ನವಲಗುಂದ:
ವೈಶಿಷ್ಟ್ಯ ಪೂರ್ಣವಾಗಿ ಹೋಳಿ ಹುಣ್ಣಿಮೆ ಆಚರಿಸುವ ನವಲಗುಂದ ಪಟ್ಟಣದಲ್ಲಿ ಶ್ರೀರಾಮಲಿಂಗ ಕಾಮಣ್ಣ ದೇವರ ಪ್ರತಿಷ್ಠಾಪನೆ ಶನಿವಾರ ನೆರವೇರಿದ್ದು, ದರ್ಶನಕ್ಕೆ ಭಕ್ತರು ತಂಡೋಪ ತಂಡವಾಗಿ ಬರುತ್ತಿದ್ದಾರೆ.ಪಟ್ಟಣದ ಶ್ರೀರಾಮಲಿಂಗ ಕಾಮಣ್ಣ ಸೇರಿ 14 ಕಡೆಗಳಲ್ಲಿ ವಿವಿಧ ಕಾಮಣ್ಣನ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಪಟ್ಟಣದಲ್ಲಿರುವ ಭೋವಿ ಓಣಿಯ ಕಾಮಣ್ಣ ವಿಶೇಷತೆ ಎಂದರೆ ರಾಜ್ಯದಲ್ಲಿ ಕಾಮಣ್ಣ ಪ್ರತಿಷ್ಠಾಪನೆಗೆ ಎಲ್ಲಿಯೂ ದೇವಸ್ಥಾನವಿಲ್ಲ. ಆದರೆ, ಈ ಭೋವಿ ಓಣಿಯಲ್ಲಿ ಮಾತ್ರ ಕಾಮಣ್ಣ ದೇವಸ್ಥಾನ ಇದೆ. ರಾಮಲಿಂಗೇಶ್ವರ ಕಾಮಣ್ಣನ ಜೊತೆ ಈ ಓಣಿ ಕಾಮಣ್ಣನ ಪ್ರತಿಷ್ಠಾಪಿಸಲಾಗುತ್ತದೆ. ಜನಸಾಮಾನ್ಯರು ಹಾಗೂ ಸಾರ್ವಜನಿಕರು ಎರಡು ಕಾಮಣ್ಣವನ್ನು ಅಣ್ಣ- ತಮ್ಮಂದಿರು ಎಂದೇ ಕರೆಯುತ್ತಾರೆ.
ಈ ದೇವಸ್ಥಾನಕ್ಕೆ ಭಕ್ತರೇ ಪೂಜಾರಿಗಳಾಗಿದ್ದು ಹರಕೆ ಹೊತ್ತು ಬೇಡಿಕೊಂಡರೆ ಇಷ್ಟಾರ್ಥಗಳು ಕಾಮದೇವ ಈಡೇರಿಸುತ್ತಾನೆ. ಈ ಕಾಮಣ್ಣನೂ ಭಾವೈಕ್ಯದ ಸಂಕೇತವಾಗಿದ್ದು ಇಡೀ ಗ್ರಾಮವೇ ಜಾತಿ, ಭೇಧ, ಮತ-ಪಂಥ ಎನ್ನದೆ ಎಲ್ಲರೂ ಒಗ್ಗಟಾಗಿ ಹಬ್ಬ ಆಚರಿಸುತ್ತಾರೆ.ತಂಡೋಪ ತಂಡ:ಕಾಮಣ್ಣನ್ನು ಶನಿವಾರ ಪ್ರತಿಷ್ಠಾಪಿಸಿದ್ದು ಮೊದಲೇ ದಿನವೇ ದರ್ಶನ ಪಡೆದಲು ರಾಜ್ಯ, ಹೊರರಾಜ್ಯಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಸರತಿ ಸಾಲಿನಲ್ಲಿ ನಿಂತು ಕಾಮಣ್ಣನ ದರ್ಶನ ಪಡೆದು ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಂಡರು. ಕೆಲವರು ಬೇಡಿಕೆ ಈಡೇರಿದ ಹಿನ್ನೆಲೆ ತಮ್ಮ ಹರಿಕೆ ತೀರಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಭಾನುವಾರ ರಜಾ ದಿನವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನಲೆ ದೇವಸ್ಥಾನದ ಕಮಿಟಿ ಸಕಲ ಸಿದ್ಧತೆ ಮಾಡಿಕೊಂಡಿದೆ.
ಯುಗಾದಿಗೆ ಮರುಜನ್ಮ:
ಯುಗಾದಿಯಂದು ಕಾಮದೇವರು ಮರುಜನ್ಮ ಪಡೆಯುತ್ತಾನೆ. ಅದರ ಪ್ರತೀಕವಾಗಿ ಪಾಡ್ಯದ ಒಂದು ದಿನ ಮತ್ತೆ ಕಾಮದೇವರ ಪ್ರತಿಷ್ಠಾಪನೆಯಾಗುತ್ತದೆ. ಭಕ್ತರಿಗೆ ಅಂದು ದರ್ಶನಕ್ಕೆ ಮುಕ್ತ ಅವಕಾಶವಿರುತ್ತದೆ. ಹುಣ್ಣಿಮೆಯ ಉತ್ಸವದಲ್ಲಿ ಬರದೇ ಇರುವ ಭಕ್ತರು ಯುಗಾದಿ ಪಾಡ್ಯದಂದು ಬಂದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹಾಗೂ ಹರಕೆ ಅರ್ಪಿಸುತ್ತಾರೆ.ಭೋವಿ ಕಾಮಣ್ಣನ ದರ್ಶನಕ್ಕೂ ರಾಜ್ಯವಲ್ಲದೇ ಅನ್ಯ ರಾಜ್ಯದ ಭಕ್ತರು ಆಗಮಿಸುತ್ತಾರೆ. ತಮ್ಮ ಹರಕೆ ಹೊತ್ತು ಬೆಳ್ಳಿ ವಸ್ತು ತೆಗೆದುಕೊಂಡು ಹೋಗಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ಸಲ್ಲಿಸುತ್ತಾರೆ.
ಆನಂದ ಹವಳಕೋಡ, ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ನವಲಗುಂದನವಲಗುಂದ ಕೇವಲ ಹೋಳಿ ಹುಣ್ಣಿಮೆಯ ಬಣ್ಣದಾಟಕ್ಕೆ ಅಷ್ಟೇ ಸೀಮಿತವಾಗಿಲ್ಲ. ಭಯ ಭಕ್ತಿಗೆ ಒಲಿವ, ಬೇಡಿದ್ದನ್ನು ದಯಪಾಲಿಸುವ ಮಹಿಮಾನ್ವಿತ ದೈವ. ಭಕ್ತಿಯಿಂದ ಭಜಿಸುವವರಿಗೆ ಕಲ್ಪವೃಕ್ಷನಾಗಿದ್ದಾನೆ ಕಾಮದೇವರು.ನಾಗಪ್ಪ ಭೋವಿ, ಅಧ್ಯಕ್ಷರು, ತಾಲೂಕು ಭೋವಿ ಸಮಾಜದ ನವಲಗುಂದ