ಪಟ್ಟಣದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಸದ್ಯ 74 ಗ್ರಾಹಕರ ಸುಮಾರು ₹3 ಕೋಟಿಗೂ ಅಧಿಕ ಠೇವಣಿ ಕುರಿತು ರಾಜ್ಯ ಸರ್ಕಾರಕ್ಕೆ, ಶಾಸಕರಿಗೆ, ಜಿಲ್ಲಾಧಿಕಾರಿಗಳ ಕಚೇರಿ, ಲೋಕಾಯುಕ್ತ, ಪೊಲೀಸ್‌ ಇಲಾಖೆ, ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಬ್ಯಾಂಕ್‌ ಸೇರಿದಂತೆ ಎಲ್ಲರಿಗೂ ಕಳೆದ ಎರಡು ವರ್ಷದಿಂದ ಈ ಕುರಿತು ದೂರು ನೀಡಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಹೊರತಾಗಿ ಈ ಕುರಿತು ತನಿಖೆ ಮಾಡುತ್ತೇವೆ ಎಂದು ಹಾರಿಕೆ ಉತ್ತರ ಸಿಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನೊಂದಡೆ ಡಿಸಿಸಿ ಬ್ಯಾಂಕ್‌ ಪಿಕೆಪಿಎಸ್‌ ಸಂಸ್ಥೆ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳುತ್ತಿರುವ ಆಡಳಿತ ಮಂಡಳಿಯು ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದೂ ಜಾರಿಕೊಳ್ಳಲಾಗುತ್ತಿದೆ. ಒಟ್ಟಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್) ಈ ದುಸ್ಥಿತಿಗೆ ಬರಲು ಇಲ್ಲಿನ ದುರಾಡಳಿತ ಕಾರಣ. ಸರ್ಕಾರ ಸೂಕ್ತ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಪಿಕೆಪಿಎಸ್‌ಗೆ ಬೀಗ ಹಾಕುವ ಮೂಲಕ ಠೇವಣಿದಾರರು ಪ್ರತಿಭಟನೆ ಮಾಡುವುದು ಅನಿವಾರ್ಯ ಎಂದು ಎಚ್ಚರಿಕೆ ನಿಡಿದ್ದಾರೆ.

ಸಂತ್ರಸ್ತೆ ವಿಜಯಲಕ್ಷ್ಮಿ ಪಾಟೀಲ್‌ ಮಾತನಾಡಿ, ಮಕ್ಕಳ ಉನ್ನತ ಅಭ್ಯಾಸಕ್ಕಾಗಿ ಎಂದು ಸ್ವಲ್ಪ ಸ್ವಲ್ಪ ಹಣ ಸಂಗ್ರಹಿಸಿ ಠೇವಣಿ ಇಡಲಾಗಿತ್ತು. ಇದೀಗ ಆ ಹಣ ಕಳೆದುಕೊಂಡಿದ್ದು, ದಿಕ್ಕು ತೋಚುತ್ತಿಲ್ಲ. ಸದ್ಯ ಖಾಸಗಿ ಬ್ಯಾಂಕ್‌ನಲ್ಲಿ ಸಾಲ ಪಡೆದುಕೊಂಡಿದ್ದು ತಿಂಗಳಿಗೆ ಅಸಲು ಬಡ್ಡಿ ಕಟ್ಟುವ ಪರಿಸ್ಥಿತಿ ಎದುರಾಗಿದೆ ಎಂದು ಅಳಲು ತೊಡಿಕೊಂಡರು.

ಇನ್ನೋರ್ವ ಸಂತ್ರಸ್ತೆ ಸುನೀತಾ ಮೋಳಕೇರಾ ಮಾತನಾಡಿ, ಮಗಳ ಮದುವೆಗಾಗಿ ಹಣ ಸಂಗ್ರಹಿಸಿ ಪಿಕೆಪಿಎಸ್‌ನಲ್ಲಿ ಠೇವಣಿ ಇಟ್ಟಿದ್ದೇನೆ. ಈ ಹಿಂದೆ 10 ಸಾವಿರ ಸಾಲ ಪಡೆದರೆ ಮನೆಯ ಛಾವಣಿಯ ತಗಡನ್ನು ಎಳೆದುಕೊಂಡು ಹೋಗಲು ಬಂದಿರುವ ಆಡಳಿತ ಮಂಡಳಿ. ಇದೀಗ ನನ್ನ ಮಗಳ ಮದುವೆ ಕನಸ್ಸು ಭಗ್ನಗೊಳ್ಳುತ್ತಿದೆ ಇದಕ್ಕೆ ಯಾರು ಹೊಣೆ ಎಂದು ತಮ್ಮ ಅಳಲು ತೊಡಿಕೊಂಡಿದ್ದಾರೆ. ರೇವಣಸಿದ್ದಪ್ಪ ರಾಜೇಶ್ವರ ಮಾತನಾಡಿ, ಕೇಳಿದಾಗ ಒಂದೇ ಬಾರಿಗೆ ಹಣ ನೀಡುವ ಭರವಸೆ ನೀಡಿದ್ದ ಆಡಳಿತ ಮಂಡಳಿ ಹಾಗೂ ವ್ಯವಸ್ಥಾಪಕರು ಇದೀಗ ನಮ್ಮ ಮುಂದೆ ಬರುತ್ತಿಲ್ಲ ಎಂದರು.

ರಂಗಮ್ಮ ಧುಮ್ಮನಸೂರ ಜಮೀನು ಮಾರಾಟ ಮಾಡಿ ಪಿಕೆಪಿಎಸ್‌ನಲ್ಲಿ ಹಣವನ್ನು ಠೇವಣಿ ಇಡಲಾಗಿದೆ. ಇದೀಗ ಅನ್ನಕ್ಕೂ ಗತಿ ಇಲ್ಲದಂತಾಗಿದೆ ಎಂದು ಆಡಳಿತ ಮಂಡಳಿಗೆ ಹಾಗೂ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಇದೇ ಸಂದರ್ಭದಲ್ಲಿ ಹಿಡಿ ಶಾಪ ಹಾಕಿದರು.

ಬೀದರ್‌ ಜಿಲ್ಲೆಯ ಹುಮನಾಬಾದ್‌ ಪಿಕೆಪಿಎಸ್‌ನಲ್ಲಿ ಠೇವಣಿ ಹಣ ಕುರಿತಾಗಿನ ಅಕ್ರಮದ ತನಿಖೆಯನ್ನು ಸಹಕಾರ ಕಾಯ್ದೆಯಡಿ ಕಲಂ 64ರ ಅಡಿಯಲ್ಲಿ 2012ನೇ ಸಾಲಿನಿಂದ ನಡೆಸಲಾಗಿದ್ದು ನಾಲ್ಕು ಅವಧಿಗಳ ಕಾಲದ ಕಾರ್ಯವನ್ನು ತನಿಖೆಗೆ ಒಳಪಡಿಸಿ ಆಗಿನ ಕಾಲದ ಪಿಕೆಪಿಎಸ್‌ ಕಾರ್ಯದರ್ಶಿ, ಅಧ್ಯಕ್ಷರು ಹಾಗೂ ಮತ್ತಿತರ ಪದಾಧಿಕಾರಿ ಸದಸ್ಯರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

ಮಂಜುಳಾ, ಸಹಕಾರ ಸಂಘಗಳ ಉಪನಿಬಂಧಕರು, ಸಹಕಾರ ಇಲಾಖೆ, ಬೀದರ್

Share this article