ಸಿದ್ದರಾಮಯ್ಯ ಉಡುಪಿ ಜನರ ಕ್ಷಮೆ ಕೇಳಬೇಕು: ಹರೀಶ್‌ ಪೂಂಜ

KannadaprabhaNewsNetwork |  
Published : Apr 01, 2025, 12:47 AM IST
ರಾಜ್ಯ ಸರ್ಕಾರದಿಂದ ಉಡುಪಿ ಜಿಲ್ಲೆಯ ನಿರ್ಲಕ್ಷ್ಯ: ಬಿಜೆಪಿ ಪ್ರತಿಭಟನೆ | Kannada Prabha

ಸಾರಾಂಶ

ಉಡುಪಿ ಬಿಜೆಪಿ ವತಿಯಿಂದ ಉಡುಪಿ ಜಿಲ್ಲೆಯ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಬಿಜೆಪಿ ಕಚೇರಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಕೃಷ್ಣಮಠದ ಪಾರ್ಕಿಂಗ್ ಏರಿಯಾದಲ್ಲಿ ಪ್ರತಿಭಟನಾ ಸಭೆ ನಡೆಯಿತು.

ರಾಜ್ಯ ಸರ್ಕಾರದಿಂದ ಉಡುಪಿ ಜಿಲ್ಲೆಯ ನಿರ್ಲಕ್ಷ್ಯ: ಬಿಜೆಪಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಜಿಲ್ಲೆ ತೆರಿಗೆ ಪಾವತಿಯಲ್ಲಿ ರಾಜ್ಯಕ್ಕೆ 2ನೇ ಸ್ಥಾನದಲ್ಲಿದೆ. ಆದರೆ ಇಲ್ಲಿನ ಪ್ರಾಮಾಣಿಕ ತೆರಿಗೆದಾರರಿಗೆ ಕಾಂಗ್ರೆಸ್ ಯಾವುದೇ ಉಪಯುಕ್ತ ಯೋಜನೆಗಳನ್ನು ನೀಡದೇ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವುದು ಬಜೆಟ್‌ನಲ್ಲಿ ಸ್ಪಷ್ಟವಾಗಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ಉಡುಪಿ ಜಿಲ್ಲೆಯ ಜನರ ಕ್ಷಮೆ ಯಾಚಿಸಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಆಗ್ರಹಿಸಿದ್ದಾರೆ.ಅವರು ಸೋಮವಾರ ಉಡುಪಿ ಬಿಜೆಪಿ ವತಿಯಿಂದ ಉಡುಪಿ ಜಿಲ್ಲೆಯ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಬಿಜೆಪಿ ಕಚೇರಿಯಿಂದ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಕೃಷ್ಣಮಠದ ಪಾರ್ಕಿಂಗ್ ಏರಿಯಾದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಬಜೆಟ್‌ ಪೂರ್ವದಲ್ಲಿ ಉಡುಪಿ ಜಿಲ್ಲೆಯ ಎಲ್ಲ ಶಾಸಕರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಜಿಲ್ಲೆಗೆ ಅಗತ್ಯವಿರುವ ಯೋಜನೆಗಳನ್ನು ನೀಡಿ, ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸುವಂತೆ ವಿನಂತಿಸಿದ್ದೆವು. ಆದರೆ ಅವರು ಜಿಲ್ಲೆಗೆ ಬಿಡಿಗಾಸು ನೀಡಿಲ್ಲ. ದೇಶದ ಯಾವುದಾದರೂ ರಾಜ್ಯದಲ್ಲಿ, ಔರಂಗಜೇಬನಂತೆ ಆಡಳಿತ ನಡೆಸಿದ ಸಿಎಂ ಇದ್ದರೆ ಅದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂದು ಪೂಂಜಾ ಹರಿಹಾಯ್ದರು.ತಾಕತ್ತು ತೋರಿಸಬೇಕಾಗುತ್ತದೆ:

ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ, ಉಡುಪಿ ಜಿಲ್ಲೆ ಹಿಂದುತ್ವದ ಭದ್ರ ಕೋಟೆ ಎಂಬ ಕಾರಣಕ್ಕೆ ಮಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಡುಪಿ ಜಿಲ್ಲೆಗೆ ಯಾವುದೇ ಯೋಜನೆಗಳನ್ನು ನೀಡುತ್ತಿಲ್ಲ. ಸಿದ್ದರಾಮಯ್ಯನವರೇ ಉಡುಪಿ ಜಿಲ್ಲೆಯ ಜನತೆಯ ತಾಳ್ಮೆ ಪರೀಕ್ಷಿಸಬೇಡಿ, ಜಿಲ್ಲೆಯ ಜನರು ಬೆಂಗಳೂರಿಗೆ ಬಂದು ನಮ್ಮ ತಾಕತ್ತು ಏನು ಎಂಬುದನ್ನು ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಅಲ್ಲದೇ ಉಡುಪಿ ಜಿಲ್ಲೆಯ ಅಧಿಕಾರಿಗಳು ತಮ್ಮಲ್ಲಿಗೆ ಬರುವ ಜನತೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸುತ್ತಿದ್ದಾರೆ, ಪೊಲೀಸರು ಠಾಣೆಗೆ ಬರುವ ಜನರ ಮೇಲೆ ಖಾಕಿ ರೌಡಿಸಂ ನಡೆಸುತ್ತಿದ್ದಾರೆ. ಇದು ಮುಂದುವರಿದರೇ ಸರ್ಕಾರಿ ಕಚೇರಿಗಳಿಗೆ ಬೀಗ ಜಡಿಯಲು ಹಿಂಜರಿಯುದಿಲ್ಲ ಎಂದರು.ಪ್ರತಿಭಟನೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸುನಿಲ್‌ ಕುಮಾರ್, ಗುರುರಾಜ ಗಂಟಿಹೊಳೆ, ಕಿರಣ್‌ಕುಮಾರ್ ಕೊಡ್ಗಿ, ಸುರೇಶ್‌ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕಿಶೋರ್‌ ಕುಮಾರ್ ಪುತ್ತೂರು ಭಾಗವಹಿಸಿದ್ದರು.

ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್‌ಕುಮಾರ್ ಕುಂದಾಪುರ, ಮಾಜಿ ಅದ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆ, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್, ಜಿಲ್ಲಾ ಪ್ರಮುಖರಾದ ಉದಯಕುಮಾರ್ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ, ಪ್ರಭಾಕರ ಪೂಜಾರಿ, ರೇಷ್ಮಾ ಉದಯ ಶೆಟ್ಟಿ, ಶ್ಯಾಮಲಾ ಕುಂದರ್‌, ದಿನಕರ ಬಾಬು, ನಗರಾಧ್ಯಕ್ಷ ದಿನೇಶ್‌ ಅಮೀನ್, ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ಶಿವಕುಮಾರ ಅಂಬಲಪಾಡಿ, ಸಂಧ್ಯಾ ರಮೇಶ, ವೀಣಾ ಶೆಟ್ಟಿ, ನಗರಸಭಾ ಸದಸ್ಯ ಗಿರೀಶ ಅಂಚನ್​, ರಾಜೀವ ಕುಲಾಲ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ----------------

ನೀರಿಲ್ಲದ ಊರಿಗೆ ಕಳಿಸುತ್ತೇವೆ: ಪ್ರಮೋದ್‌

ಸಿದ್ದರಾಮಯ್ಯ ಅವರು ಉಡುಪಿ ಜಿಲ್ಲೆಗೆ ಬರಬೇಕಿದ್ದ ಅನುದಾನ ಮೊಟಕು ಮಾಡಿದ್ದು, ಜನರಿಗೆ ತೊಂದರೆ ಕೊಡಬೇಕೆಂದು ಜನವಿರೋಧಿ ಮನೋಭಾವದ ಅಧಿಕಾರಿಗಳನ್ನು ನೇಮಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಜಿಲ್ಲೆಯಲ್ಲಿ ಅನ್ಯಾಯ ಎಸಗಿ, ಜನವಿರೋಧಿ ನೀತಿ ಅನುಸರಿಸಿದ್ದ ಅಧಿಕಾರಿಗಳನ್ನು ನೀರಿಲ್ಲದ ಊರಿಗೆ ವರ್ಗಾಯಿಸಿ ತಕ್ಕ ಪಾಠ ಕಲಿಸುತ್ತೇವೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.---------------

ದುಸ್ಥಿತಿ ರಾಜ್ಯವನ್ನು ಕಾಡುತ್ತಿದೆ: ಕೋಟ

ರಾಜ್ಯ ಕಾಂಗ್ರೆಸ್​ ಸರ್ಕಾರ ಎರಡು ವರ್ಷದಿಂದ ರಾಜ್ಯದ ಬಡ ಜನರಿಗೆ ಒಂದೇ ಒಂದು ಮನೆ ನೀಡಿಲ್ಲ. ಕೇಂದ್ರ ಸರ್ಕಾರ ನೀಡಿದ ಮನೆಯನ್ನೂ ಹಂಚಿಕೆ ಮಾಡಿಲ್ಲ. ಅಂತಹ ದುಸ್ಥಿತಿ ರಾಜ್ಯವನ್ನು ಕಾಡುತ್ತಿದೆ. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈ ಎನ್ನುವವರಿಗೆ ರಕ್ಷಣೆ ಕೊಡುವ ಕೆಟ್ಟ ಪರಿಸ್ಥಿತಿ ಇದೆ. ಕಾನೂನು ಸುವ್ಯಸ್ಥೆ ಎಲ್ಲಿದೆ ಎಂದು ಗೃಹಮಂತ್ರಿ ಪರಮೇಶ್ವರ್ ರಾಜ್ಯದ ಜನತೆಗೆ ತಿಳಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ