ಸಮಸ್ಯಾತ್ಮಕ ಗ್ರಾಮಗಳಿಗೆ ಭೇಟಿ ನೀಡದ ಜಿಲ್ಲಾಧಿಕಾರಿ

KannadaprabhaNewsNetwork |  
Published : Sep 23, 2026, 01:45 AM IST
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ತರಬೇನಹಳ್ಳಿ ಭೋವಿಕಾಲೋನಿಗೆ ಬೇಟಿ ನೀಡಿ ಕುಡಿಯುವ ನೀರಿನ ಬೋರ್‌ವೆಲ್ ಹಾಗೂ ಇತರೆ ಸಮಸ್ಯೆಗಳ ಬಗ್ಗೆಎ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ತಾಲೂಕಿನಲ್ಲಿ ತೀವ್ರ ಬರದಿಂದಾಗಿ ಅಂತರ್ಜಲ ಕುಸಿದು ಕುಡಿಯುವ ನೀರಿಗೆ ತೊಂದರೆ ಅನುಭವಿಸುತ್ತಿರುವ ಗ್ರಾಮಗಳಿಗೆ ಭೇಟಿ ನೀಡದೇ, ಬಂದ ಪುಟ್ಟ ಹೋದ ಪುಟ್ಟ ಎನ್ನುವ ರೀತಿಯಲ್ಲಿ ಬರ ಹಾಗೂ ಕುಡಿಯುವ ನೀರಿನ ನಿರ್ವಹಣೆಯನ್ನು ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ತಾಲೂಕಿನಲ್ಲಿ ತೀವ್ರ ಬರದಿಂದಾಗಿ ಅಂತರ್ಜಲ ಕುಸಿದು ಕುಡಿಯುವ ನೀರಿಗೆ ತೊಂದರೆ ಅನುಭವಿಸುತ್ತಿರುವ ಗ್ರಾಮಗಳಿಗೆ ಭೇಟಿ ನೀಡದೇ, ಬಂದ ಪುಟ್ಟ ಹೋದ ಪುಟ್ಟ ಎನ್ನುವ ರೀತಿಯಲ್ಲಿ ಬರ ಹಾಗೂ ಕುಡಿಯುವ ನೀರಿನ ನಿರ್ವಹಣೆಯನ್ನು ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ತಾಲೂಕಿಗೆ ಮಂಗಳವಾರ ಜಿಲ್ಲಾಧಿಕಾರಿಗಳು ಬರ ಹಾಗೂ ಕುಡಿಯುವ ನೀರಿನ ಬಗ್ಗೆ ತೆಗೆದುಕೊಂಡಿರುವ ಕ್ರಮಗಳನ್ನು ಪರಿಶೀಲಿಸಲು ಭೇಟಿ ನೀಡುವುದಾಗಿ ಪ್ರವಾಸದ ಪಟ್ಟಿಯನ್ನು ನೀಡಲಾಗಿತ್ತು. ಅದರಲ್ಲಿ ಕೇವಲ ಶೆಟ್ಟಿಕೆರೆ ಹೋಬಳಿಯ ತರಬೇನಹಳ್ಳಿ ಭೋವಿ ಕಾಲೋನಿಗೆ, ಕಸಬಾ ಹೋಬಳಿಯ ಹೊಸಹಳ್ಳಿ, ಬಲ್ಲೆನಹಳ್ಳಿಗಳಿಗೆ ಭೇಟಿ ನೀಡಿ ಪಂಪ್‌ ಮೋಟಾರ್ ಪೈಪ್‌ಲೈನ್ ಕಾಮಗಾರಿಯನ್ನು, ಆಶ್ರಯ ಯೋಜನೆಗೆ ಗುರುತಿಸಿರುವ ಜಾಗವನ್ನು ಹಾಗೂ ಶ್ಮಶಾನ ಜಾಗಗಳನ್ನು ಪರಿಶೀಲಿಸಿದರು. ಆದರೆ, ತೀವ್ರ ಬರವನ್ನು ಅನುಭವಿಸುತ್ತಾ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಹುಳಿಯಾರು ಹೋಬಳಿಯ ತಿಮ್ಮಪ್ಪನಹಟ್ಟಿ, ನುಲೇನೂರು, ಕರಡಿಸಾಬರಪಾಳ್ಯ, ಬಾಲದೇವರಹಟ್ಟಿ, ಬರಕನಾಳ್, ಕಂದಿಕೆರೆ ಹೋಬಳಿಯ ಕಾತ್ರಿಕೆಹಾಳ್, ಜಾಣೇಹಾರ್ ಗ್ರಾಮಗಳಿಗೆ ಭೇಟಿ ನೀಡದಿರುವುದು ಗ್ರಾಮಸ್ಥರ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲೆಯ ಹತ್ತು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಪ್ರಕೃತಿ ವಿಕೋಪದಡಿ ಈಗಾಗಲೇ 10 ಕೋಟಿ ರು.ಗಳನ್ನು ಜಿಲ್ಲೆಗೆ ನೀಡಲಾಗಿದೆ. ಅದರಂತೆ ಅಗತ್ಯವಾಗಿ ಕುಡಿಯುವ ನೀರಿಗಾಗಿ ಬೋರ್‌ವೆಲ್ ಕೊರೆಸುವುದು, ಪೈಪ್‌ಲೈನ್ ಸೇರಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇನ್ನು ಮುಂದಿನ 10 ವಾರಗಳಿಗೆ ಮೇವು ಇರುವುದಾಗಿ ಪಶು ಇಲಾಖೆಯವರು ತಿಳಿಸಿದ್ದು, ಅದರಂತೆ ರೈತೇತರೇ ಮೇವು ಬೆಳೆದುಕೊಳ್ಳಲು ಹಾಲು ಉತ್ಪಾದಕ ಮಂಡಳಿಯ ಕಡೆಯಿಂದ ಮೇವಿನ ಬೀಜದ ಕಿಟ್‌ಗಳನ್ನು ನೀಡಲಾಗಿದೆ. ಮುಂದಿನ ಡಿಸೆಂಬರ್ ವೇಳೆಗೆ ಆಶ್ರಯ ಯೋಜನೆಯಡಿ ನಿವೇಶನಗಳನ್ನು ನೀಡಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, 14 ಸಾವಿರ ಎಕರೆ ಭೂಮಿಯನ್ನು ಗುರುತಿಸಿ ನಿವೇಶನ ಮಾಡಲು ನೀಡಲಾಗಿದೆ, 26 ಸಾವಿರ ಜನರಿಗೆ ನಿವೇಶನ ನೀಡಲಾಗುವುದು ಎಂದರು.

ತಾಲೂಕು ನೀರಾವರಿ ಹೋರಾಟ ಸಮಿತಿಯ ಉಪಾಧ್ಯಕ್ಷ ಹಾಗೂ ಆಟೋಚಾಲಕರ ಸಂಘದ ಅಧ್ಯಕ್ಷ ಸಿ.ಎನ್. ಮಂಜುನಾಥ್ ಮಾತನಾಡಿ, ತಾಲೂಕಿನ ಜನತೆ ಮೇಲಾಧಿಕಾರಿಗಳು ಬಂದರೆ ನಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಎಂಬ ನಂಬಿಕೆಯಿಂದ ಇರುತ್ತಾರೆ. ಆದರೆ, ಈ ರೀತಿಯಲ್ಲಿ ಬೇಕಾಬಿಟ್ಟಿ ಕೇವಲ ದಾಖಲೆಗಾಗಿ ಭೇಟಿ ನೀಡಿ ಹೋಗುವುದು ಎಷ್ಟು ಸರಿ? ತೀವ್ರ ಕುಡಿಯುವ ನೀರಿನ ತೊಂದರೆಯಾಗಿರುವ ಹುಳಿಯಾರು ಹೋಬಳಿ, ಕಂದಿಕೆರೆ ಹೋಬಳಿಗೆ ಭೇಟಿ ನೀಡಬೇಕಿತ್ತು ಹಾಗೂ ಈಗಾಗಲೇ ನಮ್ಮ ಭಾಗಕ್ಕೆ ಹರಿಯುತ್ತಿರುವ ಹೇಮಾವತಿ ನೀರಿನ ಬಗ್ಗೆ ಪರಿಶೀಲನೆ ನಡೆಸಬೇಕಿತ್ತು. ಸರ್ಕಾರವೇ ನೀರನ್ನು ಅಕ್ರಮವಾಗಿ ಬಳಸುವಂತಿಲ್ಲ ಎಂದು ಸ್ವತಃ ಜಿಲ್ಲಾಧಿಕಾರಿಗಳೇ ಆದೇಶ ಮಾಡಿದ್ದರು. ಹೇಮಾವತಿ ನೀರನ್ನು ಅಕ್ರಮವಾಗಿ ಬಳಸುತ್ತಿರುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಿಪಟೂರು ಉಪವಿಭಾಗದ ವಿಭಾಗಾಧಿಕಾರಿ ಸಪ್ತಶ್ರೀ, ತಹಶೀಲ್ದಾರ್ ಮಮತಾ ಎಂ. ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆ ಆದಷ್ಟು ಬೇಗ ಪೂರ್ಣಗೊಳಿಸಿ
ಪಡಿತರ ಪದಾರ್ಥ ಪಡೆಯಲು ದೂರದ ಊರಿಗೆ ಹೋಗಬೇಕಿಲ್ಲ: ಸಚ್ಚಿನ್ ಚಲುವರಾಯಸ್ವಾಮಿ