ರಾಜ್ಯಮಟ್ಟದ ಜುಡೋ ಪಂದ್ಯಾವಳಿಗೆ ಜಿಲ್ಲಾಧಿಕಾರಿ ಚಾಲನೆ

KannadaprabhaNewsNetwork |  
Published : Oct 10, 2026, 02:45 AM IST
ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಜೂಡೋ ಪಂದ್ಯಾವಳಿ | Kannada Prabha

ಸಾರಾಂಶ

ಬಾಗಲಕೋಟೆ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಜುಡೋ ಪಂದ್ಯಾವಳಿಗೆ ಜಿಲ್ಲಾಧಿಕಾರಿ ಸಂಗಪ್ಪ ಶುಕ್ರವಾರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಜುಡೋ ಪಂದ್ಯಾವಳಿಗೆ ಜಿಲ್ಲಾಧಿಕಾರಿ ಸಂಗಪ್ಪ ಶುಕ್ರವಾರ ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಪ್ರಸಕ್ತ ಸಾಲಿನ 14/17 ವಯೋಮಿತಿಯೊಳಗಿನ ರಾಜ್ಯ ಮಟ್ಟದ ಜುಡೋ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡಾಕೂಟಗಳಲ್ಲಿ ಭಾಗವಹಿಸುವುದು ಮುಖ್ಯವಾಗಿದ್ದು, ಸೋಲು-ಗೆಲುವು ನಂತರದ ವಿಚಾರವಾಗಿದೆ. ಕ್ರೀಡಾಪಟುಗಳು ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸುವುದರ ಜತೆಗೆ ಅನುಭವ ಪಡೆದುಕೊಳ್ಳಬೇಕೆಂದರು.

ಗೆಲುವೊಂದೇ ಕ್ರೀಡೆಯ ಅಂತಿಮ ಗುರಿಯಾಗಬಾರದು. ಸ್ಪರ್ಧೆಗಳಲ್ಲಿ ಭಾಗವಹಿಸುವುದು, ತಮ್ಮ ಸಾಮರ್ಥ್ಯ ಗುರುತಿಸಿಕೊಳ್ಳುವುದು ಹಾಗೂ ನಿರಂತರ ಅಭ್ಯಾಸದ ಮೂಲಕ ಕೌಶಲ್ಯ ವೃದ್ಧಿಸಿಕೊಳ್ಳುವುದು ಮುಖ್ಯ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಮುಂದಿನ ಹಂತಕ್ಕೆ ಆಯ್ಕೆಯಾಗಬೇಕು. ರಾಷ್ಟ್ರಮಟ್ಟದ ಪಂದ್ಯಾವಳಿಗಳಲ್ಲೂ ಅತ್ಯುತ್ತಮ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತರಬೇಕು ಎಂದು ಹಾರೈಸಿದರು.

ಕ್ರೀಡೆ ದೈಹಿಕ ಸಾಮರ್ಥ್ಯ ಹೆಚ್ಚಿಸುವುದರ ಜತೆಗೆ ಶಿಸ್ತು, ಸಮಯಪ್ರಜ್ಞೆ, ಆತ್ಮವಿಶ್ವಾಸ ಹಾಗೂ ಸೋಲನ್ನು ಸ್ವೀಕರಿಸಿ ಮತ್ತೆ ಪ್ರಯತ್ನಿಸುವ ಮನೋಭಾವ ಬೆಳೆಸುತ್ತದೆ. ಹೀಗಾಗಿ ಕ್ರೀಡಾಪಟುಗಳು ಪಂದ್ಯಾವಳಿಯನ್ನು ಕೇವಲ ಸ್ಪರ್ಧೆಯಾಗಿ ಪರಿಗಣಿಸದೆ, ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯ ಸಾಬೀತುಪಡಿಸುವ ಅವಕಾಶವಾಗಿ ಬಳಸಿಕೊಳ್ಳಲು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ ಮಾತನಾಡಿ, ಸ್ಪರ್ಧಾಳುಗಳು ಕ್ರೀಡಾ ಮನೋಭಾವದಿಂದ ಪಂದ್ಯಾವಳಿಯಲ್ಲಿ ಭಾಗವಹಿಸಬೇಕು. ಗೆಲುವಿನ ಜತೆಗೆ ಎದುರಾಳಿಗಳನ್ನು ಗೌರವಿಸುವುದು ಹಾಗೂ ಕ್ರೀಡಾ ನಿಯಮಗಳನ್ನು ಪಾಲಿಸುವುದು ಮುಖ್ಯ ಎಂದು ಹೇಳಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಸಿ.ಸೀತಾರಾಮು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಮಟ್ಟದ ಜೂಡೋ ಪಂದ್ಯಾವಳಿ ಬಾಗಲಕೋಟೆ ಜಿಲ್ಲೆಯಲ್ಲಿ ನಡೆಸಲಾಗುತ್ತಿದ್ದು, ರಾಜ್ಯದ 28 ಜಿಲ್ಲೆಯ ಒಟ್ಟು 700 ಕ್ರೀಡಾಪಟುಗಳು ಭಾಗವಹಿಸಲು ಆಗಮಿಸಿದ್ದಾರೆ. 350 ಬಾಲಕರು ಹಾಗೂ 350 ಬಾಲಕಿಯರು ಪಾಲ್ಗೊಂಡಿದ್ದು, ಪ್ರಾಥಮಿಕ ವಿಭಾಗದಲ್ಲಿ 7 ಜನ ಬಾಲಕ, 7 ಜನ ಬಾಲಕಿ ಸೇರಿ ಒಟ್ಟು 14 ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಪ್ರೌಢಶಾಲಾ ವಿಭಾಗದಲ್ಲಿ 9 ಜನ ಬಾಲಕಿಯರು, 10 ಜನ ಬಾಲಕರು ಆಯ್ಕೆಯಾಗಿ ಇದೇ ತಿಂಗಳು ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಜೂಡೋ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಲ್.ಕೆ.ತೋರಣಗಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಕ ಆರ್.ಆರ್.ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳೆ ಮೈಸೂರು ಭಾಗಕ್ಕೆ ನಾಲ್ವಡಿ ಹೆಸರಿಡಿ
ಎಸ್ಐಆರ್ ರದ್ದುಪಡಿಸಲು, ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ