ದಲಿತ ಗೃಹಮಂತ್ರಿ ಇದ್ದರೂ ದಲಿತರ ರಕ್ಷಣೆ ಇಲ್ಲ: ದೇವಿಂದ್ರನಾಥ್ ಆರೋಪ

KannadaprabhaNewsNetwork | Published : Apr 25, 2024 1:10 AM

ಸಾರಾಂಶ

ರೊಟ್ಟಿ ಖರೀದಿ ಮಾಡಲು ಹೋದ ದಲಿತ ಯುವಕ ರಾಕೇಶ್ ಕೊಲೆಯನ್ನು ಖಂಡಿಸಿ ಜಿಲ್ಲಾ ಮಾದಿಗ ಸಮಾಜದ ವತಿಯಿಂದ ಯಾದಗಿರಿ ನಗರದ ನೇತಾಜಿ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ರಾಜ್ಯದಲ್ಲಿ ದಲಿತ ಗೃಹಮಂತ್ರಿ ಇದ್ದರೂ ದಲಿತರಿಗೆ ರಕ್ಷಣೆ ನೀಡಲು ಆಗುತ್ತಿಲ್ಲ ಎಂದರೆ ಅವರು ಇದ್ದರೂ ಇಲ್ಲದಂತಾಗಿದೆ ಎಂದು ಮಾದಿಗ ಸಮಾಜದ ರಾಜ್ಯ ಉಪಾಧ್ಯಕ್ಷ ದೇವೇಂದ್ರನಾಥ್ ನಾದ ಆರೋಪಿಸಿದರು.

ದಲಿತ ಯುವಕ ರಾಕೇಶ್ ಕೊಲೆ ಖಂಡಿಸಿ ಜಿಲ್ಲಾ ಮಾದಿಗ ಸಮಾಜದ ವತಿಯಿಂದ ನಗರದ ನೇತಾಜಿ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಸಿ ಮಾತನಾಡಿದ ಅವರು, ಶಹಾಪೂರ ಪೇಟ ಬಡಾವಣೆಯಲ್ಲಿ ಏ.21 ರಂದು ತಡರಾತ್ರಿ ಮಾದಿಗ ಸಮಾಜಕ್ಕೆ ಸೇರಿದ ರಾಕೇಶ್ ಎಂಬ ದಲಿತ ಯುವಕನನ್ನು ನಿರ್ಭಯದಿಂದ ಅಮಾನುಷವಾಗಿ ಅವನ ತಂದೆ-ತಾಯಿಗಳ ಮುಂದೆ ಕೊಲೆ ಮಾಡಿದ ಘಟನೆ ತಲೆ ತಗ್ಗಿಸುವಂತೆ ಮಾಡಿದೆ ಎಂದು ದೂರಿದರು.ದಲಿತ ಯುವಕ ರೊಟ್ಟಿ ಕೇಂದ್ರ ನಡೆಸುತ್ತಿರುವ ಮುಸ್ಲಿಂ ಯುವಕ ಫಯಾಜ್ ಅವರ ಮನೆಗೆ ಏ.21ರಂದು ಹೋಗಿ ರೊಟ್ಟಿ ಕೇಳಿದಾಗ ತಿಳಿಸಿ ಅಲ್ಲಿಂದ ಕಳಿಸಿದ್ದಾರೆ. ಆದರೆ ಅಷ್ಟಕ್ಕೆ ನಿಲ್ಲದ ಈ ಜಿಹಾದಿ ಮನಸ್ಥಿತಿಯ ಯುವಕರು ಗುಂಪೊಂದನ್ನು ಕಟ್ಟಿಕೊಂಡು ದಲಿತ ಯುವಕನ ಮನೆಗೆ ಬಂದು ಅವನಿಗೆ ಜಾತಿ ನಿಂದನೆ ಮಾಡಿ ಮನಬಂದಂತೆ ತಳಿಸಿ ಅವನ ಪಾಲಕರ ಕಣ್ಣಮುಂದೆ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಆರೋಪಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜಿಹಾದಿ ಮನಸ್ಥಿಯ ವ್ಯಕ್ತಿಗಳು ಇಂತಹ ಹೀನ ಕೃತ್ಯ ನಡೆಯುತ್ತಿರುವುದು ಸಾಮಾನ್ಯವಾಗಿದೆ. ಸರ್ಕಾರ ಆದಷ್ಟು ಬೇಗ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

ಸರ್ಕಾರ ಮೃತರ ಕುಟುಂಬಕ್ಕೆ 25 ಲಕ್ಷ ರು. ಗಳು ಪರಿಹಾರ ನೀಡಿ. ಮೃತನ ತಾಯಿಗೆ ಸರ್ಕಾರಿ ನೌಕರಿ ಒದಗಿಸಬೇಕು ಮತ್ತು ಸರ್ಕಾರ ಕುಟುಂಬಕ್ಕೆ 2 ಎಕರೆ ಜಮೀನು ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.

ಈ ವೇಳೆ ಬಸವರಾಜ ಮೇತ್ರೆ ನಾಯ್ಕಲ್, ಲಿಂಗಪ್ಪ ಹತ್ತಿಮನಿ, ಹಣಮಂತ ಇಟಗಿ, ಸ್ವಾಮಿದೇವ ದಾಸನಕೇರಿ, ಗೋಪಾಲ ದಾಸನಕೇರಿ, ಮಲ್ಲಿಕಾರ್ಜುನ ಜೊಲ್ಲಪ್ಪನೋರ, ಸಾಬಣ್ಣ ಹೊರುಂಚ, ಶಿವಕುಮಾರ ಮುದ್ನಾಳ, ಚಂದ್ರಶೇಖರ ಕಡೇಚೂರು, ಸೈದಪ್ಪ ಕೋನೆಹಳ್ಳಿ, ಚಂದ್ರು, ಸೈದಪ್ಪ, ಸಂಜುಕುಮಾರ, ಸಾಬರೆಡ್ಡಿ, ಮರೆಪ್ಪ, ಸೈದಪ್ಪ, ಹಣಮಂತ, ಸಾಬಣ್ಣ ಗಡ್ಡೆಸುಗೂರ, ಕಾಶಿನಾಥ ನಾಟೇಕರ್, ಜಗದೀಶ ದಾಸನಕೇರಿ ಸೇರಿ ಅನೇಕ ದಲಿತ ಮುಖಂಡರು ಭಾಗಿಯಾಗಿದ್ದರು.

Share this article