ಶಿಕ್ಷಕರು, ಉಪನ್ಯಾಸಕರ ಕರ್ತವ್ಯಲೋಪ ಸಹಿಸಲ್ಲ: ಶಾಸಕ ಶ್ರೀನಿವಾಸ ಮಾನೆ

KannadaprabhaNewsNetwork | Published : Feb 19, 2025 12:48 AM

ಸಾರಾಂಶ

ಶಾಸಕ ಶ್ರೀನಿವಾಸ ಮಾನೆ ಅವರು ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಆರ್‌ಪಿಗಳು ಅನಧಿಕೃತವಾಗಿ ಗೈರಾಗಿರುವುದು, ಗಂಟೆ ಬೆಳಗ್ಗೆ ೧೦.೪೫ ಆದರೂ ಕರ್ತವ್ಯಕ್ಕೆ ಹಾಜರಾಗದೇ ಇರುವುದಕ್ಕೆ ಗರಂ ಆದರು.

ಹಾನಗಲ್ಲ: ಇಲ್ಲಿನ ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರ, ಶಾಸಕರ ಸರ್ಕಾರಿ ಮಾದರಿ ಶಾಲೆ, ಮಲ್ಲಿಗಾರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಶಾಸಕ ಶ್ರೀನಿವಾಸ ಮಾನೆ ಅವರು ಮಂಗಳವಾರ ದಿಢೀರ್ ಭೇಟಿ ನೀಡಿ, ಸಮಯ ಮತ್ತು ಕರ್ತವ್ಯಪಾಲನೆ ಮಾಡದ ಅಧಿಕಾರಿ, ಉಪನ್ಯಾಸಕ, ಸಿಬ್ಬಂದಿ ಮತ್ತು ಶಿಕ್ಷಕರನ್ನು ತರಾಟೆಗೆ ತೆಗೆದುಜೊಂಡು ಕರ್ತವ್ಯ ಲೋಪ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಮೊದಲಿಗೆ ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಆರ್‌ಪಿಗಳು ಅನಧಿಕೃತವಾಗಿ ಗೈರಾಗಿರುವುದು, ಗಂಟೆ ಬೆಳಗ್ಗೆ ೧೦.೪೫ ಆದರೂ ಕರ್ತವ್ಯಕ್ಕೆ ಹಾಜರಾಗದೇ ಇರುವುದಕ್ಕೆ ಗರಂ ಆದರು.

ಓರ್ವ ಪ್ರೋಗ್ರಾಂರ್ ಹಾಗೂ ಸಹಾಯಕ ಲೆಕ್ಕಿಗರೂ ಅನಧಿಕೃತವಾಗಿ ಗೈರಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಹಾಜರಿ ಪುಸ್ತಕದಲ್ಲಿ ನಮೂದಿಸಿ, ಕರ್ತವ್ಯಲೋಪ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸಭೆ, ಸಮಾರಂಭಗಳ ನೆಪದಲ್ಲಿ ವೈಯಕ್ತಿಕ ಕೆಲಸ, ಕಾರ್ಯಗಳಲ್ಲಿ ತೊಡಗುವುದು ಸರಿಯಲ್ಲ. ಇಂಥ ಬೆಳವಣಿಗೆಗಳನ್ನು ಸಹಿಸುವುದಿಲ್ಲ. ದೇಶದ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಬೇಕಿರುವ ಶಿಕ್ಷಣ ಇಲಾಖೆಯಲ್ಲಿ ಯಾವುದೇ ಕಾರಣಕ್ಕೂ ಅಶಿಸ್ತು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.ಇದಕ್ಕೂ ಮೊದಲು ಶಾಸಕರ ಸರ್ಕಾರಿ ಮಾದರಿ ಶಾಲೆಗೆ ಭೇಟಿ ನೀಡಿ ಶಿಕ್ಷಕರ ಹಾಜರಾತಿ ಪುಸ್ತಕ ಪರಿಶೀಲಿಸಿದರು. ವಿದ್ಯಾರ್ಥಿಗಳು ಶಾಲೆಗೆ ತಡವಾಗಿ ಆಗಮಿಸುತ್ತಿರುವುದನ್ನು ಗಮನಿಸಿ, ಪಾಲಕರ ಸಭೆ ಕರೆದು ಸಮಯಪಾಲನೆಗೆ ಸೂಚಿಸಿ. ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಆಗಮಿಸಬೇಕು. ಶಿಕ್ಷಕರು ಅವರಿಗಿಂತ ಮೊದಲೇ ಹಾಜರಿರಬೇಕು ಎಂದರು.ಬಳಿಕ ಅಡುಗೆ ಕೊಠಡಿಗೆ ತೆರಳಿ ಆಹಾರ ಸಾಮಗ್ರಿಗಳ ಸಂಗ್ರಹ ಪುಸ್ತಕ ಪರಿಶೀಲಿಸಿದರು. ವಿದ್ಯಾರ್ಥಿಗಳಿಗೆ ಸಮರ್ಪಕ ಪ್ರಮಾಣದಲ್ಲಿ ಹಾಲು ವಿತರಿಸಬೇಕು. ಶುಚಿ, ರುಚಿ ಬಿಸಿಯೂಟಕ್ಕೆ ಕಾಳಜಿ ವಹಿಸಬೇಕು ಎಂದು ಶ್ರೀನಿವಾಸ ಮಾನೆ ಸೂಚಿಸಿದರು.ಬಳಿಕ ಮಲ್ಲಿಗಾರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಹಾಜರಾತಿ ಪುಸ್ತಕ ಪರಿಶೀಲಿಸಿದಾಗ ಶಿಕ್ಷಕರು ಮಧ್ಯಾಹ್ನದ ಸಹಿಯನ್ನು ಸಹ ಬೆಳಗ್ಗೆಯೇ ಹಾಕಿರುವುದಕ್ಕೆ ಪ್ರಶ್ನಿಸಿದರು. ಬಹುತೇಕ ವಿದ್ಯಾರ್ಥಿಗಳು ಶೂ, ಸಾಕ್ಸ್ ಧರಿಸದೇ ಆಗಮಿಸುವುದನ್ನು ಗಮನಿಸಿ ಕಡ್ಡಾಯವಾಗಿ ವಿದ್ಯಾರ್ಥಿಗಳು ಶೂ, ಸಾಕ್ಸ್ ಧರಿಸಬೇಕು. ಶಿಸ್ತು, ಸ್ವಚ್ಛತೆಗೆ ಒತ್ತು ನೀಡಬೇಕು. ಶಿಕ್ಷಕರು ತಮ್ಮ ರಕ್ತ ಸಂಬಂಧಿಗಳಿಂದ ಶಾಲಾ ಕೆಲಸ ನಿರ್ವಹಿಸಬಾರದು. ಕರ್ತವ್ಯ ಪಾಲನೆಗೆ ಮುಂದಾಗುವಂತೆ ಸೂಚಿಸಿದರು.ಕೊನೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಸಿಬ್ಬಂದಿ ಹಾಜರಿ ಪುಸ್ತಕ ಪರಿಶೀಲಿಸಿದರು. ಕಾಲೇಜಿನ ಆಡಳಿತ ವಿಷಯಗಳ ಕುರಿತು ಉಪನ್ಯಾಸಕರು ಸಮರ್ಪಕ ಮಾಹಿತಿ ನೀಡಲು ತಡವರಿಸಿದಾಗ ಪ್ರಾಚಾರ್ಯರ ಅನುಪಸ್ಥಿತಿಯಲ್ಲಿ ಸಮರ್ಪಕ ಮಾಹಿತಿ ನೀಡಬೇಕು. ಇತ್ತೀಚಿನ ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಗಣನೀಯವಾಗಿ ಕುಸಿಯುತ್ತಿದೆ. ಇದಕ್ಕೆ ಏನು ಕಾರಣ ಎಂದು ಪ್ರಶ್ನಿಸಿ, ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ಪ್ರಾಮಾಣಿಕವಾಗಿ ಕಾಳಜಿ ವಹಿಸಿ ಎಂದು ಸೂಚಿಸಿದರು.

Share this article