ಬೆಲೆ ಏರಿಕೆ ನಡುವೆಯೂ ಹಬ್ಬದ ಸಾಮಗ್ರಿ ಖರೀದಿ ಭರಾಟೆ ಜೋರು

KannadaprabhaNewsNetwork |  
Published : Mar 30, 2025, 03:04 AM IST
ಯುಗಾದಿ ಹಬ್ಬದ ಹಿನ್ನಲೆ ದೊಡ್ಡಬಳ್ಳಾಪುರದ ಮಾರುಕಟ್ಟೆಯಲ್ಲಿ ಜನರಿಂದ ಖರೀದಿ ಭರಾಟೆ. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಬೆಲೆ ಏರಿಕೆಯ ಸಂಕಷ್ಟದ ನಡುವೆಯೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಯುಗಾದಿ ಹಬ್ಬದ ಸಂಭ್ರಮದ ಮನೆ ಮಾಡಿದೆ. ಕ್ರೋಧಿ ನಾಮ ಸಂವತ್ಸರಕ್ಕೆ ಶುಭ ವಿದಾಯವನ್ನು ಹೇಳಿ ವಿಶ್ವಾವಸು ಸಂವತ್ಸರವನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲು ಎಲ್ಲೆಡೆ ಸಿದ್ದತೆಗಳು ಪೂರ್ಣಗೊಂಡಿವೆ.

ದೊಡ್ಡಬಳ್ಳಾಪುರ: ಬೆಲೆ ಏರಿಕೆಯ ಸಂಕಷ್ಟದ ನಡುವೆಯೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಯುಗಾದಿ ಹಬ್ಬದ ಸಂಭ್ರಮದ ಮನೆ ಮಾಡಿದೆ. ಕ್ರೋಧಿ ನಾಮ ಸಂವತ್ಸರಕ್ಕೆ ಶುಭ ವಿದಾಯವನ್ನು ಹೇಳಿ ವಿಶ್ವಾವಸು ಸಂವತ್ಸರವನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲು ಎಲ್ಲೆಡೆ ಸಿದ್ದತೆಗಳು ಪೂರ್ಣಗೊಂಡಿವೆ.

ಪಂಚಾಗದ ಪ್ರಕಾರ ಯುಗಾದಿಯನ್ನು ಹೊಸ ವರ್ಷವಾಗಿ ಆಚರಿಸುವ ಸಂಪ್ರದಾಯವಿದ್ದು, ಪಾರಂಪರಿಕ ಹೊಸ ವರ್ಷಾಚರಣೆಗೆ ಜನತೆ ಸಜ್ಜುಗೊಂಡಿದ್ದಾರೆ. ಬೇವು-ಬೆಲ್ಲವನ್ನು ಸವಿದು ಬದುಕಿನ ಸೋಲು-ಗೆಲುವು, ಕಷ್ಟ-ನಷ್ಟ, ಸುಖ-ದುಃಖಗಳನ್ನು ಸಮಾನ ಮನೋಸ್ಥಿತಿಯಲ್ಲಿ ಸ್ವೀಕರಿಸಿ ಬದುಕಿನ ನೈಜ ಅನನ್ಯತೆಯನ್ನು ಪ್ರತಿಪಾದಿಸುವ ಸಾಂಕೇತಿಕ ಅರ್ಥವನ್ನು ಯುಗಾದಿ ಹೊಂದಿದೆ. ಮನೆ ಮನೆಗಳಲ್ಲಿ ತಳಿರು ತೋರಣಗಳನ್ನು ಕಟ್ಟಿ, ಹಬ್ಬದ ಸಂಭ್ರಮಕ್ಕೆ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ.

ಬೆಲೆ ಏರಿಕೆ ನಡುವೆಯೂ ಖರೀದಿ ಭರಾಟೆ:

ಈ ಬಾರಿ ವಿಶೇಷವಾಗಿ ದಿನಬಳಕೆ ವಸ್ತುಗಳ ಬೆಲೆ ಏರಿಕೆ, ಅಗತ್ಯ ವಸ್ತುಗಳು ದುಬಾರಿಗೊಂಡಿರುವ ಸಂಕಷ್ಟದ ಪರಿಸ್ಥಿತಿಯಲ್ಲೂ ಹಬ್ಬವನ್ನು ಆಚರಿಸುವ ಭರಾಟೆ ಕಳೆಗುಂದಿಲ್ಲ. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕೃಷ್ಣ ರಾಜೇಂದ್ರ ಮಾರುಕಟ್ಟೆ, ಬಯಲುಬಸವಣ್ಣ ಮಾರುಕಟ್ಟೆ, ಶಾಂತಿನಗರ ಮಾರುಕಟ್ಟೆಗಳೂ ಸೇರಿದಂತೆ ಡಿಕ್ರಾಸ್‌, ರೈಲು ನಿಲ್ದಾಣ, ಪ್ರವಾಸಿ ಮಂದಿರ ವೃತ್ತಗಳಲ್ಲಿ ಜನರು ಹಬ್ಬದ ಆಚರಣೆಗೆ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಮುಖ್ಯವಾಗಿ ಹೂವು-ಹಣ್ಣು, ಮಾವಿನ ಚಿಗುರು, ಬೇವಿನ ಹೂ, ತೆಂಗಿನಕಾಯಿ, ತರಕಾರಿಗಳ ಖರೀದಿ ಭರಾಟೆ ಕಂಡು ಬಂತು. ಹೂವಿನ ಬೆಲೆ ಕೊಂಚ ಏರಿಕೆಯಾಗಿದೆ. ತೆಂಗಿನಕಾಯಿ ಕೈಸುಡುತ್ತಿದೆ. ಮಾವಿನ ಚಿಗುರು-ಬೇವಿನ ಹೂಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಇದ್ದುದರಲ್ಲಿ ತರಕಾರಿ ಬೆಲೆ ಸ್ವಲ್ಪ ನಿಯಂತ್ರಣದಲ್ಲಿದೆ.

ದಿನಸಿ ಪದಾರ್ಥಗಳ ಖರೀದಿಗೆ ಜನರು ದೊಡ್ಡ ದೊಡ್ಡ ಡಿಪಾರ್ಟ್‌ಮೆಂಟಲ್‌ ಅಂಗಡಿಗಳನ್ನು ಅವಲಂಭಿಸಿದ್ದಾರೆ. ಡಿಮಾರ್ಟ್‌, ರಿಲಯನ್ಸ್‌ , ಮೋರ್‌ ನಂತಹ ಮಳಿಗೆಗಳಲ್ಲಿ ವ್ಯಾಪಕ ಜನಸಂದಣಿ ಕಂಡು ಬರುತ್ತಿದೆ. ಮಾರುಕಟ್ಟೆಗಳಲ್ಲಿ ಜನಜಾತ್ರೆ, ಜವಳಿ ಅಂಗಡಿಗಳಲ್ಲಿ ಹೆಚ್ಚಿನ ವ್ಯಾಪಾರ-ವಹಿವಾಟು ನಡೆಯುತ್ತಿದೆ.

ಯುಗಾದಿ-ರಂಜಾನ್‌ ಧಮಾಕ:

ಈ ಬಾರಿ ಹಿಂದುಗಳ ಹೊಸ ವರ್ಷ ಯುಗಾದಿ ಹಾಗೂ ಮುಸಲ್ಮಾನರ ಪ್ರಮುಖ ಹಬ್ಬ ರಂಜಾನ್‌ ಜೊತೆ ಜೊತೆಯಲ್ಲೇ ಬಂದಿರುವುದು ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಹೆಚ್ಚಲು ಮತ್ತೊಂದು ಪ್ರಮುಖ ಕಾರಣವಾಗಿದೆ. ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ವ್ಯಾಪಾರ-ವಹಿವಾಟು ಉತ್ತಮವಾಗಿದೆ ಎಂಬುದು ವ್ಯಾಪಾರಿಗಳ ಅಭಿಪ್ರಾಯವಾಗಿದೆ.

ಪೊಲೀಸರಿಂದ ಶಾಂತಿ ಸಭೆ:

ಈ ಮಧ್ಯೆ ಸಾಮಾಜಿಕ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ವಿವಿಧ ಸಮುದಾಯಗಳ ಮುಖಂಡರನ್ನು ಆಹ್ವಾನಿಸಿ ಶಾಂತಿ ಸಭೆ ನಡೆಸಿದೆ. ಎರಡು ಪ್ರಮುಖ ಹಬ್ಬಗಳು ಒಂದೇ ಹಂತದಲ್ಲಿ ಬಂದಿರುವ ಕಾರಣ ಸಾಮಾಜಿಕ ಸಾಮರಸ್ಯವನ್ನು ಕಾಯ್ದುಕೊಂಡು ಧಾರ್ಮಿಕ ಸಮನ್ವಯದಿಂದ ಹಬ್ಬವನ್ನು ಆಚರಿಸಲು ಪೊಲೀಸರು ಮನವಿ ಮಾಡಿದ್ದಾರೆ.29ಕೆಡಿಬಿಪಿ1- ಯುಗಾದಿ ಹಬ್ಬದ ಹಿನ್ನಲೆ ದೊಡ್ಡಬಳ್ಳಾಪುರದ ಮಾರುಕಟ್ಟೆಯಲ್ಲಿ ಜನರಿಂದ ಖರೀದಿ ಭರಾಟೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ