ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಪಟ್ಟಣದ ತಾಲೂಕು ಕಚೇರಿ ಆರ್.ಆರ್.ಟಿ ಶಿರಸ್ತೇದಾರ್ ಬಿ.ಆರ್. ರವಿ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ. ಪ್ರಕಾಶ್ ಆದೇಶಿಸಿದ್ದಾರೆ.
ಆರ್.ಆರ್.ಟಿ ಶಾಖೆಗೆ ಸಂಬಂಧಿಸಿದ ಅರ್ಜಿಗಳನ್ನು ಹಲವು ವರ್ಷಗಳಿಂದ ತಮ್ಮ ಬಳಿಯೇ ಇಟ್ಟುಕೊಂಡು ಸಕಾಲದಲ್ಲಿ ವಿಲೇ ಮಾಡದ ಬಗ್ಗೆ ಬಿ.ಆರ್.ರವಿ ವಿರುದ್ಧ ಸಾರ್ವಜನಿಕರಿಂದ ಹಲವು ದೂರುಗಳಿದ್ದವು. ಸಾರ್ವಜನಿಕರ ದೂರಿನ ಮೇರೆಗೆ 2023ರ ಸೆ.20 ರಂದು ಮಂಡ್ಯ ಜಿಲ್ಲಾಧಿಕಾರಿಗಳು ಪಟ್ಟಣದ ತಾಲೂಕು ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಈ ವೇಳೆ ಶಿರಸ್ತೇದಾರ್ ಬಿ.ಆರ್. ರವಿ 241 ಕಡತಗಳನ್ನು ವಿಲೇ ಮಾಡದೆ ತಮ್ಮ ಬಳಿಯೇ ನಿಯಮಬಾಹಿರವಾಗಿ ಇಟ್ಟುಕೊಂಡಿದ್ದು ಕಂಡು ಬಂದಿತ್ತು. ಇದನ್ನು ಆಧರಿಸಿ ಜಿಲ್ಲಾಧಿಕಾರಿಗಳು ಸರ್ಕಾರ ಹಾಗೂ ಸಾರ್ವಜನಿಕರ ಮಧ್ಯೆ ಸಮನ್ವಯತೆ ಸಾಧಿಸುವ ಮಾತೃ ಇಲಾಖೆಯಾದ ಕಂದಾಯ ಇಲಾಖೆ ಬಗ್ಗೆ ಸಾರ್ವಜನಿಕರಲ್ಲಿ ಕೆಟ್ಟ ಅಭಿಪ್ರಾಯವನ್ನು ಮೂಡಿಸುವಲ್ಲಿ ಸದರಿ ನೌಕರ ಕಾರಣಕರ್ತರಾಗಿದ್ದಾರೆ ಎಂದು ಹಾಗೂ ಈ ಬಗ್ಗೆ ಸದರಿ ನೌಕರನಿಗೆ ಕಾರಣ ಕೇಳಿ ನೀಡಿದ ನೋಟಿಸ್ ನಲ್ಲಿ 241 ಅರ್ಜಿಗಳನ್ನು ತಾವು ಸಕಾಲದಲ್ಲಿ ವಿಲೇ ಮಾಡದಿರುವುದನ್ನು ಒಪ್ಪಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಸದರಿ ನೌಕರನ ವಿರುದ್ಧ ಮಂಡ್ಯ ಜಿಲ್ಲಾಧಿಕಾರಿಗಳು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಗೆ ವರದಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳ ವರದಿ ಪರಿಶೀಲಿಸಿ ಪ್ರಾದೇಶಿಕ ಆಯುಕ್ತ ಜಿ.ಸಿ. ಪ್ರಕಾಶ್ ಆರ್.ಆರ್.ಟಿ ಶಿರಸ್ತೇದಾರ್ ಬಿ.ಆರ್. ರವಿ ಅವರನ್ನು ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.