ದೇಶಕಂಡ ಮುತ್ಸದ್ಧಿ ನಾಯಕ ಬಾಬು ಜಗಜೀವನರಾಮ್

KannadaprabhaNewsNetwork | Published : Apr 7, 2024 1:49 AM

ಸಾರಾಂಶ

ಡಾ.ಬಾಬು ಜಗಜೀವನರಾಮ ಬಾಲ್ಯದಲ್ಲಿಯೇ ಅಸ್ಪೃಶ್ಯತೆಯ ಅವಮಾನವನ್ನು ಮತ್ತು ಮೇಲಿ ಕೀಳು ಎನ್ನುವ ತಾರತಮ್ಯದ ಸವಾಲುಗಳನ್ನು ಎದುರಿಸಿ ಬೆಳೆದರು.

ಹೊಸಪೇಟೆ: ಸಮ ಸಮಾಜದ ನಿರ್ಮಾಣಕ್ಕಾಗಿ ಹೋರಾಟ ನಡೆಸಿದ ಡಾ.ಬಾಬು ಜಗಜೀವನರಾಮ್ ಅವರು ದೇಶ ಕಂಡ ಮುತ್ಸದ್ಧಿ ನಾಯಕರಾಗಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಡಾ.ಬಾಬು ಜಗಜೀವನರಾಮ್ ಅವರ ೧೧೭ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಬಾಬು ಜಗಜೀವನರಾಮ ಬಾಲ್ಯದಲ್ಲಿಯೇ ಅಸ್ಪೃಶ್ಯತೆಯ ಅವಮಾನವನ್ನು ಮತ್ತು ಮೇಲಿ ಕೀಳು ಎನ್ನುವ ತಾರತಮ್ಯದ ಸವಾಲುಗಳನ್ನು ಎದುರಿಸಿ ಬೆಳೆದರು. ವಿದ್ಯಾರ್ಥಿ ಜೀವನದಲ್ಲಿ ಅನೇಕ ಹೋರಾಟಗಳನ್ನು ನಡೆಸಿ ಸಮರ್ಥ ನಾಯಕರಾಗಿ ಮುನ್ನೆಡೆದರು. ಈ ದೇಶಕಂಡ ಅನೇಕ ಹೋರಾಟಗಾರರು ಮತ್ತು ದಾರ್ಶನಿಕರಲ್ಲಿ ಡಾ.ಬಾಬು ಜಗಜೀವನರಾಮ ಕೂಡ ಪ್ರಮುಖರಾಗಿದ್ದಾರೆ ಎಂದು ತಿಳಿಸಿದರು.

೮೮ ಮುದ್ಲಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ.ಕೆ ವಿಶೇಷ ಉಪನ್ಯಾಸ ನೀಡಿ, ಭಾರತ ದೇಶ ಕಂಡ ಅಪ್ರತಿಮ ಸಂಸದೀಯ ಪಟು, ಸ್ವಾತಂತ್ರ್ಯ ಹೋರಾಟಗಾರ ದಲಿತ ಸಮುದಾಯದಲ್ಲಿ ಜನಿಸಿ ಈ ದೇಶದ ಉನ್ನತ ಹುದ್ದೆ ಅಲಂಕರಿಸಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಮೇರುವ್ಯಕ್ತಿತ್ವ, ಹಸಿರು ಕ್ರಾಂತಿಯ ಹರಿಕಾರ, ಕಾರ್ಮಿಕರ ಶ್ರೇಯಸ್ಸಿಗೆ ನೂತನ ಕಾನೂನುಗಳನ್ನು ಜಾರಿ ತಂದ ಸಮಾಜ ಚಿಂತಕ, ಈ ದೇಶದ ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಡಾ.ಬಾಬು ಜಗಜೀವನ್ ರಾಮ್‌ರವರ ಜೀವನ ಮತ್ತು ಸಾಧನೆ ಅವಿಸ್ಮರಣೀಯ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಹೆಚ್.ಎಸ್ ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಮಚಂದಪ್ಪ್ರ, ಆಹಾರ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ, ಚುನಾವಣಾ ಶಾಖೆಯ ಮನೋಜ್ ಲಾಡೆ ಹಾಗೂ ವಿವಿಧ ಇಲಾಖಾಧಿಕಾರಿಗಳು ಇತರರು ಇದ್ದರು.

Share this article