ದೇಶಿ ಕ್ರೀಡೆಗಳು ನೆಲಸಂಸ್ಕೃತಿಯ ಪ್ರತಿಬಿಂಬ: ಮಲ್ಲಿಕಾರ್ಜುನ

KannadaprabhaNewsNetwork | Published : Nov 9, 2024 1:23 AM

ಸಾರಾಂಶ

ಕೆ.ಆರ್‌.ಪೇಟೆ ತಾಲೂಕಿನಲ್ಲಿ ಸಾಕಷ್ಟು ಕ್ರೀಡಾಪಟುಗಳು ರಾಜ್ಯ, ಅಂತಾರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಕ್ರೀಡೆ ವ್ಯಕ್ತಿತ್ವ, ದೈಹಿಕ ಸದೃಢತೆ, ಜ್ಞಾನವಿಕಸನಕ್ಕೆ ಸಾಧನವಾಗಿದೆ. ಹಳ್ಳಿಗಳಲ್ಲಿ ಉತ್ತಮ ದೇಹಾರ್ಧಡತೆ ಹೊಂದಿರುವ ನೈಜ್ಯ ಪ್ರತಿಭೆಗಳಿವೆ. ಎಕ್ಕಿ ತೆಗೆದು ಮುಖ್ಯವಾಹಿನಿಯಲ್ಲಿ ಗುರುತಿಸುವ ಕೆಲಸವಾಗಬೇಕಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ದೇಶೀಯ ಕ್ರೀಡೆಗಳು ನೆಲದ ಸಂಸ್ಕೃತಿಯ ಪ್ರತಿಬಿಂಬ. ಇವುಗಳನ್ನು ಉಳಿಸಿ, ಬೆಳೆಸುವ ಕಾಯಕಲ್ಪಕ್ಕೆ ಯುವಕರು ಮುಂದಾಗಬೇಕು ಎಂದು ಆರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಕೆ.ಎಸ್.ನರಸಿಂಹಸ್ವಾಮಿ ಪ್ರವಾಸಿ ಮಂದಿರ ಆವರಣದಲ್ಲಿ ಫ್ರೆಂಡ್ಸ್ ವಾಲಿಬಾಲ್‌ ಕ್ಲಬ್ ವತಿಯಿಂದ ಆಯೋಜಿಸಿದ್ದ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾವಳಿ ವೇಳೆ ಮಾತನಾಡಿ, ಕ್ರೀಡೆ, ಕ್ರೀಡಾಪುಟುಗಳು ಆ ಪ್ರಾಂತ್ಯವನ್ನು ಗುರ್ತಿಸಿ ಸ್ಥಳದ ಕೀರ್ತಿ ಹೆಚ್ಚಿಸಲಿವೆ ಎಂದರು.

ತಾಲೂಕಿನಲ್ಲಿ ಸಾಕಷ್ಟು ಕ್ರೀಡಾಪಟುಗಳು ರಾಜ್ಯ, ಅಂತಾರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಕ್ರೀಡೆ ವ್ಯಕ್ತಿತ್ವ, ದೈಹಿಕ ಸದೃಢತೆ, ಜ್ಞಾನವಿಕಸನಕ್ಕೆ ಸಾಧನವಾಗಿದೆ. ಹಳ್ಳಿಗಳಲ್ಲಿ ಉತ್ತಮ ದೇಹಾರ್ಧಡತೆ ಹೊಂದಿರುವ ನೈಜ್ಯ ಪ್ರತಿಭೆಗಳಿವೆ. ಎಕ್ಕಿ ತೆಗೆದು ಮುಖ್ಯವಾಹಿನಿಯಲ್ಲಿ ಗುರುತಿಸುವ ಕೆಲಸವಾಗಬೇಕಿದೆ ಎಂದರು.

ಕ್ರಿಕೆಟ್ ಮಾತ್ರ ಕ್ರೀಡೆಯಲ್ಲ. ದೇಶಿ ಕ್ರೀಡೆ ಉಳಿಸುವುದು ಎಲ್ಲರ ಕರ್ತವ್ಯ. ವಾಲಿಬಾಲ್, ಖೋಖೋ, ಕಬ್ಬಡಿಯಂತಹ ಕ್ರೀಡೆಗಳು ಮೈಮನಸ್ಸಿಗೆ ಕ್ರೀಡಾಳುವಿಗೆ ಕಸರತ್ತು ನೀಡಿದರೆ, ಪ್ರೇಕ್ಷಕರ ಮನವನ್ನು ರೋಮಾಂಚನಗೊಳಿಸಲಿವೆ ಎಂದರು.

ಕೆಪಿಸಿಸಿ ಸದಸ್ಯ ಸುರೇಶ್ ಮಾತನಾಡಿ, ಯುವಕರು ಓದಿನಷ್ಟೆ ಕ್ರೀಡೆಗೆ ಒಂದಿಷ್ಟು ವೇಳೆ ಕಲ್ಪಿಸಿಕೊಳ್ಳಿ. ಹಳ್ಳಿಗಾಡಿನಲ್ಲಿ ಕ್ರೀಡಾಕೂಟ ಆಯೋಜಿಸುವುದು ಶ್ರಮದ ಕೆಲಸ. ಉತ್ತಮ ಕ್ರೀಡಾಪಟುಗಳಿಗೆ ಶಿಕ್ಷಣ, ಉದ್ಯೋಗ ಎಲ್ಲ ರಂಗದಲ್ಲಿಯೂ ಮೀಸಲಾತಿ ಇದೆ ಎಂದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಗೌರವಿಸಲಾಯಿತು. ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಟೂರ್ನಿಗೆ ಸಹಕರಿಸಿ ತಮ್ಮಕ್ರೀಡಾ ಪ್ರೇಮ ಮೆರೆದರು.

ನಿವೃತ್ತ ಪ್ರಾಂಶುಪಾಲರಾದ ಚಂದ್ರಮೋಹನ್, ಜಾಣೇಗೌಡ, ಗ್ರಾಪಂ ಮಾಜಿ ಅಧ್ಯಕ್ಷರಾದ ಕಾಯಿ ಸುರೇಶ್, ಲಕ್ಷ್ಮೀಪುರ ಚಂದ್ರು, ತುಳಸಿ ರಮೇಶ್, ಸಮಾಜ ಸೇವಕ ಮೊಟ್ಟೆ ಮಂಜು, ಕೆಡಿಪಿ ಜಿಲ್ಲಾ ಸದಸ್ಯಉಜೈಫ್, ಧರ್ಮ, ಕಿಕ್ಕೇರಮ್ಮ ಟ್ರೇಡರ್ಸ್‌ ಚಂದ್ರು, ನಾಗರಾಜು, ಮಹದೇವು, ಅನಿಲ್, ಸುನಿಲ್‌ ಇದ್ದರು.

Share this article