ದೇರಳಕಟ್ಟೆ: ಮುತ್ತೂಟ್ ಫೈನಾನ್ಸ್ ದರೋಡೆ ಯತ್ನ!

KannadaprabhaNewsNetwork |  
Published : Apr 01, 2025, 12:47 AM IST
ದೇರಳಕಟ್ಟೆ ಮುತ್ತೂಟ್ ಫೈನಾನ್ಸ್ | Kannada Prabha

ಸಾರಾಂಶ

ದೇರಳಕಟ್ಟೆ ಜಂಕ್ಷನ್‌ನ ಮುತ್ತೂಟ್ ಫೈನಾನ್ಸ್ ದರೋಡೆಗೆ ಯತ್ನಿಸಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಅದೃಷ್ಟವಶಾತ್ ಖದೀಮರು ಬೀಗ ಒಡೆಯುತ್ತಿರುವಾಗಲೇ ಫೈನಾನ್ಸ್ ಮಳಿಗೆಯ ಸೈರನ್ ಮೊಳಗಿದ್ದು, ಸ್ಥಳಕ್ಕೆ ಧಾವಿಸಿದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.

ಉತ್ಕೃಷ್ಟ ಗುಣಮಟ್ಟದ ರಕ್ಷಣಾ ಸಲಕರಣೆಯಿಂದ ತಪ್ಪಿದ ದರೋಡೆ । ಇಬ್ಬರು ವಶಕ್ಕೆ, ಓರ್ವ ಪರಾರಿ

ಕನ್ನಡಪ್ರಭ ವಾರ್ತೆ ಉಳ್ಳಾಲದೇರಳಕಟ್ಟೆ ಜಂಕ್ಷನ್‌ನ ಮುತ್ತೂಟ್ ಫೈನಾನ್ಸ್ ದರೋಡೆಗೆ ಯತ್ನಿಸಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಅದೃಷ್ಟವಶಾತ್ ಖದೀಮರು ಬೀಗ ಒಡೆಯುತ್ತಿರುವಾಗಲೇ ಫೈನಾನ್ಸ್ ಮಳಿಗೆಯ ಸೈರನ್ ಮೊಳಗಿದ್ದು, ಸ್ಥಳಕ್ಕೆ ಧಾವಿಸಿದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.ಶನಿವಾರ ತಡರಾತ್ರಿ ಸುಮಾರು 1.30ಕ್ಕೆ ಘಟನೆ ನಡೆದಿದೆ. ದೇರಳಕಟ್ಟೆ ಜಂಕ್ಷನ್‌ನಲ್ಲಿರುವ ಎಚ್.ಎಂ. ಟಿಂಬರ್ಸ್ ಸಂಸ್ಥೆಗೆ ಸೇರಿದ ವಾಣಿಜ್ಯ ಕಟ್ಟಡದ ಮೇಲಂತಸ್ತಲ್ಲಿ ಕಾರ್ಯಾಚರಿಸುತ್ತಿರುವ ಮುತ್ತೂಟ್ ಫೈನಾನ್ಸ್‌ಗೆ ಕೇರಳ ಮೂಲದ ಮೂವರು ಖದೀಮರು ಕನ್ನ ಹಾಕಿದ್ದಾರೆ. ಇನ್ನೇನು ಖದೀಮರು ಕಳ್ಳತನ ನಡೆಸಲು ಮಳಿಗೆಯ ಬೀಗ ಒಡೆಯುತ್ತಿರುವಾಗಲೇ ಸೈರನ್ ಮೊಳಗಿದ್ದು, ಮುತ್ತೂಟ್ ಫೈನಾನ್ಸ್‌ನ ಕಂಟ್ರೋಲ್ ರೂಂಗೆ ತಂತ್ರಜ್ಞಾನದ ಮೂಲಕ ಮಾಹಿತಿ ರವಾನೆಯಾಗಿದೆ. ಫೈನಾನ್ಸ್‌ನ ಮೇಲಾಧಿಕಾರಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸೈರನ್ ಮೊಳಗುತ್ತಿದ್ದಾಗಲೇ ಫೈನಾನ್ಸ್ ಸುತ್ತ ಮುತ್ತಲೂ ಸ್ಥಳೀಯರು ಜಮಾಯಿಸಿದ್ದು, ಇಬ್ಬರು ಆರೋಪಿಗಳಾದ ಕಾಂಞಂಗಾಡ್‌ನ ಮುರಳಿ ಮತ್ತು ಕಾಸರಗೋಡಿನ ಹರ್ಷಾದ್ ಕಟ್ಟಡದಲ್ಲಿ ಲಾಕ್ ಆಗಿದ್ದು, ಸ್ಥಳಕ್ಕೆ ಧಾವಿಸಿದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳು ಮತ್ತು ಕೃತ್ಯ ಎಸಗಲು ತಂದಿದ್ದ ಡ್ರಿಲ್ ಮೆಷಿನ್ ವಶಕ್ಕೆ ಪಡೆದಿದ್ದಾರೆ.ಮತ್ತೋರ್ವ ಆರೋಪಿ ಕಾಸರಗೋಡು ಮೂಲದ ಅಬ್ದುಲ್ ಲತೀಫ್ ಪರಾರಿಯಾಗಿದ್ದಾನೆ.ಮುರಳಿ ಮತ್ತು ಅಬ್ದುಲ್ ಲತೀಫ್ ಎಂಬ ಆರೋಪಿಗಳು ಕೇರಳದಲ್ಲಿ ಈ ಹಿಂದೆ ನಡೆದಿದ್ದ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದರೆಂದು ಮಾಹಿತಿ ಲಭಿಸಿದೆ.

ಕಳೆದ ಜನವರಿಯಲ್ಲಿ ಕೆ.ಸಿ ರೋಡಿನ‌ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಶಾಖೆಯಲ್ಲಿ ನಡೆದಿದ್ದ ದರೋಡೆಯು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ದೇರಳಕಟ್ಟೆಯ ಮುತ್ತೂಟ್ ಫೈನಾನ್ಸ್‌ನಲ್ಲಿ ಉತ್ಕೃಷ್ಟ ಗುಣಮಟ್ಟದ ರಕ್ಷಣಾ ಸಲಕರಣೆ ಅಳವಡಿಸಿದ ಪರಿಣಾಮ ಸಂಭವನೀಯ ದರೋಡೆ ಪ್ರಕರಣವೊಂದು ವಿಫಲವಾಗಿದೆ.ಘಟನಾ ಸ್ಥಳಕ್ಕೆ ಎಸಿಪಿ ಧನ್ಯ ನಾಯಕ್, ಕೊಣಾಜೆ ಇನ್‌ಸ್ಪೆಕ್ಟರ್ ರಾಜೇಂದ್ರ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''