ಮಕ್ಕಳ ಪೌಷ್ಟಿಕತೆ ವೃದ್ಧಿಗೆ ಹೆಚ್ಚು ಒತ್ತು: ಸಚಿವ ಮಧು ಬಂಗಾರಪ್ಪ

KannadaprabhaNewsNetwork |  
Published : Sep 26, 2024, 09:54 AM IST
ಅಕ್ಷರ ದಾಸೋಹ- ಮಧ್ಯಾಹ್ನ ಉಪಹಾರ ಯೋಜನೆಯಡಿ, ಅಜೀಂ ಪ್ರೇಂಜೀ ಫೌಂಡೇಷನ್ ಸಹಭಾಗಿತ್ವದಲ್ಲಿ  ಶಾಲಾ ಮಕ್ಕಳ ಪೌಷ್ಟಿಕತೆ ವೃದ್ಧಿಸಲು, ಯಾದಗಿರಿ ತಾಲೂಕಿನ ಅರಿಕೇರಾ (ಕೆ) ಸರ್ಕಾರಿ ಪ್ರೌಢಶಾಲೆಯಲ್ಲಿ 2024- 25 ನೇ ಸಾಲಿನಲ್ಲಿ ರಾಜ್ಯದ ಎಲ್ಲ ಸರ್ಕಾರಿ ಪೂರ್ವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ 6 ದಿನಗಳು ಪೂರಕ ಪೌಷ್ಟಿಕ ಆಹಾರವನ್ನು ವಿತರಿಸುವ ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು. ಕಾರ್ಯಕ್ರಮಕ್ಕೂ ಮುಂಚೆ ಸಚಿವರು, ಶಾಸಕರು ಮಕ್ಕಳೊಂದಿಗೆ ಮಧ್ಯಾಹ್ನದ ಊಟ ಸವಿದರು. | Kannada Prabha

ಸಾರಾಂಶ

ಕಲ್ಯಾಣ ಭಾಗದಲ್ಲಿ 5 ಸಾವಿರ ಶಿಕ್ಷಕರ ನೇಮಕ ಪ್ರಯತ್ನ ಮಾಡಲಾಗುವುದು. ಇಡೀ ರಾಜ್ಯದಲ್ಲಿ ಯಾದಗಿರಿ ಜಿಲ್ಲೆ ಶಿಕ್ಷಣದಲ್ಲಿ ಮೊದಲ ಸ್ಥಾನ ಬರುತ್ತದೆ ಎಂದು ನಾನು ಭರವಸೆಯ ಗ್ಯಾರಂಟಿ ಕೊಡುತ್ತೇನೆ ಎಂದು ಅರಕೇರಾ(ಕೆ) ಶಾಲೆಯಲ್ಲಿ 6 ದಿನ ಮೊಟ್ಟೆ ನೀಡುವ ಕಾರ್ಯಕ್ರಮದಲ್ಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಮಕ್ಕಳ ಪೌಷ್ಟಿಕತೆಗೆ ಹೆಚ್ಚು ಒತ್ತು ಕೊಡುತ್ತಿದ್ದು, ಈ ಯೋಜನೆಗೆ ಸರ್ಕಾರವು 3 ವರ್ಷಕ್ಕೆ 1591 ಕೋಟಿ ರು.ಗಳನ್ನು ಖರ್ಚು ಮಾಡುತ್ತಿದ್ದು ಇತಿಹಾಸವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ರಾಜ್ಯದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ ನೀಡುತ್ತಿರುವ ಜೊತೆಗೆ, ಅಜೀಂ ಪ್ರೇಂಜಿ ಫೌಂಡೇಶನ್‌ನಿಂದ ಇನ್ನೂ ನಾಲ್ಕು ದಿನಗಳು ಸೇರಿ, ಒಟ್ಟು 6 ದಿನಗಳು ಮೊಟ್ಟೆ ನೀಡುವ ಕಾರ್ಯಕ್ರಮಕ್ಕೆ ಬುಧವಾರ ಯಾದಗಿರಿಗೆ ಸಮೀಪದ ಅರಕೇರಾ (ಕೆ) ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಚಿವ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿ ಮಾತನಾಡಿದರು.

ಇಲಾಖೆ ವ್ಯಾಪ್ತಿಯ ಒಟ್ಟು 76 ಸಾವಿರ ಶಾಲೆಗಳಲ್ಲಿನ, ಒಟ್ಟು 60 ಲಕ್ಷ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಂದಿನಿಂದ ವಾರದಲ್ಲಿ 6 ದಿನಗಳ ಮೊಟ್ಟೆ ವಿತರಿಸಲು ಚಾಲನೆ ನೀಡಲಾಗಿದೆ. ರಾಜ್ಯದ 57 ಲಕ್ಷ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯುತ್ತಿದ್ದು, ಅಜೀಂ ಪ್ರೇಂಜೀ ಫೌಂಡೇಶನ್ ಇದಕ್ಕೆ ಕೈಜೋಡಿಸಿದ್ದಾರೆ, ಮಕ್ಕಳಿಗೆ ಊಟ ಕೊಟ್ಟರೆ ದೇವರಿಗೆ ನೈವೇದ್ಯ ಇಟ್ಟಂತೆ ಎಂದು ಅವರು ಹೇಳಿದರು.

ಸರ್ಕಾರವು ಬಡವರ ಪರವಾಗಿ ಕಾರ್ಯಕ್ರಮಗಳನ್ನು ಕೊಡುತ್ತಿದೆ, ಸರ್ಕಾರ ಬಂದ ಮೇಲೆ ಗ್ಯಾರಂಟಿ ಕೊಡುತ್ತಿರುವುದು ನಮ್ಮ ಹೆಮ್ಮೆ ಎಂದ ಸಚಿವರು, ಬಡವರ ಹೊಟ್ಟೆ ತುಂಬಿಸುವ ಕಾರ್ಯ ಅನ್ನಭಾಗ್ಯ ಯೋಜನೆಯಾಗಿದೆ ಎಂದು ಶ್ಲಾಘಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪುರ ಮಾತನಾಡಿ, ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದೆ. ದೇಶದ ಭವಿಷ್ಯದ ಮಕ್ಕಳ ಕೈಯಲ್ಲಿದೆ. ಎಲ್ಲ ಮಕ್ಕಳನ್ನು ಶಾಲೆಗೆ ಬರುವಂತೆ ಮಕ್ಕಳಿಗೂ, ಪೋಷಕರಿಗೆ ಮನವೊಲಿಸಬೇಕು ಎಂದರು.

ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ ಮಾತನಾಡಿ, ತಂದೆ-ತಾಯಿ ಮಾಡದ ಕೆಲಸ ಸರ್ಕಾರ ಮಾಡುತ್ತಿದೆ. ಶಾಲಾ ಮಕ್ಕಳ ಪೌಷ್ಟಿಕತೆ ಹೆಚ್ಚಿಸುವ ನಿಟ್ಟಿನಲ್ಲಿ ವಾರದಲ್ಲಿ 6 ದಿನ ಪೂರಕ ಪೌಷ್ಟಿಕ ಆಹಾರವನ್ನು ಒದಗಿಸುವ ಈ ಕಾರ್ಯ ಶ್ಲಾಘನೀಯ ಎಂದರು. ಕಾರ್ಯಕ್ರಮಕ್ಕೂ ಮುಂಚೆ ಸಚಿವರು, ಶಾಸಕರು ಮಕ್ಕಳೊಂದಿಗೆ ಮಧ್ಯಾಹ್ನದ ಊಟ ಸವಿದರು.

ಕಲ್ಯಾಣ ಕರ್ನಾಟಕದಲ್ಲಿ 5 ಸಾವಿರ ಶಿಕ್ಷಕರ ನೇಮಕ: 5 ಸಾವಿರ ಶಿಕ್ಷಕರ ನೇಮಕವನ್ನು ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೊಡಲು ಪ್ರಯತ್ನಿಸಲಾಗುತ್ತಿದೆ. ಇಡೀ ರಾಜ್ಯದಲ್ಲಿ ಯಾದಗಿರಿ ಜಿಲ್ಲೆ ಶಿಕ್ಷಣದಲ್ಲಿ ಮೊದಲ ಸ್ಥಾನ ಬರುತ್ತದೆ ಎಂದು ನಾನು ಭರವಸೆಯ ಗ್ಯಾರಂಟಿ ಕೊಡುತ್ತೇನೆ ಎಂದರು.5 ಸಾವಿರ ಶಿಕ್ಷಕರ ನೇಮಕವನ್ನು, ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೊಡಲು ಪ್ರಯತ್ನಿಸಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಅವರು ಘೋಷಿಸಿದರು.ಶಾಸಕ ಶರಣಗೌಡ ಕಂದಕೂರ, ಎಂಎಲ್ಸಿ ಶಶಿಲ್ ಜಿ. ನಮೋಶಿ, ಅಜೀಂ ಪ್ರೇಮ್ ಜಿ ಫೌಂಡೇಶನ್ ಮುಖ್ಯಸ್ಥ ರುದ್ರೇಶ ಎಸ್, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತೇಶ ಕುಮಾರ ಸಿಂಗ್, ಶಿಕ್ಷಣ ಇಲಾಖೆ ಆಯುಕ್ತೆ ಬಿ.ಬಿ. ಕಾವೇರಿ, ಪಿಎಂ ಪೋಷಣ್ ನಿರ್ದೇಶಕ ಸಿಂಧೂ ಬಿ. ರೂಪೇಶ್, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ ಎಸ್, ಜಿಪಂ ಸಿಇಒ ಲವೀಶ್ ಒರಡಿಯಾ, ಡಿಡಿಪಿಐ ಮಂಜುನಾಥ, ಅಕ್ಷರ ದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ಕನಕಪ್ಪ, ಗ್ರಾಪಂ ಅಧ್ಯಕ್ಷೆ ಶಾರದಮ್ಮ, ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸಿದ್ದಲಿಂಗಯ್ಯ ಸ್ವಾಮಿ, ಪ್ರಾಥಮಿಕ ಶಾಲೆಯ ಅಧ್ಯಕ್ಷ ಸಿದ್ರಾಮ್ ಬೀರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PREV

Recommended Stories

ಮುಸುಕುಧಾರಿ ಯಾರು ? ಸ್ನೇಹಿತನಿಂದ ವಿವರ ಸಂಗ್ರಹಿಸಿದ ಎಸ್‌ಐಟಿ
ಅನನ್ಯಾ ಭಟ್‌ ನಾಪತ್ತೆ ಆಗಿದ್ದಾಳೆಂಬ ಪ್ರಕರಣಕ್ಕೆ ಬಹುದೊಡ್ಡ ತಿರುವು ..!