ಕನ್ನಡಪ್ರಭ ವಾರ್ತೆ ಆಳಂದ
ಆಳಂದ ಪೊಲೀಸ್ ಠಾಣೆಗೆ ಜಿಲ್ಲಾ ಎಸ್ಪಿ ಅಡ್ಡೂರು ಶ್ರೀನಿವಾಸುಲು ಭೇಟಿ ನೀಡಿದ್ದ ಸಂದರ್ಭದಲ್ಲಿ ನರೋಣಾ ಠಾಣೆಯ ಪಿಎಸ್‌ಐ ಸಿದ್ದರಾಮ ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆಂದು ಗೊತ್ತಾಗಿದೆ.ಠಾಣೆಯ ವ್ಯಾಪ್ತಿಯಲ್ಲಿ ಒಂದೂವರೆ ವರ್ಷದ ಹೆಣ್ಣು ಮಗು ಸಂಶಯಾಸ್ಪದವಾಗಿ ಮೃತಪಟ್ಟು, ವಿಳಂಬವಾಗಿ ಸ್ವಯಂಪ್ರೇರಿತ ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ಹಿನ್ನೆಲೆಯಲ್ಲಿ ಅಮಾನತು ಕೈಗೊಳ್ಳಲಾಗಿದೆ ಎಂದು ಗೊತ್ತಾಗಿದೆ.
ಜ್ವರದಿಂದ ಬಳಲುತ್ತಿದ್ದ ಮಗುವನ್ನು ಪೋಷಕರು ಜು.೧೮ರಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು, ಮರುದಿನವೇ (ಜು.೧೯ರಂದು), ವೈದ್ಯರು ಲೈಂಗಿಕ ದೌರ್ಜನ್ಯದ ಶಂಕೆ ವ್ಯಕ್ತಪಡಿಸಿದ್ದರು. ಜು.೨೪ರಂದು ಮಗು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದು, ಎಂಎಲ್‌ಸಿಯಲ್ಲಿ ಲೈಂಗಿಕ ದೌರ್ಜನ್ಯ ಎಂದು ಉಲ್ಲೇಖಿಸಲಾಗಿತ್ತು. ಈ ಬಗ್ಗೆ ತಕ್ಷಣವೇ ಕ್ರಮಕೈಗೊಳ್ಳದಿರುವುದು ಕಂಡು ಬಂದಿದ್ದರಿಂದ ಪಿಎಸ್‌ಐಗೆ ನೋಟಿಸ್ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.ಒಂದುವರೆ ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯದ ಬಳಿಕ ಮೃತಪಟ್ಟಿರುವ ಈ ಪ್ರಕರಣ ಜಾಲಭೇದಿಸಲು ಮುಂದಾಗಿರುವ ಉನ್ನತಾಧಿಕಾರಿಗಳು, ಸಮಗ್ರ ತನಿಖೆಗಾಗಿ ಕಲಬುರಗಿ ಗ್ರಾಮೀಣ ಡಿವೈಎಸ್‌ಪಿ ಆಗಿರುವ ಪ್ರೊಬೆಷನರಿ ಐಪಿಎಸ್ ಮಹಿಳಾ ಅಧಿಕಾರಿ ಅವರನ್ನು ತನಿಖಾಧಿಕಾರಿಗಳನ್ನಾಗಿ ನೇಮಿಸಿ ಪ್ರಕರಣವನು ಬಯಲುಗೊಳಿಸಲು ಪಣತೊಟ್ಟಿದ್ದಾರೆಂದು ಹೇಳಲಾಗುತ್ತಿದೆ.
ಠಾಣೆಯಲ್ಲಿ ಕಡತಗಳ ಪರಿಶೀಲನೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಆಳಂದ ಪೊಲೀಸ್ ಠಾಣೆಗೆ ಭೇಟಿ ನೀಡಿ ಠಾಣೆಯ ಕಡತಗಳನ್ನು ಪರಿಶೀಲಿಸಿದರು. ಕಡತಗಳೊಂದಿಗೆ ಕಾನೂನು ಮತ್ತು ಸುವ್ಯವಸ್ಥೆ ಪರಿಶೀಲಿಸಿದ ಶ್ರೀನಿವಾಸುಲು ಅವರು, ಅಧಿಕಾರಿಗಳು ಉತ್ತಮ ಕರ್ತವ್ಯ ನಿರ್ವಹಿಸಲು ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಅವರಿಗೆ ಸಲಹೆ ನೀಡಿದರು. ಆಳಂದ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದರ ಕುರಿತು ಸ್ಥಳೀಯ ಠಾಣಾಧಿಕಾರಿಯೊಂದಿಗೆ ಚರ್ಚಿಸಿದರು.ಬಳಿಕ ಡಿವೈಎಸ್‌ಪಿ ಕಚೇರಿಗೆ ಭೇಟಿ ನೀಡಿ ಕಾನೂನು ಸುವ್ಯವಸ್ಥೆ ಹಾಗೂ ಪ್ರಕರಣ ವಿಲೆವಾರಿ ಕುರಿತಾದ ಮಾಹಿತಿ ಕಲೆಹಾಕಿದರು. ಡಿವೈಎಸ್‌ಪಿ ಗೋಪಿ ಬಿ.ಆರ್. ಆಳಂದ ಸಿಪಿಐ ಮಹಾದೇವ ಪಂಚಮುಖಿ, ಗ್ರಾಮೀಣ ಸಿಪಿಐ ಪ್ರಕಾಶ ಯಾತ್ನೂರ ತಮ್ಮ ವ್ಯಾಪ್ತಿಯ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕೆಳಹಂತದ ಪೊಲೀಸ್ ಸಿಬ್ಬಂದಿ ಹಾಜರಿದ್ದರು.